ಭಾರತದ ಆನೆಗಳ ಅರಣ್ಯ ರೋದನ

Update: 2018-09-18 18:33 GMT

ಮೇನಕಾಗಾಂಧಿಯ ವ್ಯಕ್ತಿತ್ವದಲ್ಲೂ ಅವರು ತೆಗೆದುಕೊಳ್ಳುವ ನಿಲುವುಗಳಲ್ಲೂ ಹಲವು ವಿರೋಧಾಭಾಸಗಳನ್ನು ನೋಡುತ್ತಾ ಬಂದಿದ್ದೇವೆ. ಪ್ರಾಣಿಗಳ ಬಗ್ಗೆ ಅತೀವ ಕಾಳಜಿಯನ್ನು ಹೊಂದಿರುವವರಂತೆ ನಟಿಸುವ ಇವರು, ಮನುಷ್ಯರ ಮೇಲೆ ನಡೆಯುವ ದೌರ್ಜನ್ಯಗಳ ಕುರಿತಂತೆ ಅಷ್ಟೇ ತೀವ್ರವಾಗಿ ಮಾತನಾಡಿರುವುದು ಕಡಿಮೆ. ಪ್ರಾಣಿ ದಯೆಯ ಬಗ್ಗೆ ಮಾತನಾಡುವ ಈಕೆಗೆ ಮಾನವ ಹಕ್ಕು ಹೋರಾಟಗಾರರ ಕುರಿತಂತೆ ಅಸಹನೆಯಿದೆ. ಮೇನಕಾ ಗಾಂಧಿಯ ಪರಿಸರವಾದದಲ್ಲಿ ಬಡವರಿಗೆ, ರೈತರಿಗೆ, ಕಾರ್ಮಿಕರಿಗೆ ಸ್ಥಾನವೇ ಇಲ್ಲ. ಎಲ್ಲೋ ಒಂದು ನವಿಲು ಸತ್ತಾಗ ಗೋಳಾಡುವ ಇವರು, ಒಬ್ಬ ಮನುಷ್ಯನನ್ನು ಗುಂಪೊಂದು ಬರ್ಬರವಾಗಿ ಥಳಿಸಿ ಕೊಂದಾಗ ಅವರೊಳಗಿನ ದಯೆ ಜಾಗೃತವಾಗುವುದಿಲ್ಲ. ಒಟ್ಟಿನಲ್ಲಿ ತನ್ನ ರಾಜಕೀಯ ಬೆಳವಣಿಗೆಗಾಗಿ ಪರಿಸರ ರಾಜಕೀಯವನ್ನು ಬಳಸಿಕೊಂಡು ಬಂದವರು.

ಇಂತಹ ಮೇನಕಾಗಾಂಧಿಯವರಿಗೆ ಶ್ರೀಲಂಕಾದಲ್ಲಿರುವ ಆನೆಗಳ ಕುರಿತಂತೆ ಕಾಳಜಿ ಬಂದಿದೆ. ಶ್ರೀಲಂಕಾದಲ್ಲಿ 67 ವರ್ಷಗಳಿಂದ ಬಂಧಿತವಾಗಿರುವ ಬಂಡೂಲ ಅಥವಾ ಆನೆಗಳ ದುರವಸ್ಥೆಯ ಕುರಿತತಂತೆ ಇವರು ಶ್ರೀಲಂಕಾ ಅಧ್ಯಕ್ಷರಿಗೆ ಪತ್ರವೊಂದನ್ನು ಬರೆದಿದ್ದಾರೆ. ಆನೆಗಳನ್ನು ಸರಪಳಿಯಲ್ಲಿ ಬಂಧಿಸಿಟ್ಟ ಪರಿಣಾಮವಾಗಿ ಅವುಗಳ ಮುಂಗಾಲು ರಕ್ತಸಿಕ್ತವಾಗಿರುವುದನ್ನು ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿದ್ದವು. ಇದು ಮೇನಕಾ ಗಾಂಧಿಯವರನ್ನು ದುಃಖಿತರನ್ನಾಗಿಸಿದೆ. ‘‘ಶ್ರೀಲಂಕಾ ಗೌರವಾರ್ಹ ಹಾಗೂ ಸುಂದರ ದ್ವೀಪ. ಆನೆಗಳನ್ನು ಈ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದು ಶ್ರೀಲಂಕಾದ ಗೌರವಕ್ಕೆ ತಕ್ಕುದಾದುದಲ್ಲ’’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಹಾಗೆಯೇ ಅವುಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಇಂದು ವಿಶ್ವದಲ್ಲೇ ಆನೆಗಳನ್ನು ಅತ್ಯಂತ ಭೀಕರವಾಗಿ ನಡೆಸಿಕೊಳ್ಳುತ್ತಿರುವ ದೇಶ ಭಾರತವಾಗಿದೆ. ಭಾರತ ಯಾವುದನ್ನೆಲ್ಲ ದೇವರು ಎಂದು ಘೋಷಿಸಿದೆಯೋ ಅವೆಲ್ಲವೂ ಭಕ್ತರ ನಂಬಿಕೆಯ ಕಾರಣದಿಂದಲೇ ದೌರ್ಜನ್ಯಕ್ಕೀಡಾಗಿವೆ. ಮಹಿಳೆಯನ್ನು ‘ದೇವಿ’ ಎಂದು ಕರೆಯುತ್ತಲೇ ಆಕೆಯ ತಲೆಬೋಳಿಸಿ, ವೃಂದಾವನದ ಕೇರಿಯಲ್ಲಿಟ್ಟ ಹೆಮ್ಮೆ ನಮ್ಮದು. ಬ್ರಿಟಿಷರು ಬಾರದೇ ಇದ್ದಿದ್ದರೆ ಇಂದಿಗೂ ದೇಶದಲ್ಲಿ ಸತಿ ಸಹಗಮನ ಪದ್ಧತಿ ಅಸ್ತಿತ್ವದಲ್ಲಿರುತ್ತಿತ್ತು. ಗಂಗಾನದಿಯನ್ನು ಪವಿತ್ರ ಎನ್ನುತ್ತಾ ಆ ನದಿಗೆ ಭಕ್ತರು ಯಾವ ಸ್ಥಿತಿ ತಂದಿಟ್ಟಿದ್ದಾರೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಮೋಕ್ಷ ಸಿಗಲಿ ಎನ್ನುವ ಕಾರಣಕ್ಕಾಗಿ ಅರೆ ಬೆಂದ ಹೆಣಗಳನ್ನು ನದಿಗೆ ಎಸೆಯುವ ಕ್ರೌರ್ಯವನ್ನು ಭಕ್ತರು ಮೆರೆದಿದ್ದಾರೆ. ಇದು ಮೃತದೇಹದ ಘನತೆಗೂ, ನದಿಯ ಘನತೆಗೂ ಏಕಕಾಲದಲ್ಲಿ ಮಾಡುವ ಅಗೌರವವಾಗಿದೆ. ಗೋವುಗಳನ್ನು ತಾಯಿ ಎಂದು ಕರೆಯುತ್ತಲೇ, ಗೋಶಾಲೆಗಳಲ್ಲಿ ಅವುಗಳನ್ನು ಸೇರಿಸಿ, ಆಹಾರ ನೀಡದೆ ಹಸಿವಿನಿಂದ ಸಾಯಿಸುತ್ತಿರುವ ಘಟನೆ ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಧಾರ್ಮಿಕ ಕಾರಣವೊಡ್ಡಿ ಬಡವರ ಬಾಯಿಯಿಂದ ಗೋಮಾಂಸಾಹಾರವನ್ನು ಕಿತ್ತು, ಅದನ್ನು ರಫ್ತು ಮಾಡಿ ಹಣ ಸಂಪಾದಿಸುತ್ತಿರುವವರು ನಾವು. ಗಂಧದ ಮರಗಳನ್ನು ರಕ್ಷಿಸುವ ಹೆಸರಿನಲ್ಲಿ ರೈತರು ಗಂಧದ ಮರಗಳನ್ನೇ ಬೆಳೆಯದಂತೆ ನೋಡಿಕೊಂಡವರು. ಇದೇ ಸಾಲಲ್ಲಿ ಆನೆಗಳೂ ಸೇರುತ್ತವೆ.

 ಭಾರತದಲ್ಲಿ ಆನೆಗೆ ವಿಶೇಷ ಮಹತ್ವವಿದೆ. ಅದರಲ್ಲಿ ದೇವರನ್ನು ಕಂಡವರು ನಾವು. ಆದರೆ ಆನೆಗಳನ್ನು ಶೋಷಿಸುವುದರಲ್ಲಿ ವಿಶ್ವದಲ್ಲೇ ಅಗ್ರಗಣ್ಯ ದೇಶ ನಮ್ಮದು. ಈ ದೇಶ ಆನೆಗಳಿಗೆ ದೇವರ ಸ್ಥಾನ ನೀಡಿರುವುದೇ ಅವುಗಳ ಪಾಲಿಗೆ ಮುಳುವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಬಹುತೇಕ ದೇವಸ್ಥಾನಗಳು ತಮ್ಮದೇ ಆದ ಆನೆಗಳನ್ನು ಹೊಂದಿವೆ. ದೇವಸ್ಥಾನಗಳು ಆನೆಗಳನ್ನು ಹೊಂದುವುದು ಆ ಕ್ಷೇತ್ರಕ್ಕೆೆ ಹಿರಿಮೆಯ ಮತ್ತು ಘನತೆಯ ವಿಷಯ. ಆನೆಗಳನ್ನು ಸಾಕುವುದೆಂದರೆ ಸುಲಭವಲ್ಲ. ಅಂಕುಶದ ಜೊತೆಗೆ ಮಾವುತ ಆಗಾಗ ಅವುಗಳನ್ನು ತಿವಿಯುತ್ತಾ ಪಳಗಿಸುತ್ತಿರಬೇಕು. ಕಾಲಿಗೆ ಸರಪಳಿ ಕಟ್ಟುವುದು ಅತ್ಯಗತ್ಯ. ದೇಶದಲ್ಲೇ ಕೇರಳದ ಪುಣ್ಯ ಕ್ಷೇತ್ರಗಳಲ್ಲಿರುವ ಆನೆಗಳ ಸಂಖ್ಯೆ ಅತಿ ದೊಡ್ಡದು. ದೇಶಾದ್ಯಂತ ಹಬ್ಬ ಆಚರಣೆಗಳಿಗಾಗಿ 4000ಕ್ಕೂ ಅಧಿಕ ಆನೆಗಳು ಬಳಕೆಯಾಗುತ್ತವೆ. ಅವುಗಳಲ್ಲಿ ಕೇರಳದಲ್ಲಿರುವ ಆನೆಗಳು ಸುಮಾರು 500 ರಷ್ಟು. ಆನೆಗಳನ್ನು ಪಳಗಿಸುವುದಕ್ಕಾಗಿ ಅದಕ್ಕೆ ಚಿತ್ರಹಿಂಸೆ ನೀಡುವ ಕ್ರೌರ್ಯದ ಕುರಿತ ಸಾಕ್ಷಚಿತ್ರವೊಂದು ಇತ್ತೀಚೆಗೆ ವಿಶ್ವದ ಗಮನ ಸೆಳೆದಿತ್ತು. ಆನೆಗಳು ಕಾಲುಗಳು ಗಾಯಗೊಂಡು ರಕ್ತ ಒಸರುತ್ತಿದ್ದರೂ, ಅದಕ್ಕೆ ಥಳಿಸುತ್ತಿರುವ ಮಾವುತರ ಕ್ರೌರ್ಯಗಳು ಇನ್ನೂ ಮೇನಕಾಗಾಂಧಿಯನ್ನು ತಲುಪದೇ ಇರುವುದು ಅಚ್ಚರಿಯೇ ಸರಿ. ಸಾಧಾರಣವಾಗಿ ಹೊಟ್ಟೆ ಪಾಡಿಗಾಗಿ ಕೋತಿ ಆಡಿಸುವವರು, ಕರಡಿ ಆಡಿಸುವವರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಆದರೆ, ಇದೇ ಸಂದರ್ಭದಲ್ಲಿ ತಮ್ಮ ಹುಂಡಿ ತುಂಬಿಸಲು ದೇವಸ್ಥಾನಗಳು ಆನೆ ಆಡಿಸುವುದನ್ನು ಮಾತ್ರ ಅರಣ್ಯ ಇಲಾಖೆ ನೋಡಿಯೂ ನೋಡದಂತೆ ನಟಿಸುತ್ತಾ ಬಂದಿದೆ. ಇದರಿಂದಾಗಿ ಕೇವಲ ಆನೆಗಳು ಮಾತ್ರವಲ್ಲ, ಸಾರ್ವಜನಿಕರು ಕೂಡ ಅನೇಕ ಬಾರಿ ತೊಂದರೆಗೀಡಾಗಿದ್ದಾರೆ.

ಈ ಹಿಂದೆ, ಕೃಷ್ಣ ಮಠದ ಆನೆಯೊಂದು ಉಡುಪಿಯಲ್ಲಿ ಮಾಡಿದ ದಾಂಧಲೆಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ದೇವಸ್ಥಾನಗಳಲ್ಲಿ ಆನೆಗಳು ಏಕಾಏಕಿ ಹುಚ್ಚೆದ್ದು ಸಾರ್ವಜನಿಕರ ಸೊತ್ತುಗಳನ್ನು ನಾಶ ಪಡಿಸಿದ್ದು ಮಾತ್ರವಲ್ಲ, ಹಲವರನ್ನು ಕೊಂದು ಹಾಕಿದ ಉದಾಹರಣೆಗಳೂ ಇವೆ. ಇಂದು ರಾಜ್ಯದ ದಸರಾದಂತಹ ಬೃಹತ್ ಸಮಾವೇಶದಲ್ಲಿ ಜಂಬೂಸವಾರಿಯನ್ನು ಏರ್ಪಡಿಸಲಾಗುತ್ತದೆ. ಆದರೆ ಅಷ್ಟು ದೊಡ್ಡ ಸಮಾರಂಭದಲ್ಲಿ ಒಂದು ವೇಳೆ ಆನೆಗಳು ಮದ ಏರಿ ಜನರ ನಡುವೆ ನುಗ್ಗಿದರೆ, ಆಗಬಹುದಾದ ನಾಶ ನಷ್ಟವನ್ನು ಊಹಿಸಲೂ ಸಾಧ್ಯವಿಲ್ಲ. ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಹಬ್ಬ, ಜಾತ್ರೆಗಳಲ್ಲಿ ಆನೆಗಳನ್ನು ಬಳಸುವುದು ವನ್ಯ ಜೀವಿ ಕಾಯ್ದೆಗಳ ಉಲ್ಲಂಘನೆ ಮಾತ್ರವಲ್ಲ, ಮಾನವ ಹಕ್ಕು ಉಲ್ಲಂಘನೆಯೂ ಕೂಡ. ಯಾರದೋ ನಂಬಿಕೆಗಳಿಗಾಗಿ ಜನಸಾಮಾನ್ಯರು ಭಯದಿಂದ ಯಾಕೆ ಬದುಕಬೇಕು?

 ಭಾರತದಲ್ಲಿ ಎಷ್ಟು ದೇವಸ್ಥಾನಗಳಲ್ಲಿ ಆನೆಗಳಿವೆ, ಯಾವ ಯಾವ ಜಾತ್ರೆ, ಉತ್ಸವಗಳಲ್ಲಿ ಆನೆಗಳನ್ನು ದುಡಿಸಲಾಗುತ್ತದೆ ಮತ್ತು ಆನೆಗಳನ್ನು ಪಳಗಿಸುವ ಸಂದರ್ಭದಲ್ಲಿ ನೀಡುವ ಚಿತ್ರಹಿಂಸೆ ಎಷ್ಟು ಭೀಕರವಾಗಿರುತ್ತದೆ ಎನ್ನುವುದರ ವರದಿಯೊಂದನ್ನು ಮೊದಲು ಮೇನಕಾಗಾಂಧಿ ತರಿಸಿಕೊಳ್ಳಬೇಕಾಗಿದೆ. ಈ ದೇಶದ ಶೇ. 75ರಷ್ಟು ಜನರು ಆಹಾರವಾಗಿ ಬಳಸುವ ಪ್ರಾಣಿಯನ್ನು ಧಾರ್ಮಿಕ ಕಾರಣವೊಡ್ಡಿ ಅದರ ರಕ್ಷಣೆಯ ಹೆಸರಲ್ಲಿ ಮನುಷ್ಯರನ್ನು ಕೊಲ್ಲುವವರಿದ್ದಾರೆ. ಇದೇ ಸಂದರ್ಭದಲ್ಲಿ ದೇವರೆಂದು ಪೂಜಿಸುವ ಆನೆಯನ್ನು ದೇವಸ್ಥಾನದ ಪರಿಚಾರಕರೇ ಭೀಕರವಾಗಿ ಪ್ರತಿದಿನ ಹಿಂಸಿಸುತ್ತಿರುವುದು ಯಾಕೆ ಮುಖ್ಯವಾಗುವುದಿಲ್ಲ? ಆನೆಯ ರಕ್ಷಣೆಗೆ ಈ ದೇಶದಲ್ಲೊಂದು ಕಾನೂನಿದೆ. ಅದಕ್ಕಾಗಿಯೇ ಸರಕಾರ ನೇಮಿಸಿದ ಸಿಬ್ಬಂದಿಯಿದ್ದಾರೆ. ಆದರೂ ಅವರು ಆನೆಗಳ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ. ಇಂದು ಈ ದೇಶದಲ್ಲಿರುವ ಎಲ್ಲ ದೇವಸ್ಥಾನ, ಪುಣ್ಯ ಕ್ಷೇತ್ರಗಳಲ್ಲಿ ದೌರ್ಜನ್ಯ ಅನುಭವಿಸುತ್ತಿರುವ ಆನೆಗಳನ್ನು ರಕ್ಷಿಸಿ ಅದನ್ನು ಕಾಡಿಗೆ ಅಟ್ಟಬೇಕಾಗಿದೆ ಅಥವಾ ಸೂಕ್ತ ಮೃಗಾಲಯಕ್ಕೆ ಸೇರಿಸಬೇಕು. ಹಾಗೆಯೇ ಯಾವುದೇ ಉತ್ಸವದಲ್ಲಿ ಆನೆಗಳ ಬಳಕೆಯಾಗದಂತೆ ಕಠಿಣ ಕಾನೂನೊಂದನ್ನು ರೂಪಿಸಬೇಕು. ಮೇನಕಾಗಾಂಧಿ ಇದಕ್ಕಾಗಿ ಧ್ವನಿಯೆತ್ತಬೇಕಾಗಿದೆ. ಭಾರತದಲ್ಲಿರುವ ಆನೆಗಳನ್ನು, ಅದರ ಭಕ್ತರಿಂದ ರಕ್ಷಿಸಿದ ಬಳಿಕ ಶ್ರೀಲಂಕಾದಲ್ಲಿರುವ ಆನೆಗಳ ಕುರಿತಂತೆ ಮಾತನಾಡಿದರೆ, ಶ್ರೀಲಂಕ ಅಧ್ಯಕ್ಷರು ಮೇನಕಾ ಮಾತನ್ನು ಗಂಭೀರವಾಗಿ ಸ್ವೀಕರಿಸುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News