ಇಸ್ರೋ ಪ್ರಕರಣ: ಅಪೂರ್ವ ವಿಜ್ಞಾನಿಯ ದುರಂತ ಅಂತ್ಯ

Update: 2018-09-18 03:48 GMT

ಬೆಂಗಳೂರು, ಸೆ.18: ಹೆಬ್ಬಾಳದ ಖಾಸಗಿ ಆಸ್ಪತ್ರೆಯ ಕೊಠಡಿಯಲ್ಲಿದ್ದ ಟಿವಿ ಪರದೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಅವರು ಎರಡು ದಶಕಗಳಿಂದ ಕಾಯುತ್ತಿದ್ದ ಸುದ್ದಿ ಕಾಯುತ್ತಿತ್ತು. ಆದರೆ ಅವರು ಯಾವ ಸ್ಪಂದನೆಯೂ ಇಲ್ಲದೇ ನಿಶ್ಚಲವಾಗಿದ್ದರು. ರಷ್ಯನ್ ಬಾಹ್ಯಾಕಾಶ ಏಜೆನ್ಸಿ ಗ್ಲಾವ್‌ಕೊಸ್‌ಮೊಸ್‌ಗೆ ಭಾರತದ ಪ್ರತಿನಿಧಿಯಾಗಿದ್ದ ಚಂದ್ರಶೇಖರ್(76) ಶುಕ್ರವಾರ ಮುಂಜಾನೆಯೇ ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು. ಕೆಲವೇ ಗಂಟೆಗಳಲ್ಲಿ ಅವರನ್ನೂ ಒಳಗೊಂಡ ಬೇಹುಗಾರಿಕೆ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ಸುಪ್ರೀಂಕೋರ್ಟ್ 50 ಲಕ್ಷ ರೂ. ಪರಿಹಾರ ಘೋಷಿಸಿತ್ತು!

1998ರ ಆ ಪ್ರಕರಣದಲ್ಲಿ ಚಂದ್ರಶೇಖರ್, ನಂಬಿ ನಾರಾಯಣನ್ ಮತ್ತು ಇತರ ನಾಲ್ಕು ಮಂದಿಯನ್ನು ಸುಪ್ರೀಂಕೋರ್ಟ್ ನಿರಪರಾಧಿ ಎಂದು ತೀರ್ಪು ನೀಡಿತು. "ಟಿವಿ ಪರದೆಯ ಮೇಲಿನ ಸುದ್ದಿಯನ್ನು ತೋರಿಸುವ ಪ್ರಯತ್ನ ಮಾಡಿದೆವು. ಆದರೆ ಅವರು ಪ್ರಜ್ಞಾಹೀನರಾಗಿ ಅದಕ್ಕೆ ಸ್ಪಂದಿಸಲೇ ಇಲ್ಲ" ಎಂದು ಚಂದ್ರಶೇಖರ್ ಅವರ ಪತ್ನಿ ಹಾಗೂ ಎಚ್‌ಎಂಟಿಯ ಮಾಜಿ ಜಿಎಂ ಕೆ.ವಿಜಯಮ್ಮ ಬೇಸರಿಸಿದರು. "ಈ ದಿನಕ್ಕಾಗಿ ಅವರು ಜೀವಮಾನವಿಡೀ ಕಾದಿದ್ದರು. ಆದರೆ ಆ ಸುದ್ದಿ ತೀರಾ ತಡವಾಗಿ ಬಂತು" ಎಂದು ವಿಜಯಮ್ಮ ಹೇಳಿದರು.

ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಚಂದ್ರಶೇಖರ್, ರವಿವಾರ ರಾತ್ರಿ ಕೊನೆಯುಸಿರೆಳೆದರು. ಯಾವ ಸುದ್ದಿ ಕೇಳಬೇಕೆಂದು ಅವರು ಬದುಕಿದ್ದರೋ, ಆ ಸುದ್ದಿ ಕೊನೆಗೂ ಅವರಿಗೆ ತಲುಪಿದೆಯೇ ಎನ್ನುವುದು ಯಾರಿಗೂ ತಿಳಿಯದು.

ರಷ್ಯಾದ ಬಾಹ್ಯಾಕಾಶ ಏಜೆನ್ಸಿಯ ಭಾರತೀಯ ಪ್ರತಿನಿಧಿಯಾಗಿ 1992ರಿಂದ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ್, ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನೆಲೆಸಿದ್ದರು. ಕೇರಳ ಪೊಲೀಸರು ಹಾಗೂ ಗುಪ್ತಚರ ವಿಭಾಗದ ಚಿತ್ರಹಿಂಸೆಯಿಂದ ಬೇಸತ್ತು ಏಕಾಂತಕ್ಕೆ ಜಾರಿದ್ದರು.

"ಇವರನ್ನು ಪ್ರಕರಣದಲ್ಲಿ ಸಿಲುಕಿಸಿ ಅವರು ಸಾಧಿಸಿದ್ದೇನು? ಇಷ್ಟು ವರ್ಷಗಳ ಕಾಲ ನಾವು ಅನುಭವಿಸಿದ ಆಘಾತಕ್ಕೆ ಯಾರು ಹೊಣೆ? ಅವರ ವೃತ್ತಿ ಹಾಗೂ ಮನಃಶಾಂತಿಯನ್ನು ನಾಶಪಡಿಸಿದರು. ಕೇರಳದಲ್ಲಿ ನಮ್ಮ ಮನೆ ಮೇಲೆ ದಾಳಿ ಮಾಡಿದರು. ದೇಶದ್ರೋಹಿ ಎಂದು ಅವರನ್ನು ಕರೆದು ಚಿತ್ರಹಿಂಸೆ ನೀಡಿದರು. ಹೀಗೇಕೆ ಮಾಡಿದರು ಎಂದು ನಾವು ತಿಳಿಯಬೇಕಿದೆ" ಎಂದು ವಿಜಯಮ್ಮ ದುಃಖದ ನಡುವೆಯೂ ಆಕ್ರೋಶದಿಂದ ನುಡಿದರು. ಈ ದಂಪತಿಗೆ ಮಕ್ಕಳಿರಲಿಲ್ಲ. ಬೇಹುಗಾರಿಕೆ ಪ್ರಕರಣದ ವಿವಾದ ಭುಗಿಲೆದ್ದ ಬಳಿಕ ಚಂದ್ರಶೇಖರ್ ಮುಖ್ಯವಾಹಿನಿಯಿಂದ ದೂರವಾಗಿ ಏಕಾಂತದಲ್ಲಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News