ವಾಜಪೇಯಿ ಬಗ್ಗೆ 'ಅಹಿತಕರ' ಪ್ರಶ್ನೆ ಕೇಳಿದ ರಾಜ್ಯಸಭಾ ಟಿವಿ ನಿರೂಪಕಿಗೆ 'ಶಿಕ್ಷೆ'

Update: 2018-09-17 11:17 GMT

ಹೊಸದಿಲ್ಲಿ, ಸೆ.17 : ರಾಜ್ಯಸಭಾ ಟಿವಿ ನಿರೂಪಕಿ ನೀಲು ವ್ಯಾಸ್ ಅವರು ಮಾಜಿ ಪ್ರಧಾನಿ ವಾಜಪೇಯಿ ನಿಧನರಾದ ದಿನವಾದ ಆಗಸ್ಟ್ 16ರಂದು ಪ್ರಸಾರವಾದ ಕಾರ್ಯಕ್ರಮದ ಅತಿಥಿಯಾಗಿದ್ದ ವಾಜಪೇಯಿಯವರ ಜೀವನ ವೃತ್ತಾಂತ 'ಹಾರ್ ನಹೀಂ ಮಾನೂಂಗ' ಇದರ ಲೇಖಕ ವಿಜಯ್ ತ್ರಿವೇದಿಯವರಲ್ಲಿ, ಮಾಜಿ ಪ್ರಧಾನಿಯು 1942ರಲ್ಲಿ ಬ್ರಿಟಿಷ್ ಸರಕಾರದ ವಿರುದ್ಧದ ಆಂದೋಲನದಲ್ಲಿ ಭಾಗಿಯಾಗುವುದಿಲ್ಲ ಎಂದು ಲಿಖಿತ ಹೇಳಿಕೆಗೆ ಸಹಿ ಹಾಕಿರುವ ಬಗ್ಗೆ ಪ್ರಶ್ನಿಸಿರುವುದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಅದೆಷ್ಟು ಸಿಟ್ಟು ಬರಿಸಿತ್ತೆಂದರೆ ವಾಹಿನಿ ಕ್ಷಮೆ ಕೋರುವಂತೆ ಮಾಡಲಾಯಿತಲ್ಲದೆ ನಿರೂಪಕಿಯೂ ತರಾಟೆಗೊಳಗಾಗಿ ಆಕೆ ಈಗ ಯಾವುದೇ ಕೆಲಸವಿಲ್ಲದೆ ಕೂರುವಂತಾಗಿದೆ.

ಘಟನೆ ನಡೆದು ತಿಂಗಳ ಮೇಲಾದರೂ ನೀಲು ವ್ಯಾಸ್ ಅವರು ಈಗಲೂ ಯಾವುದೇ ಕೆಲಸವಿಲ್ಲದೆ ಕುಳಿತಿದ್ದಾರೆ. ಆ ನಿರ್ದಿಷ್ಟ ಕಾರ್ಯಕ್ರಮದ ವೀಡಿಯೋ ರಾಜ್ಯಸಭಾ ಟಿವಿಯ ಯೂಟ್ಯೂಬ್ ಚಾನೆಲ್ ನಿಂದಲೂ ತೆಗೆಯಲಾಗಿದೆ. ಹಿರಿಯ ರಾಜ್ಯಸಭಾ ಅಧಿಕಾರಿಯೊಬ್ಬರು ತಮಗೆ ಸಂದೇಶ ಕಳುಹಿಸಿ ತಮ್ಮ ಕೆಲಸದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಆಕೆ ದೂರಿದ ಎರಡು ವಾರಗಳ ನಂತರ ಈ ಬೆಳವಣಿಗೆ ನಡೆದಿತ್ತು.

ರಾಜ್ಯಸಭಾ ಟಿವಿಗೆ ಪ್ರತ್ಯೇಕ ಮುಖ್ಯಸ್ಥರು ಹಾಗೂ ಸಿಇಒ ಇದ್ದು ರಾಜ್ಯಸಭಾ ಅಧಿಕಾರಿಗಳು ಸಂಪಾದಕೀಯ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸುವಂತಿಲ್ಲ.
ಆಗಸ್ಟ್ 22ರಂದು ರಾಜ್ಯಸಭಾ ಟಿವಿಯ ಮುಖ್ಯ ಸಂಪಾದಕ ರಾಹುಲ್ ಮಹಾಜನ್ ಅವರು ನೀಲು ವ್ಯಾಸ್ ಗೆ ನೀಡಿದ ಮೆಮೋದಲ್ಲಿ ವಾಜಪೇಯಿಯವರ ಬಗ್ಗೆ ಇಂತಹ ಒಂದು ವಿಚಾರ ಎತ್ತಿದ್ದರಿಂದ ವಾಹಿನಿಯು ಮುಜುಗರಕ್ಕೊಳಗಾಗಿ ಕ್ಷಮೆಯನ್ನೂ ಯಾಚಿಸುವಂತಾಗಿತ್ತು ಎಂದು ಹೇಳಲಾಗಿತ್ತಲ್ಲದೆ ಏಳು ದಿನಗಳೊಳಗಾಗಿ ಉತ್ತರ ನೀಡುವಂತೆ ಅವರಿಗೆ ಸೂಚಿಸಲಾಗಿತ್ತು. ಎರಡು ವಾರಗಳ ತನಕ ಆಕೆ ಯಾವುದೇ ಕಾರ್ಯಕ್ರಮದ ನಿರೂಪಕಿಯಾಗಲು ಸಾಧ್ಯವಿಲ್ಲವೆಂದೂ ಮೌಖಿಕವಾಗಿ ಹೇಳಲಾಗಿತ್ತು.

ಟಿವಿ ಕಾರ್ಯಕ್ರಮದಲ್ಲಿ ನೀಲು ವ್ಯಾಸ್ ಅವರು ಅತಿಥಿಗಳಾಗಿದ್ದ ವಿಜಯ್ ತ್ರಿವೇದಿಗೆ ಕೇಳಿದ ಪ್ರಶ್ನೆ ಹೀಗಿತ್ತು "ಅವರು ತಮ್ಮ ರಾಷ್ಟ್ರೀಯವಾದಕ್ಕೆ ಹೆಸರಾದವರಾಗಿರುವಾಗ ಬ್ರಿಟಿಷರ ವಿರುದ್ಧ ಘೋಷಣೆಗಳನ್ನು ಕೂಗಲು ಸಾಧ್ಯವಿಲ್ಲದೇ ಇರುವ ವಿಚಾರದಲ್ಲಿ ಹೊಂದಾಣಿಕೆ ಮಾಡಲು ಅವರಿಗೆ ಹೇಗೆ ಸಾಧ್ಯವಾಯಿತು?.''  ಈ ಪ್ರಶ್ನೆಗೆ ಯಾವುದೇ ಆಕ್ಷೇಪ ಸೂಚಿಸದ ತ್ರಿವೇದಿ, "ವಾಜಪೇಯಿಯವರನ್ನು ಪೊಲೀಸರು ಸೆರೆ ಹಿಡಿದಾಗ ಅವರ ವಯಸ್ಸು ಕೇವಲ 17 ಹಾಗೂ ಒಬ್ಬ ಪ್ರಮುಖ ವ್ಯಕ್ತಿಯ ಒತ್ತಡಕ್ಕೆ ಮಣಿದು ಅವರು ಸಹಿ ಹಾಕಿದ್ದರು. ವಾಜಪೇಯಿ ಈ ಬಗ್ಗೆ ನಂತರ ಮಾತನಾಡಿಲ್ಲ ಯಾ ದೃಢೀಕರಿಸಿಲ್ಲ, ಆದರೆ ಇದನ್ನು ಆಧಾರವಾಗಿಟ್ಟುಕೊಂಡು ಅವರ ರಾಷ್ಟ್ರಭಕ್ತಿಯನ್ನು ಪ್ರಶ್ನಿಸುವ ಹಾಗಿಲ್ಲ'' ಎಂದು ಹೇಳಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News