ಅಕ್ರಮ ಹಣ ವಹಿವಾಟು ಆರೋಪ: ಡಿ.ಕೆ. ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ

Update: 2018-09-18 13:19 GMT

ಹೊಸದಿಲ್ಲಿ, ಸೆ.18: ತೆರಿಗೆ ವಂಚನೆ ಮತ್ತು ಹವಾಲಾ ವ್ಯವಹಾರದ ಆರೋಪದಲ್ಲಿ ಕರ್ನಾಟಕ ರಾಜ್ಯ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ಶಿವಕುಮಾರ್, ಹೊಸದಿಲ್ಲಿಯ ಕರ್ನಾಟಕ ಭವನದ ಉದ್ಯೋಗಿ ಹನುಮಂತಯ್ಯ ಹಾಗೂ ಇತರರ ವಿರುದ್ಧ ತನಿಖಾ ಸಂಸ್ಥೆಯು ಹಣ ವಂಚನೆ (ತಡೆ) ಕಾಯ್ದೆಯ (ಪಿಎಂಎಲ್‌ಎ)ಯಡಿ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಟಿಗಟ್ಟಲೆ ರೂ. ಮೊತ್ತದ ತೆರಿಗೆ ವಂಚನೆ ಮತ್ತು ಹವಾಲಾ ವ್ಯವಹಾರಕ್ಕೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆಯು ಈ ವರ್ಷದ ಆರಂಭದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ ದೋಷಾರೋಪಣಾ ಪಟ್ಟಿಯನ್ನು ಆಧರಿಸಿ ಜಾರಿ ನಿರ್ದೇಶನಾಲಯ ಈ ಪ್ರಕರಣವನ್ನು ದಾಖಲಿಸಿದೆ. ಆರೋಪಿಗಳ ಹೇಳಿಕೆಗಳನ್ನು ದಾಖಲಿಸಲು ಶೀಘ್ರದಲ್ಲೇ ಅವರಿಗೆ ತನಿಖಾ ಸಂಸ್ಥೆ ಸಮನ್ಸ್ ಜಾರಿ ಮಾಡುವ ನಿರೀಕ್ಷೆಯಿದೆ.

ಶಿವಕುಮಾರ್ ತನ್ನ ಸಹಚರ ಎಸ್.ಕೆ.ಶಿವಕುಮಾರ್ ಜೊತೆ ಸೇರಿ ಇತರ ಮೂವರ ನೆರವಿನೊಂದಿಗೆ ಬೃಹತ್ ಪ್ರಮಾಣದಲ್ಲಿ ನಗದನ್ನು ಹವಾಲಾ ಮೂಲಕ ನಿರಂತರವಾಗಿ ಸಾಗಿಸಿದ್ದಾರೆ ಎಂದು ಐಟಿ ಇಲಾಖೆ ಅಧಿಕಾರಿಗಳು ಆರೋಪಿಸಿದ್ದಾರೆ. ಲಭ್ಯವಿರುವ ಸಾಕ್ಷಿಗಳ ಪ್ರಕಾರ ಡಿ.ಕೆ.ಶಿವಕುಮಾರ್ ದಿಲ್ಲಿ ಮತ್ತು ಬೆಂಗಳೂರಿನಾದ್ಯಂತ ತೆರಿಗೆ ಪಾವತಿಸದ ಹಣವನ್ನು ಸಾಗಿಸಲು ಮತ್ತು ಉಪಯೋಗಿಸಲು ಜನರ ಮತ್ತು ಪ್ರದೇಶಗಳ ಜಾಲವನ್ನು ರಚಿಸಿದ್ದರು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಸಚಿನ್ ನಾರಾಯಣ್, ಆಂಜನೇಯ ಹನುಮಂತಯ್ಯ ಮತ್ತು ಎನ್.ರಾಜೇಂದ್ರ ಈ ಪ್ರಕಕರಣ ಇತರ ಆರೋಪಿಗಳಾಗಿದ್ದಾರೆ. ಐಟಿ ಅಧಿಕಾರಿಗಳ ಪ್ರಕಾರ, ನಾರಾಯಣ್, ಶಿವಕುಮಾರ್ ಅವರ ವ್ಯವಹಾರದಲ್ಲಿ ಜೊತೆಗಾರರಾಗಿದ್ದಾರೆ. ಇನ್ನು ಎಸ್.ಕೆ. ಶರ್ಮಾ, ವಿಲಾಸಿ ಮತ್ತು ಪ್ರಯಾಣಿಕ ಬಸ್‌ಗಳನ್ನು ವಿವಿಧ ಕಾರ್ಯಕ್ರಮಗಳಿಗೆ ಬಾಡಿಗೆ ಆಧಾರದಲ್ಲಿ ನೀಡುವ ಶರ್ಮಾ ಟ್ರಾನ್ಸ್‌ಪೋರ್ಟ್‌ನ ಮಾಲಕರಾಗಿದ್ದಾರೆ. ಹನುಮಂತಯ್ಯ ಹೊಸದಿಲ್ಲಿಯಲ್ಲಿರುವ ಕರ್ನಾಟಕ ಭವನದ ಉದ್ಯೋಗಿಯಾಗಿದ್ದು ದಿಲ್ಲಿಯಲ್ಲಿ ಶಿವಕುಮಾರ್‌ಅವರ ಲೆಕ್ಕ ನೀಡದ ಹಣವನ್ನು ಶೇಖರಿಸಿಡುವ ಮತ್ತು ನಿರ್ವಹಿಸುವ ಹೊಣೆಯನ್ನು ಹೊತ್ತಿದ್ದರು. ಕರ್ನಾಟಕ ಭವನವನ್ನು ನೋಡಿಕೊಳ್ಳುತ್ತಿದ್ದ ರಾಜೇಂದ್ರ ಕೂಡಾ ಶರ್ಮಾಗಾಗಿ ಕೆಲಸ ಮಾಡುತ್ತಿದ್ದು ಶಿವಕುಮಾರ್ ಮತ್ತು ಶರ್ಮಾ ಅವರ ಸ್ಥಿರಾಸ್ಥಿಯನ್ನೂ ನೋಡಿಕೊಳ್ಳುತ್ತಿದ್ದರು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News