ಪಿಎನ್‍ಬಿ ಹಗರಣ : ದೇಶದ ಅತ್ಯಂತ ದೊಡ್ಡ ಕಾನೂನು ಸಂಸ್ಥೆಯ ಮೇಲೆ ಸಿಬಿಐ ನಿಗಾ

Update: 2018-09-19 09:39 GMT

ಮುಂಬೈ, ಸೆ. 19 : ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,000 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಏಜನ್ಸಿಗಳು ದೇಶದ ಅತಿ ದೊಡ್ಡ ಕಾನೂನು ಸಂಸ್ಥೆ ಸಿರಿಲ್ ಅಮರ್‍ಚಂದ್ ಮಂಗಲದಾಸ್ (ಕ್ಯಾಮ್) ಮೇಲೆ ನಿಗಾ ಇರಿಸಿದೆ.

ದೇಶ ಬಿಟ್ಟು ಪಲಾಯನಗೈದಿರುವ ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ, ವಜ್ರೋದ್ಯಮಿ ನೀರವ್ ಮೋದಿಯ ಸಂಸ್ಥೆಗೆ ಸೇರಿದ ಹಲವಾರು  ದಾಖಲೆ ಗಳನ್ನು ತನಿಖಾ ಏಜನ್ಸಿಗಳು ಈ ವರ್ಷದ ಫೆಬ್ರವರಿಯಲ್ಲಿ ಕ್ಯಾಮ್ ಕಚೇರಿಯಿಂದ ವಶಪಡಿಸಿಕೊಂಡ ನಂತರ ಈ ಸಂಸ್ಥೆಯ ಮೇಲೆ ಕಣ್ಣಿಡಲಾಗಿದೆ.

ಸುಮಾರು 50-60 ರಟ್ಟಿನ ಪೆಟ್ಟಿಗೆಗಳಲ್ಲಿದ್ದ ದಾಖಲೆಗಳನ್ನು ಮಿನಿ ಟ್ರಕ್ ಒಂದರಲ್ಲಿ ನೀರವ್ ಮೋದಿ ಸಂಸ್ಥೆಯ ಕಚೇರಿಯಿಂದ ಸಿರಿಲ್ ಅಮರ್‍ಚಂದ್ ಮಂಗಲದಾಸ್  ಕಚೇರಿಗೆ ಫೆಬ್ರವರಿ ತಿಂಗಳಲ್ಲಿ  ಸಾಗಿಸಲಾಗಿತ್ತೆಂದು ಮೂಲಗಳು ತಿಳಿಸಿದ್ದು ಫೆಬ್ರವರಿ 20ರಂದು ಸಿಬಿಐ ಅಧಿಕಾರಿಗಳು ಸಂಸ್ಥೆಯ ಕಚೇರಿಗೆ ಭೇಟಿಯಿತ್ತಾಗ ಸಭಾ ಕೊಠಡಿಯಲ್ಲಿ ಈ ದಾಖಲೆಗಳು  ಪತ್ತೆಯಾಗಿದ್ದವು. ಈ ಶೋಧನೆ ಎರಡು ದಿನಗಳ ಕಾಲ ಮುಂದುವರಿದಿದ್ದು ಫೆಬ್ರವರಿ 21ರ ರಾತ್ರಿ ಸಿಬಿಐ ಅಧಿಕಾರಿಗಳು  ಸುಮಾರು 24,625 ಪುಟಗಳಷ್ಟಿದ್ದ ದಾಖಲೆಗಳನ್ನು ವಶಕ್ಕೆ  ಪಡೆದುಕೊಂಡಿದ್ದಾರೆಂದು ಹಾಗೂ ಈ ದಾಖಲೆಗಳಲ್ಲಿ  ಹಣ ವರ್ಗಾವಣೆ ಹಾಗೂ ಇತರ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಯಿತ್ತು ಎನ್ನಲಾಗಿದೆ.

ಈ ಕಾನೂನು ಸಂಸ್ಥೆಯು ನೀರವ್ ಮೋದಿಯ ಸಂಸ್ಥೆಯ ಅಧಿಕೃತ ಕಾನೂನು ಸಲಹೆಗಾರನಾಗಿಲ್ಲದೇ ಇರುವ ಹೊರತಾಗಿಯೂ ಆತನಿಗೆ ಸೇರಿದ ಇಷ್ಟೊಂದು ಸಂಖ್ಯೆಯ ದಾಖಲೆಗಳನ್ನು ತನ್ನಲ್ಲೇಕೆ ಇರಿಸಿಕೊಂಡಿತ್ತೆಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಸಂಸ್ಥೆ  ಕೂಡ ಇಲ್ಲಿಯ ತನಕ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಅದರ ವಕ್ತಾರೆ ಮಧುಮಿತಾ ಪೌಲ್ ಅವರು ತಮ್ಮ ಸಂಸ್ಥೆ ನ್ಯಾಯಾಲಯದ ಮುಂದಿರುವ ಪ್ರಕರಣಗಳ ಬಗ್ಗೆ ಹೇಳಿಕೆ ನೀಡುವುದಿಲ್ಲ ಎಂದಿದ್ದಾರೆ.

ಸಿಬಿಐ ಮೇ ತಿಂಗಳಲ್ಲಿ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಈ ಕಾನೂನು ಸಂಸ್ಥೆಯ ಕಚೇರಿಯಿಂದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾದ ಬಗ್ಗೆ ಹೇಳಿಕೊಂಡಿತ್ತಾದರೂ ಸಂಸ್ಥೆಯ ವಿರುದ್ಧ ಯಾವುದೇ ಆರೋಪ ಹೊರಿಸಲಾಗಿಲ್ಲ.

ಸಿರಿಲ್ ಅಮರ್‍ಚಂದ್ ಮಂಗಲದಾಸ್ ಸಂಸ್ಥೆಯ ಬಳಿ 600ಕ್ಕೂ ಅಧಿಕ ವಕೀಲರುಗಳಿದ್ದು ಖ್ಯಾತ ಕಂಪೆನಿಗಳಾದ ಗೂಗಲ್, ಮೈಕ್ರೋಸಾಫ್ಟ್, ಐಸಿಐಸಿಐ ಬ್ಯಾಂಕಿಗೆ ಅದು ಕಾನೂನು ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News