ಸರಕಾರ ಅಸ್ಥಿರಗೊಳಿಸುವ ಬಿಜೆಪಿ ಯತ್ನಕ್ಕೆ ಯಶಸ್ಸು ಸಿಗದು: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-09-18 12:12 GMT

ಬೆಂಗಳೂರು, ಸೆ. 18: ರಾಜ್ಯದಲ್ಲಿನ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಲಜ್ಜೆಗೆಟ್ಟು ಪ್ರಯತ್ನ ನಡೆಸಿದ್ದು, ಅಧಿಕಾರಕ್ಕೆ ಬರಲು ಹಗಲು ಕನಸು ಕಾಣುತ್ತಿದ್ದಾರೆ. ಆದರೆ, ಅವರ ಪ್ರಯತ್ನ ಯಾವುದೇ ಕಾರಣಕ್ಕೂ ಯಶಸ್ಸು ಕಾಣುವುದಿಲ್ಲ ಎಂದು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಹಿಂದೆಯೂ ಆಪರೇಷನ್ ಕಮಲದ ಮೂಲಕ ಸರಕಾರ ರಚಿಸಿದ್ದ ಬಿಜೆಪಿ, ಮಾನ-ಮಾರ್ಯಾದೆ ಬಿಟ್ಟು ಇದೀಗ ಅದೇ ಪ್ರಯತ್ನವನ್ನು ನಡೆಸಿದ್ದಾರೆಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಥವಾ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಗೊಂದಲ ಅಥವಾ ಅಸಮಾಧಾನವೂ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ, ಆಧಾರ ರಹಿತ ಮತ್ತು ಊಹಾಪೋಹದ ಸುದ್ದಿಯಷ್ಟೇ ಎಂದು ಸಿದ್ದರಾಮಯ್ಯ ಅಲ್ಲಗಳೆದರು.

ಪರಮೇಶ್ವರ್ ನಾಯ್ಕ, ಎಂ.ಬಿ.ಪಾಟೀಲ್, ಭೀಮಾನಾಯ್ಕ, ಬಿ.ಸಿ.ಪಾಟೀಲ್ ಸೇರಿ ಹಲವು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಬೇಡಿಕೆಯನ್ನಿಟ್ಟಿದ್ದಾರೆ. ಆದರೆ, ಯಾರೂ ಪಕ್ಷ ಬಿಡುವ ಮಾತುಗಳನ್ನು ಆಡಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

ಐದು ವರ್ಷ ಸುಭದ್ರ: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಐದು ವರ್ಷವೂ ಇರಲಿದೆ. ಈ ಬಗ್ಗೆ ಯಾರೊಬ್ಬರಿಗೂ ಯಾವುದೇ ಸಂಶಯ ಬೇಡ. ಶಾಸಕರ ಬೆಂಬಲ ಇರುವುದರಿಂದ ಸರಕಾರಕ್ಕೆ ಯಾರೊಬ್ಬರ ರಕ್ಷಣೆಯೂ ಬೇಡ ಎಂದು ಸ್ಪಷ್ಟಣೆ ನೀಡಿದರು.

ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಶಿಸ್ತಿನ ಸಿಪಾಯಿಗಳು. ಪಕ್ಷದ ನಿಲುವಿಗೆ ಎಲ್ಲರೂ ಬದ್ಧರಾಗಿದ್ದಾರೆ. ಪಕ್ಷದಲ್ಲಿ ಸಮಸ್ಯೆಗಳೇ ಇಲ್ಲ. ಹೀಗಿರುವಾಗ ಬಗೆಹರಿಸುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಚರ್ಚಿಸಿದ್ದು, ಯಾರೂ ಪಕ್ಷ ಬಿಡುವುದಿಲ್ಲ ಎಂದರು.

ಸಭೆ ನಡೆಸುವುದರಲ್ಲಿ ತಪ್ಪೇನಿದೆ: ಸಚಿವರು ಸಭೆ ನಡೆಸುವುದರಲ್ಲಿ, ಸರಕಾರದ ಕಾರು ಬದಲಿಸಿ ಖಾಸಗಿ ಕಾರು ಬಳಸುವುದರಲ್ಲಿ ತಪ್ಪೇನಿಲ್ಲ. ಸಿಎಂ ಕುಮಾರಸ್ವಾಮಿ ಕೂಡ ಖಾಸಗಿ ಕಾರು ಬಳಸುತ್ತಿದ್ದಾರೆ. ಸಿಎಂ, ಸಚಿವರು, ಶಾಸಕರ ಭೇಟಿಗೂ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಪರಿಷತ್ ಚುನಾವಣೆ ಬಳಿಕ ಸಂಪುಟ ವಿಸ್ತರಣೆ: ಅಕ್ಟೋಬರ್ 3ಕ್ಕೆ ವಿಧಾನ ಪರಿಷತ್ತಿನ 3 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಹೀಗಾಗಿ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದ ಅವರು, ಆರು ಸ್ಥಾನಗಳನ್ನು ಭರ್ತಿ ಮಾಡಿದ್ದು, ಈ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.

ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಲು ಹೊಸದಿಲ್ಲಿಗೆ ತೆರಳಲಿದ್ದೇವೆ. ವಿಧಾನಸಭೆಯಿಂದ ಪರಿಷತ್ತಿಗೆ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೂರು ಸ್ಥಾನಗಳಿಗೆ ನಾಮನಿರ್ದೇಶನ ಮಾಡಬೇಕಿದೆ ಎಂದು ಹೇಳಿದರು.

ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಸಚಿವರಾದ ಆರ್.ಬಿ. ತಿಮ್ಮಾಪುರ, ಎಂ.ಬಿ.ಪಾಟೀಲ್, ಶಾಸಕರಾದ ಅಪ್ಪಾಜಿ ನಾಡಗೌಡ, ಬಿ.ಸಿ.ಪಾಟೀಲ್. ಭೀಮಾ ನಾಯ್ಕಾ, ಮಾಜಿ ಶಾಸಕ ಅಶೋಕ್ ಪಟ್ಟಣ್, ಮೇಲ್ಮನೆ ಸದಸ್ಯ ಐವಾನ್ ಡಿಸೋಜ ಈ ವೇಳೆ ಹಾಜರಿದ್ದರು.

ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಸಣ್ಣ-ಪುಟ್ಟ ಬೇಡಿಕೆಗಳನ್ನೆ ಅಸಮಾಧಾನ ಎಂದು ಹೇಳಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಪಕ್ಷ ತ್ಯಜಿಸಲಿದ್ದಾರೆಂಬುದು ಶುದ್ಧ ಸುಳ್ಳು. ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಕೆಲ ಶಾಸಕರು ಜಾರಕಿಹೊಳಿ ಸಹೋದರರನ್ನು ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News