ಭಾರತದಲ್ಲಿ ಪ್ರತಿ 2 ನಿಮಿಷಗಳಿಗೆ ಮೂರು ಶಿಶುಗಳ ಸಾವು: ವಿಶ್ವಸಂಸ್ಥೆ

Update: 2018-09-18 13:25 GMT

ಹೊಸದಿಲ್ಲಿ, ಸೆ.18: ನೀರು ಮತ್ತು ಸ್ವಚ್ಛತೆಯ ಕೊರತೆ, ಅಪೌಷ್ಠಿಕತೆ ಮತ್ತು ಮೂಲ ಆರೋಗ್ಯ ಸೇವೆಗಳು ಲಭ್ಯವಾಗದೆ ಇರುವುದರಿಂದ ಭಾರತದಲ್ಲಿ ಪ್ರತಿ ಎರಡು ನಿಮಿಷಕ್ಕೆ ಮೂರು ನವಜಾತ ಶಿಶುಗಳು ಸಾವನ್ನಪ್ಪುತ್ತಿರುವುದಾಗಿ ವಿಶ್ವಸಂಸ್ಥೆಯ ಮಕ್ಕಳ ಮರಣ ಅಂದಾಜಿಸುವ ಅಂತರ್ ಸಂಸ್ಥೀಯ ತಂಡ (ಯುನಿಗ್ಮೆ) ದ ವರದಿಯು ತಿಳಿಸಿದೆ.

2017ರಲ್ಲಿ ಭಾರತದಲ್ಲಿ 8,02,000 ಮಕ್ಕಳು ಸಾವನ್ನಪ್ಪಿದ್ದಾರೆ. ಇದು ಕಳೆದ ಐದು ವರ್ಷಗಳಲ್ಲೇ ಅತ್ಯಂತ ಕನಿಷ್ಟವಾಗಿದ್ದರೂ ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ. ನಂತರ ಸ್ಥಾನದಲ್ಲಿ 3,30,000 ಮಕ್ಕಳ ಸಾವನ್ನು ದಾಖಲಿಸಿರುವ ಚೀನಾ ಇದೆ ಎಂದು ವರದಿ ತಿಳಿಸಿದೆ.

ಭಾರತವು ಶಿಶುಗಳ ಸಾವಿಗೆ ಕಾರಣವಾಗುವ ಅಂಶಗಳ ವಿರುದ್ಧ ಸರಕಾರಿ ಪ್ರಾಯೋಜಿತ ಅಭಿಯಾನಗಳ ಮೂಲಕ ಹೋರಾಡಿ ಈ ವಿಷಯದಲ್ಲಿ ಸಾಕಷ್ಟು ಪ್ರಗತಿಯನ್ನು ಕಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ಮುಖ್ಯಸ್ಥ ಡಾ. ಗಗನ ಗುಪ್ತಾ ತಿಳಿಸಿದ್ದಾರೆ. ಭಾರತದಲ್ಲಿ ವಾರ್ಷಿಕ ಜನನ ದರ 2.5 ಕೋಟಿಯಾಗಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡರೆ ಕಳೆದ ಐದು ವರ್ಷಗಳಲ್ಲೇ ಸಾವಿನ ಸಂಖ್ಯೆಯು ಬಹಳಷ್ಟು ಕಡಿಮೆಯಾಗಿದೆ. ಇದೇ ಮೊದಲ ಬಾರಿ ಐದು ವರ್ಷದ ಪ್ರಾಯದ ಒಳಗಿನ ಮಕ್ಕಳ ಸಾವಿನ ಸಂಖ್ಯೆ ಮತ್ತು ಜನನ ಪ್ರಮಾಣ ಸಮಾನವಾಗಿದೆ. ಮುಂದಿನ ಹೆಜ್ಜೆ ಮರಣ ದರವನ್ನು ಕಡಿಮೆ ಮಾಡುವುದಾಗಿದೆ ಎಂದು ಗುಪ್ತಾ ತಿಳಿಸಿದ್ದಾರೆ.

ಭಾರತದಲ್ಲಿ 2017ರಲ್ಲಿ 6,05,000 ನವಜಾತ ಶಿಶುಗಳು ಸಾವನ್ನಪ್ಪಿದ್ದರೆ 5ರಿಂದ 14ರ ಹರೆಯದ ಒಳಗಿನ 1,52,000 ಮಕ್ಕಳ ಮೃತಪಟ್ಟಿರುವುದಾಗಿ ವಿಶ್ವಸಂಸ್ಥೆಯ ವರದಿಯು ತಿಳಿಸಿದೆ. ಭಾರತದಲ್ಲಿ ಆಸ್ಪತ್ರೆಗಳಲ್ಲಿ ಮಕ್ಕಳನ್ನು ಹೆರುವ ಪ್ರಮಾಣಗಳು ಹೆಚ್ಚಾಗುತ್ತಿವೆ. ಇದರ ಜೊತೆಗೆ ನವಜಾತ ಶಿಶುಗಳಿಗಾಗಿ ವಿಶೇಷ ವಿಭಾಗಗಳ ರಚನೆ ಮತ್ತು ಲಸಿಕೆಗಳನ್ನು ನಿಯಮಿತವಾಗಿ ನೀಡುವ ಕುರಿತು ಉಂಟಾಗಿರುವ ಜಾಗೃತಿಯಿಂದಾಗಿ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಯುನಿಸೆಫ್ ಭಾರತದ ಪ್ರತಿನಿಧಿ ಯಾಸ್ಮಿನ್ ಅಲಿ ಹಕ್ ತಿಳಿಸಿದ್ದಾರೆ. 2016ರಲ್ಲಿ 8.67 ಲಕ್ಷ ಇದ್ದ ಮಕ್ಕಳ ಸಾವಿನ ಪ್ರಮಾಣ 2017ಕ್ಕೆ 8.02ಕ್ಕೆ ಇಳಿಕೆಯಾಗಿದೆ ಎಂದು ಆಕೆ ತಿಳಿಸಿದ್ದಾರೆ. ಅದರಲ್ಲೂ ಹೆಚ್ಚಿನ ಸಂತೋಷದ ವಿಷಯವೆಂದರೆ ದೇಶದಲ್ಲಿ ಲಿಂಗಾಧಾರಿತ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ಯಾಸ್ಮಿನ್ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಜಗತ್ತಿನಾದ್ಯಂತ 2017ರಲ್ಲಿ 63 ಲಕ್ಷ ಹದಿನೈದಕ್ಕಿಂತ ಕೆಳಗಿನ ಹರೆಯದ ಮಕ್ಕಳು ಸಾವನ್ನಪ್ಪಿದ್ದಾರೆ. ಇವುಗಳಲ್ಲಿ ಬಹುತೇಕ ಸಾವುಗಳು ತಡೆಯಬಹುದಾಗಿದ್ದ ಕಾರಣಗಳಿಂದ ಉಂಟಾಗಿವೆ. ಈ ಪೈಕಿ 54 ಲಕ್ಷ ಮಕ್ಕಳು ಐದರ ಹರೆಯದ ಒಳಗಿನವರಾಗಿದ್ದರು ಮತ್ತು ಇದರಲ್ಲಿ ಅರ್ಧದಷ್ಟು ನವಜಾತ ಶಿಶುಗಳಾಗಿವೆ ಎಂದು ವರದಿ ತಿಳಿಸಿದೆ. ಈ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳದೆ ಹೋದರೆ ಇಂದಿನಿಂದ 2030ರ ವೇಳೆಗೆ ಮತ್ತೆ 56 ಲಕ್ಷ ಮಕ್ಕಳು ಸಾವನ್ನಪ್ಪಲಿದ್ದು,  ಈ ಪೈಕಿ ಅರ್ಧದಷ್ಟು ನವಜಾತ ಶಿಶುಗಳಾಗಿರಲಿದೆ ಎಂದು ವರದಿಯು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News