ತಾಂತ್ರಿಕ ದೋಷವಿದ್ದ ವಿಮಾನವನ್ನು ಪ್ರತಿಕೂಲ ಹವಾಮಾನದ ನಡುವೆಯೂ ಸುರಕ್ಷಿತವಾಗಿ ಇಳಿಸಿದ ಏರ್ ಇಂಡಿಯಾ ಪೈಲಟ್

Update: 2018-09-17 17:37 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಸೆ.17: ಅಮೆರಿಕದಲ್ಲಿ ಎದುರಾದ ಹವಾಮಾನ ವೈಪರಿತ್ಯ, ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ಸಮಸ್ಯೆ ಮತ್ತು ಇಂಧನ ಕೊರತೆ, ಇವೆಲ್ಲವನ್ನೂ ಮೆಟ್ಟಿನಿಂತು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 370 ಪ್ರಯಾಣಿಕರ ಜೀವವನ್ನು ತನ್ನ ಬುದ್ಧಿಶಕ್ತಿಯಿಂದ ಉಳಿಸಿದ ಏರ್ ಇಂಡಿಯಾ ವಿಮಾನದ ಪೈಲಟ್ ಸದ್ಯ ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದಾರೆ.

ಸೆಪ್ಟಂಬರ್ 11ರಂದು ಏರ್ ಇಂಡಿಯಾ ಎಐ-101 ವಿಮಾನ ದಿಲ್ಲಿಯಿಂದ ನ್ಯೂಯಾರ್ಕ್‌ಗೆ 370 ಪ್ರಯಾಣಿಕರನ್ನು ಹೊತ್ತು ಪ್ರಯಾಣ ಬೆಳೆಸಿತ್ತು.

ಅಮೆರಿಕದ ಜಾನ್.ಎಫ್.ಕೆನೆಡಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನ ಹವಾಮಾನ ವೈಪರಿತ್ಯದ ಕಾರಣ ಇಳಿಯಲು ಕಷ್ಟಸಾಧ್ಯವಾಗಿತ್ತು. ಈ ಮಧ್ಯೆ ವಿಮಾನದಲ್ಲಿ ಇಂಧನ ಕೊರತೆಯೂ ಉಂಟಾಗುವ ಜೊತೆಗೆ ಹಲವು ತಾಂತ್ರಿಕ ದೋಷಗಳೂ ತಲೆದೋರಿದವು. ಈ ಎಲ್ಲಾ ವಿಷಯಗಳನ್ನು ಪೈಲಟ್, ವಿಮಾನ ನಿಲ್ದಾಣದಲ್ಲಿರುವ ನಿಯಂತ್ರಣ ಕೊಠಡಿಗೆ ತಿಳಿಸುತ್ತಿದ್ದರು. ವಿಮಾನ ನಿಲ್ದಾಣದ ಆಕಾಶದಲ್ಲಿ ದಟ್ಟ ಮೋಡಗಳು ಆವರಿಸುವ ಜೊತೆಗೆ ವಿಮಾನಗಳ ಲ್ಯಾಂಡಿಂಗ್ ವೇಳೆ ನಿಖರತೆಯನ್ನು ಕಾಯಲು ನೆರವಾಗಲೆಂದು ಅಳವಡಿಸಲಾಗುವ ಮೂರು ಇನ್ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಮ್‌ಗಳು ಕೂಡಾ ವಿಫಲವಾಗುವ ಮೂಲಕ ಏನೂ ಮಾಡಲಾಗದ ಸ್ಥಿತಿಗೆ ಪೈಲಟ್ ತಲುಪಿದ್ದರು. ಆದರೆ ಯಾವ ಹಂತದಲ್ಲೂ ದೃತಿಗೆಡದ ಪೈಲಟ್ ಅಂತಿಮವಾಗಿ ವಿಮಾನವನ್ನು ನೆವಾರ್ಕ್‌ನಲ್ಲಿರುವ ಪರ್ಯಾಯ ವಿಮಾನ ನಿಲ್ದಾಣದಲ್ಲಿ ಇಳಿಸುವಲ್ಲಿ ಯಶಸ್ವಿಯಾಗುವ ಮೂಲಕ 370 ಜೀವಗಳನ್ನು ಉಳಿಸಿದ್ದಾರೆ. ಇಂಥ ಸಾಧನೆಯನ್ನು ಮಾಡುವಾಗ ಪೈಲಟ್ ಉಪಯೋಗಿಸಿದ ತಂತ್ರಗಳನ್ನು ಏರ್ ಇಂಡಿಯಾ ತನ್ನ ಪೈಲಟ್‌ಗಳಿಗೆ ನೀಡುವ ತರಬೇತಿಯ ವೇಳೆ ಕಲಿಸುವುದಿಲ್ಲ. ಅಷ್ಟು ಮಾತ್ರವಲ್ಲ ಏರ್ ಇಂಡಿಯಾಗೆ ವಿಮಾನಗಳನ್ನು ಪೂರೈಸುವ ಬೋಯಿಂಗ್ ಸಂಸ್ಥೆಯ ಕೈಪಿಡಿಯಲ್ಲೂ ಈ ತಂತ್ರದ ಬಗ್ಗೆ ಉಲ್ಲೇಖವಿಲ್ಲ ಎಂದು ಆಂಗ್ಲ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಇಂಥ ಘಟನೆ ನಡೆದಿರುವುದು ಸತ್ಯ ಎಂದು ಒಪ್ಪಿಕೊಂಡಿರುವ ಏರ್ ಇಂಡಿಯಾ ವಕ್ತಾರ ಪ್ರವೀಣ್ ಭಟ್ನಾಗರ್, ಘಟನೆಗೆ ಕಾರಣವೇನು ಎಂಬುದನ್ನು ವಿಮಾನ ಸುರಕ್ಷತೆ ಇಲಾಖೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News