ದಿಲ್ಲಿ ವಿವಿಗೆ ಪ್ರವೇಶ ಪಡೆದ ಎಬಿವಿಪಿಯ ಅಂಕಿವ್ ಸಲ್ಲಿಸಿದ್ದು ನಕಲಿ ಅಂಕಪಟ್ಟಿ: ಕಾಲೇಜಿನ ಹೇಳಿಕೆ

Update: 2018-09-19 06:55 GMT

“ಭವಿಷ್ಯದ ಮೋದಿ” ಎಂದ ಟ್ವಿಟರಿಗರು

ಹೊಸದಿಲ್ಲಿ, ಸೆ.19: ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್‍ ನ ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ಅರೆಸ್ಸೆಸ್ ವಿದ್ಯಾರ್ಥಿ ಘಟಕವಾದ ಎಬಿವಿಪಿಯ ಅಂಕಿವ್ ಬಸೋಯ ಅವರು ವಿವಾದಕ್ಕೀಡಾಗಿದ್ದಾರೆ. ತಮಿಳುನಾಡಿನ ತಿರುವಳ್ಳುವರ್ ವಿಶ್ವವಿದ್ಯಾಲಯದ ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ ಹಾಜರುಪಡಿಸಿ  ಅವರು ದಿಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರವೇಶಾತಿ ಪಡೆದಿದ್ದಾರೆ ಎನ್ನುವ ಆರೋಪ ಇದೀಗ ಕೇಳಿಬಂದಿದೆ.

ಬಸೋಯ ಅವರ ಅಂಕಪಟ್ಟಿ ಅಸಲಿಯೇ ಎಂದು ತಿಳಿಯಲು ತಮಿಳುನಾಡಿನ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್‍ಎಸ್‍ಯುಐ ಸಂಬಂಧಿತ ವಿವಿಗೆ ಪತ್ರ ಬರೆದ ಈ ಮಾಹಿತಿ ದೊರಕಿದೆ ಎನ್ನಲಾಗಿದೆ.  ಬಸೋಯ ಅವರ ಅಂಕಪಟ್ಟಿ ನಕಲಿ ಎಂದು ತಿರುವಳ್ಳುವರ್ ವಿವಿ ಹೇಳಿದೆಯೆಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ನಿಟ್ಟಿನಲ್ಲಿ ತನಗೆ ತಿರುವಳ್ಳುವರ್ ವಿವಿ ಬರೆದ ಪತ್ರವನ್ನು ಎನ್‍ಎಸ್‍ಯುಐ ಬಿಡುಗಡೆಗೊಳಿಸಿದೆ.

ಆದರೆ ಬಸೋಯ ಅವರು ಸಲ್ಲಿಸಿದ್ದ ಶೈಕ್ಷಣಿಕ ದಾಖಲೆಗಳನ್ನು ದೃಢೀಕರಿಸಿಯೇ ದಿಲ್ಲಿ ವಿವಿ ಅವರಿಗೆ ಪ್ರವೇಶಾತಿ ನೀಡಿತ್ತು ಎಂದು ಎಬಿವಿಪಿ ಹೇಳಿಕೊಂಡಿದೆ. ಎನ್‍ ಎಸ್ ಯುಐ ಆರೋಪ ಕೇವಲ ಪ್ರಚಾರ ತಂತ್ರವಾಗಿದೆ ಎಂದೂ ಎಬಿವಿಪಿ ಆರೋಪಿಸಿದೆ.

ಈ ಬಗ್ಗೆ ಎನ್ ಡಿಟಿವಿ ವೆಲ್ಲೂರಿನ ತಿರುವಳ್ಳುವರ್ ವಿವಿಯ ಅಧಿಕಾರಿ ಡಾ.ಪಿ.ಅಶೋಕನ್ ರನ್ನು ಸಂಪರ್ಕಿಸಿದ್ದು, “ಅಂಕಿವ್ ಬೈಸೋಯಾ ಎಂಬ ಹೆಸರಿನ ಯಾವೊಬ್ಬ ವಿದ್ಯಾರ್ಥಿಯೂ ಇಲ್ಲಿ ಕಲಿತಿಲ್ಲ. ಬೇರೆಲ್ಲಿಯೂ ನಮ್ಮ ಕೇಂದ್ರಗಳಾಗಲೀ, ಶಾಖೆಗಳಾಗಲೀ ಇಲ್ಲ. ಅದು ನಕಲಿ ಅಂಕಪಟ್ಟಿ. ಆ ಹೆಸರಿನ ಯಾವ ವಿದ್ಯಾರ್ಥಿಯೂ ನಮ್ಮ ಯುನಿವರ್ಸಿಟಿಯಲ್ಲಾಗಲೀ 100ಕ್ಕೂ ಹೆಚ್ಚಿನ ಕಾಲೇಜುಗಳಲ್ಲಾಗಲೀ ಕಲಿತಿಲ್ಲ. ನಮಗೆ ಇಂತಹ ಹಲವು ದೂರುಗಳು ಬರುತ್ತಿವೆ” ಎಂದವರು ಹೇಳಿದ್ದಾರೆ.

``ದಿಲ್ಲಿ ವಿವಿ ಪ್ರಕ್ರಿಯೆಯಂತೆ ಅಂಕಿವ್ ಬಸೋವ ಅವರ ಎಲ್ಲಾ ದಾಖಲೆಗಳನ್ನು  ಪರಿಶೀಲಿಸಲಾಗಿದೆ. ವಿವಿಯ ಯಾವುದೇ ವಿದ್ಯಾರ್ಥಿಯ ದಾಖಲೆಯನ್ನು ಇಂದು ಕೂಡ ಪರಿಶೀಲಿಸುವ ಅಧಿಕಾರ  ದಿಲ್ಲಿ ವಿವಿಗಿದೆ. ಆದರೆ ಯಾವುದೇ ವ್ಯಕ್ತಿಗೆ ಪ್ರಮಾಣಪತ್ರ ನೀಡುವ ಕೆಲಸ ಎನ್‍ ಎಸ್ ಯುಐ ಮಾಡುವ ಹಾಗಿಲ್ಲ. ಇಂತಹ ವದಂತಿಗಳು ಭವಿಷ್ಯದಲ್ಲಿ ಹರಡದಂತೆ ಅಂಕಿವ್ ಅವರ ಶೈಕ್ಷಣಿಕ ದಾಖಲೆಗಳು ಮಾತ್ರವಲ್ಲ ಎಲ್ಲಾ ದಿಲ್ಲಿ ವಿವಿ ವಿದ್ಯಾರ್ಥಿ ಯೂನಿಯನ್  ಪದಾಧಿಕಾರಿಗಳ ದಾಖಲೆಗಳನ್ನೂ ಪರಿಶೀಲಿಸುವ ಹಕ್ಕು ವಿಶ್ವವಿದ್ಯಾಲಯಕ್ಕೆ ಇದೆ'' ಎಂದು ಎಬಿವಿಪಿ ಹೇಳಿಕೆ ತಿಳಿಸಿದೆ.

ತರುವಾಯ ಟ್ವಿಟರಿಗರು ಈ ವಿಚಾರಕ್ಕೆ ಸ್ವಾರಸ್ಯಕರವಾಗಿ ಪ್ರತಿಕ್ರಿಯಿಸಿದ್ದು ಕೆಲವರು ಈ ವಿವಾದಕ್ಕೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ  ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಎದ್ದ ವಿವಾದಗಳಿಗೆ ಹೋಲಿಸಿದ್ದಾರೆ.

ಒಬ್ಬ ಟ್ವಿಟ್ಟರಿಗರಂತೂ ``ಭವಿಷ್ಯದ ಮೋದಿ.  ಹೊಸ ಪ್ರಧಾನಿ ಅಭ್ಯರ್ಥಿ ಹುಟ್ಟಿ ಬಂದಿದ್ದಾರೆ'' ಎಂದು ಅಂಕಿವ್ ಅವರನ್ನು ಅಣಕವಾಡಿದ್ದಾರೆ. ಇನ್ನೊಬ್ಬರು ಆತ ನಿಜವಾದ ಮೋದಿ ಅನುಯಾಯಿ ಹಾಗೂ ಬಿಜೆಪಿ ನಾಯಕತ್ವದ ಭಾಗವಾಗಲು ಅರ್ಹತೆ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಂದು ಟ್ವೀಟ್ ಅವರು ಮುಂದಿನ ಎಚ್‍ಆರ್‍ಡಿ ಸಚಿವರಾಗಬಹುದು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News