ಪೌರಕಾರ್ಮಿಕರಿಲ್ಲದ ಸ್ವಚ್ಛತೆ! ಶಾಲೆಗಳ ಬದಲಿಗೆ ಗೋಶಾಲೆ!

Update: 2018-09-18 04:59 GMT

ಒಂದೆಡೆ ನರೇಂದ್ರ ಮೋದಿಯವರ ಬಹು ಚರ್ಚಿತ ಸ್ವಚ್ಛತಾ ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ. ಮಗದೊಂದೆಡೆ ಗೋವುಗಳನ್ನು ಸಾಕಲು ಗೋಶಾಲೆಗಳಿಗಾಗಿ ಸರಕಾರ ಕೋಟ್ಯಂತರ ಹಣವನ್ನು ಚೆಲ್ಲುತಿರುವ ವರದಿಗಳು ಪುಂಖಾನುಪುಂಖವಾಗಿ ಹೊರ ಬೀಳುತ್ತಿವೆ. ಇದೇ ಸಂದರ್ಭದಲ್ಲಿ ಸರಕಾರದ ಈ ಯೋಜನೆಗಳನ್ನು ಅಣಕಿಸುವ ಎರಡು ವರದಿಗಳು ಮಾಧ್ಯಮಗಳ ಮೂಲೆಯಲ್ಲಿ ಪ್ರಕಟಗೊಂಡಿವೆ. ಒಂದು, ಛತ್ತೀಸ್‌ಗಡದಲ್ಲಿ ಶೌಚಗುಂಡಿಗೆ ಇಳಿದು ಐವರು ಮೃತಪಟ್ಟಿದ್ದಾರೆ. ಇನ್ನೊಂದು, ಈ ದೇಶದಲ್ಲಿ 13,511 ಗ್ರಾಮಗಳಲ್ಲಿ ಶಾಲೆಗಳೇ ಇಲ್ಲ ಎನ್ನುವ ಅಂಕಿಅಂಶಗಳು ಬಹಿರಂಗವಾಗಿದೆ. ಅತ್ಯಂತ ಮಹತ್ವಪೂರ್ಣ ಅಂಶವೆಂದರೆ, ಶಾಲೆಗಳೇ ಇಲ್ಲದ ಗ್ರಾಮಗಳಲ್ಲಿ ಉತ್ತರ ಪ್ರದೇಶ ಪ್ರಮುಖವಾಗಿ ಗುರುತಿಸಿಕೊಂಡಿದೆ. ಆದಿತ್ಯನಾಥ್ ಮುಖ್ಯಮಂತ್ರಿಯಾದ ದಿನಗಳಿಂದ ಗೋಶಾಲೆಗಳ ಕುರಿತಂತೆ ಅವರಿಗಿರುವ ಕಾಳಜಿಗಳನ್ನು ಈ ಮಾಹಿತಿ ವ್ಯಂಗ್ಯ ಮಾಡುತ್ತಿದೆ.

ಸ್ವಚ್ಛತಾ ಆಂದೋಲನ ಈ ದೇಶಕ್ಕೆ ಹೊಸತೇನೂ ಅಲ್ಲ. ಈ ದೇಶದ ರಸ್ತೆ, ಚರಂಡಿಗಳನ್ನು ಶುಚಿಗೊಳಿಸುವುದಕ್ಕಾಗಿಯೇ ಜಾತಿಯೊಂದನ್ನು ಸೃಷ್ಟಿಸಿದ ಸಮಾಜ ನಮ್ಮದು. ಅದಕ್ಕಾಗಿ ಆ ಸಮುದಾಯ ತಮ್ಮ ಆರೋಗ್ಯ, ಭವಿಷ್ಯ ಮಾತ್ರವಲ್ಲ ತಮ್ಮ ಪ್ರಾಣವನ್ನೇ ಅರ್ಪಿಸುತ್ತಾ ಬಂದಿದೆ. ಈ ದೇಶದ ದೇವಸ್ಥಾನಗಳು, ಪುಣ್ಯ ಕ್ಷೇತ್ರಗಳ ಪಾದ ಬುಡದಲ್ಲೇ ಅತಿ ಹೆಚ್ಚು ಕೊಳಚೆಯನ್ನು ಕಂಡು ದಿಗ್ಮೂಢರಾದ ಗಾಂಧೀಜಿಯವರು, ‘ಇಲ್ಲಿ ನನಗೆ ದೇವರನ್ನು ಕಾಣಲು ಸಾಧ್ಯವಿಲ್ಲ’ ಎಂದು ಘೋಷಿಸಿ, ಇಂತಹ ಕ್ಷೇತ್ರಗಳಿಗೆ ಭೇಟಿ ನೀಡುವುದನ್ನೇ ಕೈ ಬಿಟ್ಟರು. ಗಾಂಧೀಜಿ ದೇಶದ ಸ್ವಾತಂತ್ರ ಹೋರಾಟದ ಬಾವುಟವನ್ನೂ, ಕೈಯಲ್ಲಿ ಪೊರಕೆಯನ್ನೂ ಜೊತೆಯಾಗಿ ತೆಗೆದುಕೊಂಡರು. ಅವರು ಭಾಗವಹಿಸಿದ ಮೊತ್ತ ಮೊದಲ ಕಾಂಗ್ರೆಸ್ ಸಮ್ಮೇಳನದಲ್ಲಿ ಶೌಚಾಲಯಗಳು ಗಬ್ಬು ನಾರುವುದನ್ನು ಕಂಡು ತಾವೇ ಅದನ್ನು ಶುಚಿಗೊಳಿಸತೊಡಗಿದರು.

ಕಾಂಗ್ರೆಸ್‌ನೊಳಗೆ ಅವರ ಕಾರ್ಯಾಚರಣೆ ಆರಂಭವಾದುದೇ ಪೊರಕೆಯ ಮೂಲಕ. ಸ್ವಚ್ಛತೆಯ ಕಾರ್ಯವನ್ನು ಗೌರವಿಸಬೇಕು ಎಂದು ಕರೆ ನೀಡಿದರು. ಅದು ನಿಕೃಷ್ಟ ಕೆಲಸವಲ್ಲ ಎನ್ನುವುದನ್ನೂ ಘೋಷಿಸಿದರು. ಅಂತೆಯೇ ಭಂಗಿಗಳ ಕುರಿತಂತೆ ಅವರು ಆಡಿದ ಮಾತುಗಳು ವಿವಾದವಾದುದೂ ಅಷ್ಟೇ ಸತ್ಯ. ಆದರೆ ಅಂತಹ ಮಾತನ್ನು ಆಡುವಾಗ, ಸ್ವಚ್ಛತೆ ತುಂಬಾ ಘನತರವಾದ ಕೆಲಸವೆಂಬ ಮನಸ್ಥಿತಿಯನ್ನು ಹೊಂದಿ ಅವರು ಮಾತನಾಡಿದ್ದರು. ಇಂದು ನರೇಂದ್ರ ಮೋದಿಯವರು ಗಾಂಧೀಜಿಯ ಹೆಸರಿನಲ್ಲಿ ಮತ್ತೆ ಸ್ವಚ್ಛತೆಯ ಮಂತ್ರ ಜಪಿಸುತ್ತಿದ್ದಾರೆ. ‘ಸ್ವಚ್ಛತೆಯೇ ಸೇವೆ’ ಎಂದು ಘೋಷಿಸಿ ಪೊರಕೆ ಹಿಡಿದು ಮಾಧ್ಯಮಗಳ ಕ್ಯಾಮರಾ ಮುಂದೆ ನಿಂತಿದ್ದಾರೆ. ಅವರ ಈ ಆಂದೋಲನಕ್ಕೆ ಈಗಾಗಲೇ ಮೂರು ವರ್ಷ ದಾಟಿದೆ. ಇದೇ ಸಂದರ್ಭದಲ್ಲಿ, ಸ್ವಚ್ಛತಾ ಆಂದೋಲನ ಈ ಅವಧಿಯಲ್ಲಿ ಸಾಧಿಸಿದ ಸಾಧನೆಗಳನ್ನು ವಿವರಿಸಲು ಅವರು ವಿಫಲರಾಗಿದ್ದಾರೆ. ಗಂಗಾನದಿಯ ಸ್ವಚ್ಛತೆಗಾಗಿ ಸಹಸ್ರಾರು ಕೋಟಿ ರೂಪಾಯಿ ಸುರಿದರೂ, ಇನ್ನೂ ಅದರ ನೀರು ಕುಡಿಯುವುದಕ್ಕೆ ಅರ್ಹವಾಗಿಲ್ಲ. ಇದರ ಕಾರಣಗಳನ್ನು ಹುಡುಕಲು ಅವರಿಗೆ ಸಾಧ್ಯವಾಗಿಲ್ಲ. ಸ್ವಚ್ಛತೆಯ ಹೆಸರಿನಲ್ಲಿ ಸಂಗ್ರಹಿಸಿದ ತೆರಿಗೆಗಳು ಯಾರ ಜೋಳಿಗೆ ಸೇರುತ್ತಿವೆ? ಈ ನಾಲ್ಕು ವರ್ಷಗಳಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಕೆಳಜಾತಿಯ ಜನರ ಬದುಕಿನಲ್ಲಿ, ಪೌರಕಾರ್ಮಿಕರ ಜೀವನ ಮಟ್ಟದಲ್ಲಿ ಯಾವ ಸುಧಾರಣೆಯಾಗಿದೆ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕ ತೊಡಗಿದರೆ ನಮಗೆ ನಿರಾಸೆ ಕಟ್ಟಿಟ್ಟ ಬುತ್ತಿ.

ಸ್ವಚ್ಛತಾ ಆಂದೋಲನ ಯಶಸ್ವಿಯಾಗುವುದು ರಾಜಕಾರಣಿಗಳು ಸಾರ್ವಜನಿಕವಾಗಿ ಪೊರಕೆ ಹಿಡಿದು ನಾಟಕ ಮಾಡುವುದರಿಂದ ಅಲ್ಲ. ಆಂದೋಲನಕ್ಕಾಗಿ ಸರಕಾರ ಬಿಡುಗಡೆ ಮಾಡುವ ಕೋಟ್ಯಂತರ ಹಣವನ್ನು ಅಧಿಕಾರಿಗಳು ಮಜಾ ಮಾಡುವುದರಿಂದಲೂ ಈ ದೇಶದ ರಸ್ತೆ, ಬೀದಿಗಳು ಶುಚಿಯಾಗಲಾರವು. ಈ ದೇಶವನ್ನು ನೂರಾರು ವರ್ಷಗಳಿಂದ ಗುಡಿಸುತ್ತಾ ಬಂದಿರುವ, ನಿಜವಾದ ಅರ್ಥದಲ್ಲಿ ಈ ಆಂದೋಲನದ ಅನಿವಾರ್ಯ ಭಾಗವಾಗಿರುವ, ಅದನ್ನೇ ಬದುಕಿನ ವೃತ್ತಿಯಾಗಿಸಿರುವ ಜನರ ಬದುಕನ್ನು ಎತ್ತರಿಸುವುದರಿಂದಷ್ಟೇ ಆಂದೋಲನ ಯಶಸ್ವಿಯಾಗಲು ಸಾಧ್ಯ. ಒಂದೆಡೆ ಸ್ವಚ್ಛತಾ ಆಂದೋಲನಕ್ಕಾಗಿ ಕೋಟ್ಯಂತರ ರೂ. ಸಂಗ್ರಹವಾಗುತ್ತಿದ್ದರೆ, ಇನ್ನೊಂದೆಡೆ ದೇಶದ ಪೌರ ಕಾರ್ಮಿಕರ ವೇತನವನ್ನು ನೀಡಲು ಅಧಿಕಾರಿಗಳು ಸತಾಯಿಸುತ್ತ್ತಿದ್ದಾರೆ. ತಾವು ತಮ್ಮ ಬದುಕನ್ನು ಒತ್ತೆ ಇಟ್ಟು ಮಾಡಿದ ಕೆಲಸದ ಕೂಲಿ ಪಡೆಯಲು ಬೀದಿಯಲ್ಲಿ ಧರಣಿ ಕೂರುವಂತಹ ಸನ್ನಿವೇಶ ದೇಶಾದ್ಯಂತ ಪುರಸಭೆ, ಮಹಾನಗರಪಾಲಿಕೆಗಳಲ್ಲಿ ಇವೆ. ಈ ದೇಶದ ಗುತ್ತಿಗೆ ಕಾರ್ಮಿಕರು ಬೀದಿಯನ್ನು ಗುಡಿಸುವಾಗ, ಚರಂಡಿಗೆ ಇಳಿಯುವಾಗ ಅವರಿಗೆ ಜೀವರಕ್ಷಕ ಧಿರಿಸುಗಳು ಸಿಗುವುದಿಲ್ಲ. ಕನಿಷ್ಠ ಅವರಿಗೆ ತಿಂಗಳಿಗೊಮ್ಮೆ ಬೂಟುಗಳನ್ನು, ಕೈಗವಚಗಳನ್ನು ಒದಗಿಸಬೇಕು. ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಬೇಕು. ಅವರ ಆರೋಗ್ಯ ಸ್ಥಿತಿಗತಿಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇವೆಲ್ಲವನ್ನು ಬದಿಗಿಟ್ಟು ಸ್ವಚ್ಛತಾ ಆಂದೋಲನ ಮಾಡಲು ಹೊರಟರೆ, ಒಂದು ದಿನದ ಪ್ರಹಸನ ಮಾತ್ರ ಆದೀತು. ಮೋದಿಯವರ ಸ್ವಚ್ಛತಾ ಆಂದೋಲನದ ವಾಸ್ತವವೇನು ಎನ್ನುವುದನ್ನು ನಾವು ಶೌಚಗುಂಡಿಯಲ್ಲಿ ಹೆಣವಾಗಿ ತೇಲುತ್ತಿರುವ ಪೌರಕಾರ್ಮಿಕರ ಮೂಲಕ ನೋಡಬಹುದಾಗಿದೆ.

 ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಗೋಶಾಲೆಗಳಿಗಾಗಿ ಅಲ್ಲಿನ ಸರಕಾರ 80 ಕೋಟಿಗೂ ಅಧಿಕ ಹಣವನ್ನು ಚೆಲ್ಲಿವೆ. ಇನ್ನಷ್ಟು ಹಣವನ್ನು ಚೆಲ್ಲುತ್ತಲೇ ಇದೆ. ಇದೇ ಸಂದರ್ಭದಲ್ಲಿ ಅದೇ ಉತ್ತರ ಪ್ರದೇಶ, ಶಾಲೆಗಳಿಲ್ಲದ ಗ್ರಾಮಗಳ ಕಾರಣಕ್ಕಾಗಿ ದೇಶದಲ್ಲಿ ಗುರುತಿಸಿಕೊಂಡಿದೆ. ಆದರೆ ಈ ಕುರಿತಂತೆ ಸರಕಾರ ಚಿಂತೆ ಮಾಡುತ್ತಿಲ್ಲ. ಶಾಲೆಗಳಿಗೆ ವ್ಯಯ ಮಾಡಬೇಕಾದ ಹಣವನ್ನು ಗೋಶಾಲೆಗಳಿಗೆ ಸುರಿಯುತ್ತಿದೆ. ಇಷ್ಟಕ್ಕೂ ಗೋಶಾಲೆಗಳನ್ನು ಸೃಷ್ಟಿಸುವಂತಹ ಅನಿವಾರ್ಯತೆಯನ್ನು ಸೃಷ್ಟಿಸಿರುವುದು ಕೂಡ ಅಲ್ಲಿನ ಸರಕಾರವೇ ಆಗಿದೆ. ತಾವು ಸಾಕುವ ಜಾನುವಾರುಗಳನ್ನು ಮಾರಾಟ ಮಾಡಬೇಕೋ, ಬೇಡವೋ ಅಥವಾ ಯಾರಿಗೆ ಮಾರಾಟ ಮಾಡಬೇಕು ಎನ್ನುವ ಹಕ್ಕು ಈವರೆಗೆ ರೈತರದ್ದೇ ಆಗಿತ್ತು. ಆದರೆ ಗೋವು ಯಾವಾಗ ಆದಿತ್ಯನಾಥ್‌ರಂತಹ ಕಪಟ ಯೋಗಿಗೆ ಧಾರ್ಮಿಕ ಸಂಕೇತವಾಯಿತೋ ಅಲ್ಲಿಂದ ಹೈನೋದ್ಯಮಕ್ಕಾಗಿ ಗೋವು ಸಾಕುತ್ತಿದ್ದ ರೈತರು ಅದರ ಮೇಲಿನ ಹಕ್ಕನ್ನು ಕಳೆದುಕೊಂಡರು. ಒಂದು ಕಾಲದಲ್ಲಿ, ಅನುಪಯುಕ್ತ ಗೋವು ಕೂಡ ರೈತರಿಗೆ ಲಾಭವನ್ನು ತಂದುಕೊಡುತ್ತಿತ್ತು. ಆದರೆ ಮಾರಾಟ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸುವ ಪ್ರಯತ್ನ ನಡೆದ ಬಳಿಕ, ಗೋರಕ್ಷಕ ಪಡೆ ಬೀದಿಗಳಲ್ಲಿ ದಾಂಧಲೆ ನಡೆಸಲು ಶುರುವಾದ ಬಳಿಕ ರೈತರು ಅನುಪಯುಕ್ತ ಗೋವುಗಳನ್ನು ಮಾರಾಟ ಮಾಡಲಾಗದೆ ಬೀದಿಗೆ ಬಿಡುವ ಸ್ಥಿತಿ ನಿರ್ಮಾಣವಾಯಿತು.

ಇಂದು ಗೋಶಾಲೆಗಳಿಗಾಗಿ ಸರಕಾರ ಕೋಟ್ಯಂತರ ಹಣ ವ್ಯಯ ಮಾಡುತ್ತಿದೆಯಾದರೂ, ಅದರಿಂದ ಹೈನೋದ್ಯಮಕ್ಕಾಗಲಿ, ಸರಕಾರಕ್ಕಾಗಲಿ, ಜನಸಾಮಾನ್ಯರಿಗಾಗಲಿ ಯಾವುದೇ ಪ್ರಯೋಜನಗಳಿಲ್ಲ. ಜನರನ್ನು ಭಾವನಾತ್ಮಕವಾಗಿ ಮರುಳು ಮಾಡುವ ಉದ್ದೇಶಕ್ಕಾಗಿ ಕೋಟ್ಯಂತರ ಹಣವನ್ನು ನೀರಿನಂತೆ ಚೆಲ್ಲುತ್ತಿದೆ. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಜನರಿಗಾಗಿ ಶಾಲೆ ನಿರ್ಮಿಸಲು, ಆಸ್ಪತ್ರೆಗಳಿಗೆ ಆಮ್ಲಜನಕ ಸಿಲಿಂಡರ್ ಒದಗಿಸಲು ಸರಕಾರದ ಬಳಿ ಹಣವಿಲ್ಲ. ಒಂದು ದೇಶದ ಅಭಿವೃದ್ಧಿ ಆಡಳಿತ ನಡೆಸುವವನ ಮುತ್ಸದ್ದಿತನದಲ್ಲಿದೆ. ಭಾವನಾತ್ಮಕವಾಗಿ ಆಡುವ ಮಾತುಗಳು ಮತ್ತು ಅದರ ತಳಹದಿಯಲ್ಲಿ ಹಮ್ಮಿಕೊಳ್ಳುವ ಯೋಜನೆಗಳು ದೇಶಕ್ಕೆ ಹಿನ್ನಡೆಯನ್ನು ತರುತ್ತದೆ. ಶಾಲೆಗಳ ಬದಲಿಗೆ ಗೋಶಾಲೆಗಳನ್ನು ತೆರೆಯುತ್ತಿರುವ ಆದಿತ್ಯನಾಥ್‌ರಂತಹ ನಾಯಕರು, ಶುಚಿತ್ವದ ರೂವಾರಿಗಳಾಗಿರುವ ಪೌರ ಕಾರ್ಮಿಕರನ್ನು ಬದಿಗಿಟ್ಟು ಆಂದೋಲನ ಮಾಡುತ್ತಿರುವ ನರೇಂದ್ರ ಮೋದಿಯಂತಹ ಪ್ರಹಸನಕಾರರೇ ಸದ್ಯಕ್ಕೆ ಈ ದೇಶದ ಪ್ರಗತಿಯ ಮುಂದಿರುವ ಅತಿದೊಡ್ಡ ಸವಾಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News