ಕೇಂದ್ರ ಸಚಿವ ಅನಂತ್ ಕುಮಾರ್ ತೀವ್ರ ಅಸ್ವಸ್ಥ: ಲಂಡನ್ ನಲ್ಲಿ ಚಿಕಿತ್ಸೆ

Update: 2018-09-17 15:26 GMT

ಹೊಸದಿಲ್ಲಿ, ಸೆ. 17: ಗೋವಾ ಮುಖ್ಯಮಂತ್ರಿ ಹಾಗು ಪಕ್ಷದ ಹಿರಿಯ ಮುಖಂಡ ಮನೋಹರ್ ಪರಿಕ್ಕರ್ ತೀವ್ರ ಅಸ್ವಸ್ಥರಾಗಿರುವ ಬೆನ್ನಿಗೇ ಬಿಜೆಪಿ ಹಾಗೂ ಕೇಂದ್ರ ಸರಕಾರಕ್ಕೆ ಮತ್ತೊಂದು ಆಘಾತ ಬಂದೆರಗಿದೆ. ಪಕ್ಷದ ಹಿರಿಯ ಮುಖಂಡ, ಕೇಂದ್ರ ಸಚಿವ ಕರ್ನಾಟಕದ ಅನಂತ್ ಕುಮಾರ್ ಅವರು ಈಗ ತೀವ್ರ ಅನಾರೋಗ್ಯಕ್ಕೊಳಗಾಗಿ ಲಂಡನ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು thewire.in ವರದಿ ಮಾಡಿದೆ. 

ಮನೋಹರ್ ಪರಿಕ್ಕರ್ ಅವರಂತೆ ಅನಂತ್ ಕುಮಾರ್ ಅವರಿಗೂ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಇರಬಹುದೆಂದು ಶಂಕಿಸಲಾಗಿದ್ದು, ಖಚಿತಪಡಿಸಲು ಉನ್ನತ ಮಟ್ಟದ ಪರೀಕ್ಷೆಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ. 

ಮೋದಿ ಸರ್ಕಾರದಲ್ಲಿ ಸಂಸದೀಯ ಮತ್ತು ರಸಗೊಬ್ಬರ ಖಾತೆ ಸಚಿವರಾಗಿರುವ ಅನಂತ್ ಕುಮಾರ್ ಪಕ್ಷದ ಹಿರಿಯ ಮುಖಂಡರಾಗಿದ್ದು ಈ ಹಿಂದಿನ ವಾಜಪೇಯಿ ಸರಕಾರದಲ್ಲೂ ಸೇವೆ ಸಲ್ಲಿಸಿರುವವರು. ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸತತವಾಗಿ ಚುನಾವಣೆ ಗೆಲ್ಲುತ್ತಾ ಬಂದಿರುವ ಅನಂತ್ ಕುಮಾರ್ 2014 ರಲ್ಲಿ ಆಧಾರ್ ಮುಖ್ಯಸ್ಥ ನಂದನ್ ನಿಲೇಕಣಿಯವರನ್ನು ಸೋಲಿಸಿದ್ದರು. 

ಕಳೆದ ಎರಡು ವಾರಗಳಿಂದಲೇ ಅನಂತ್ ಕುಮಾರ್ ಲಂಡನ್ ನಲ್ಲಿದ್ದು, ಈಗ ಅಗತ್ಯ ಬಿದ್ದರೆ ಅವರನ್ನು ಅಮೆರಿಕಕ್ಕೂ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಳೆದ ಕೆಲವು ವಾರಗಳಿಂದಲೇ ಅನಂತ್ ಕುಮಾರ್ ತಮ್ಮ ಇಲಾಖೆಯ ಕಚೇರಿಗೆ ಭೇಟಿ ನೀಡುತ್ತಿಲ್ಲ ಎಂದು ಹೇಳಲಾಗಿದ್ದು ಈವರೆಗೆ ಅವರ ಖಾತೆಯನ್ನು ಪ್ರಧಾನಿ ಮೋದಿ ಯಾರಿಗೂ ವಹಿಸಿಲ್ಲ. 

ಕೆಲವು ಸಮಯದ ಹಿಂದಷ್ಟೇ ಹಿರಿಯ ಸಚಿವ ಅರುಣ್ ಜೇಟ್ಲಿ ಮೂತ್ರಕೋಶದ ಗಂಭೀರ ಸಮಸ್ಯೆಗೆ ತುತ್ತಾಗಿ  ಕಿಡ್ನಿ ಕಸಿ ಮಾಡಿಸಿಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಸುದೀರ್ಘ ಕಾಲ ಅವರ ಖಾತೆಯನ್ನು ಪಿಯೂಷ್ ಗೋಯಲ್ ಅವರು ವಹಿಸಿಕೊಂಡಿದ್ದರು. ಇದೀಗ ಅನಂತ್ ಕುಮಾರ್ ಅವರ ಸರದಿ. ಗೋವಾದಲ್ಲಿ ಈಗಾಗಲೇ ಮುಖ್ಯಮಂತ್ರಿ ಬದಲಾಯಿಸಲು ಬಿಜೆಪಿಯ ಕೇಂದ್ರ ತಂಡ ಅಲ್ಲಿಗೆ ಭೇಟಿ ನೀಡಿದೆ.

ಸಚಿವಾಲಯದಿಂದ ನಿರಾಕರಣೆ

ಸಚಿವ ಅನಂತ ಕುಮಾರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಯನ್ನು ಅವರ ಕಚೇರಿ ತಳ್ಳಿಹಾಕಿದೆ. ಸಚಿವರು ಲಂಡನ್‌ಗೆ ತೆರಳಿರುವುದು ನಿಜ, ಆದರೆ ಅವರಲ್ಲಿ ಸೋದರ ಸಂಬಂಧಿಯ ಮನೆಯಲ್ಲಿದ್ದು ಶೀಘ್ರದಲ್ಲೇ ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಬೆಂಗಳೂರಿನಲ್ಲಿರುವ ಸಚಿವರ ಕಚೇರಿ ತಿಳಿಸಿದೆ.

ಕಳೆದ ಮೇಯಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ತೀವ್ರ ಕೆಮ್ಮಿನ ಸಮಸ್ಯೆಯಿಂದ ಕುಮಾರ್ ಬಳಲುತ್ತಿದ್ದರು. ಚುನಾವಣೆ ಮುಗಿದ ನಂತರ ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅವರು ಯೋಚಿಸಿದ್ದರು ಎಂದು ಕಚೇರಿ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News