ಯೋಧನನ್ನು ಮನೆಯಿಂದ ಹೊರಗೆಳೆದು ಕೊಂದ ನಕ್ಸಲರು

Update: 2018-09-19 04:10 GMT

ಪಾಟ್ನಾ, ಸೆ. 19: ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದು, ನಾಲ್ಕು ವರ್ಷದ ಮಗುವಿನ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿದ್ದ ಸಹಸ್ರಸೀಮಾ ಬಲ (ಎಸ್‌ಎಸ್‌ಬಿ) ಯೋಧನೊಬ್ಬನನ್ನು ನಕ್ಸಲರು ಮನೆಯಿಂದ ಹೊರಕ್ಕೆಳೆದು ಗುಂಡಿಟ್ಟು ಕೊಂದ ಘಟನೆ ಬಿಹಾರದ ಜಮೂಯಿ ಜಿಲ್ಲೆಯ ಪಂಡೇತಿಕಾ ಎಂಬ ಗ್ರಾಮದಲ್ಲಿ ನಡೆದಿದೆ.

ಮೃತ ಯೋಧನನ್ನು ಸಿಕದಂರ್ ಯಾದವ್ ಎಂದು ಗುರುತಿಸಲಾಗಿದ್ದು, ಅವರು ಎಸ್‌ಎಸ್‌ಬಿಯ 48ನೇ ಬೆಟಾಲಿಯನ್‌ನಲ್ಲಿ ಮಧುಬಾನಿ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದರು.

"ಇಡೀ ಕುಟುಂಬ ನಾಲ್ಕು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಗ ದಾಳಿ ನಡೆಸಿದ ನಕ್ಸಲರು ಈ ಕೃತ್ಯ ಎಸಗಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ. ಸಿಕಂದರ್ ಹತ್ಯೆಗೆ ಮುನ್ನ, ಪೊಲೀಸ್ ಸಮವಸ್ತ್ರದಲ್ಲಿದ್ದ ನಕ್ಸಲರು, ಆತನನ್ನು ಹುಡುಕಿಕೊಂಡು ಮನೆಗೆ ಬಂದರು. ಮನೆಯಿಂದ ಆತ ಹೊರಬರುತ್ತಿದ್ದಂತೇ 20 ಮಂದಿಯ ಗುಂಪು ಆತನನ್ನು ಥಳಿಸಲಾರಂಭಿಸಿತು. ಬಳಿಕ ಬಂದೂಕು ತೋರಿಸಿ ಎಳೆದೊಯ್ದರು.

ಮನೆಯಿಂದ ಕೆಲವೇ ಅಡಿ ದೂರದಲ್ಲಿ ಹಲವು ಬಾರಿ ಗುಂಡು ಹೊಡೆದು ಸಿಕಂದರ್‌ನನ್ನು ಸಾಯಿಸಲಾಗಿದೆ. ನಕ್ಸಲರ ಜತೆಗೆ ಕೆಲ ಮಹಿಳೆಯರೂ ಇದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಕಾರಣಕ್ಕೆ ಈ ಶಿಕ್ಷೆ ನೀಡಲಾಗುತ್ತಿದೆ ಎಂದು ನಕ್ಸಲರು ಕೂಗಿ ಹೇಳಿದರು. ಅವರು ಸಿಕಂದರ್‌ನನ್ನು ಹತ್ಯೆ ಮಾಡಿ ಕಾಡಿನಲ್ಲಿ ಪರಾರಿಯಾದರು ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News