ತೈಲ ಬೆಲೆಯೇರಿಕೆ ಬಗ್ಗೆ ಬಿಜೆಪಿ ನಾಯಕಿಯನ್ನು ಪ್ರಶ್ನಿಸಿದ ವೃದ್ಧನಿಗೆ ಕಾರ್ಯಕರ್ತರಿಂದ ಹಲ್ಲೆ

Update: 2018-09-18 07:27 GMT
ಕಥಿರ್

ಚೆನ್ನೈ, ಸೆ.18: ಏರುತ್ತಿರುವ ತೈಲ ಬೆಲೆಗಳಿಗೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷೆ ತಮಿಳಿಸಾಯಿ ಸೌಂದರರಾಜನ್ ಅವರನ್ನು ಪ್ರಶ್ನಿಸಿದ ಒಂದೇ ಕಾರಣಕ್ಕೆ ಹಿರಿಯ ಆಟೋ ಚಾಲಕರೊಬ್ಬರಿಗೆ ಬಿಜೆಪಿ ಕಾರ್ಯಕರ್ತರು ಥಳಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ.

ಸೈದಪೇಟ್ ಎಂಬಲ್ಲಿ ಸೌಂದರರಾಜನ್ ಅವರು ಮಾಧ್ಯಮವನ್ನುದ್ದೇಶಿಸಿ ಮಾತನಾಡುತ್ತಿರುವ ಸಂದರ್ಭ ಕಥಿರ್ ಎಂಬ ಹೆಸರಿನ ಆಟೋ ಚಾಲಕ, ‘‘ಸೋದರಿ, ಇಂಧನ ದರಗಳೇಕೆ ನಿಯಮಿತವಾಗಿ ಏರುತ್ತಿವೆ?’’ ಎಂದು ಪ್ರಶ್ನಿಸಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡದ ಸೌಂದರರಾಜನ್ ತಮ್ಮ ಪತ್ರಿಕಾಗೋಷ್ಠಿ ಮುಂದುವರಿಸಿದ್ದರು.

ಆದರೆ ಕಥಿರ್ ತನ್ನ ಪ್ರಶ್ನೆಗೆ ಉತ್ತರ ನೀಡುವಂತೆ ಆಗ್ರಹಿಸಿದಾಗ ಬಿಜೆಪಿ ಕಾರ್ಯಕರ್ತರು ಅವರನ್ನು ದೂರ ದೂಡಿ ಹಲ್ಲೆ ನಡೆಸಿದರೆನ್ನಲಾಗಿದೆ.
‘‘ತೈಲ ಬೆಲೆಯೇರಿಕೆಯಿಂದ ಉಂಟಾಗಿರುವ ಸಮಸ್ಯೆಯ ಬಗ್ಗೆಯಷ್ಟೇ ನನ್ನ ಪ್ರಶ್ನೆಯಾಗಿತ್ತು, ಅವರಿಗೆ ನೋವುಂಟು ಮಾಡುವ ಉದ್ದೇಶವಿರಲಿಲ್ಲ’’ ಎಂದು ಕಾಥಿರ್ ಹೇಳಿದ್ದಾರೆ.

ಕಥಿರ್ ಆ ಸಂದರ್ಭ ಮದ್ಯದ ನಶೆಯಲ್ಲಿದ್ದ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದರೆ, ಆತನ ಮೇಲೆ ಹಲ್ಲೆ ನಡೆದಿಲ್ಲ ಎಂದು ಸೌಂದರರಾಜನ್ ಹೇಳಿದ್ದಾರೆ. ‘‘ಬಿಜೆಪಿ ಕಾರ್ಯಕರ್ತರು ಆತನ ಮೇಲೆ ಹಲ್ಲೆ ನಡೆಸಿಲ್ಲ, ಯಾರಾದರೂ ಹಲ್ಲೆ ನಡೆಸಿದ್ದರೆ ಅದು ಖಂಡನೀಯ’’ ಎಂದು ಸೌಂದರರಾಜನ್  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News