ನವಾಝ್ ಶರೀಫ್, ಪುತ್ರಿ ಮರ್ಯಮ್ ರ ಜೈಲುಶಿಕ್ಷೆಯನ್ನು ಅಮಾನತುಗೊಳಿಸಿದ ಪಾಕ್ ಕೋರ್ಟ್

Update: 2018-09-19 17:07 GMT

ಇಸ್ಲಾಮಾಬಾದ್, ಸೆ. 19: ಇಸ್ಲಾಮಾಬಾದ್ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರನ್ನೊಳಗೊಂಡ ಪೀಠವೊಂದು, ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್, ಅವರ ಪುತ್ರಿ ಮತ್ತು ಅಳಿಯನ ಜೈಲುಶಿಕ್ಷೆಗಳನ್ನು ಬುಧವಾರ ಅಮಾನತಿನಲ್ಲಿಟ್ಟಿದೆ.

ಲಂಡನ್‌ನಲ್ಲಿ ವಿಲಾಸಿ ಫ್ಲಾಟ್‌ಗಳನ್ನು ಖರೀದಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಮಗೆ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಶರೀಫ್, ಅವರ ಪುತ್ರಿ ಮರ್ಯಮ್ ಮತ್ತು ಅಳಿಯ ಕ್ಯಾಪ್ಟನ್ (ನಿವೃತ್ತ) ಮುಹಮ್ಮದ್ ಸಫ್ದರ್ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠವು ಈ ತೀರ್ಪು ನೀಡಿದೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.

ತೀರ್ಪು ಓದಿದ ನ್ಯಾ. ಅತರ್ ಮಿನಲ್ಲಾ, ಜುಲೈ 6 ರಂದು ಅಕೌಂಟಬಿಲಿಟಿ ನ್ಯಾಯಾಲಯದ ನ್ಯಾಯಾಧೀಶ ಮುಹಮ್ಮದ್ ಬಶೀರ್ ನೀಡಿದ ತೀರ್ಪುಗಳನ್ನು ಅಮಾನತಿನಲ್ಲಿಟ್ಟರು.

ಆ್ಯವನ್‌ಫೀಲ್ಟ್ ಪ್ರಾಪರ್ಟಿ ಪ್ರಕರಣದಲ್ಲಿ ಶರೀಫ್, ಮರ್ಯಮ್ ಮತ್ತು ಸಫ್ದರ್‌ಗೆ ಕ್ರಮವಾರಿ 11 ವರ್ಷ, 8 ವರ್ಷ ಮತ್ತು ಒಂದು ವರ್ಷದ ಕಾರಾಗೃಹವಾಸ ಶಿಕ್ಷೆ ವಿಧಿಸಲಾಗಿತ್ತು.

ತಲಾ 5 ಲಕ್ಷ ರೂ. ಮೌಲ್ಯದ ಜಾಮೀನು ಬಾಂಡ್‌ಗಳನ್ನು ಸಲ್ಲಿಸುವಂತೆ ಶರೀಫ್, ಮರ್ಯಮ್ ಮತ್ತು ಸಫ್ದರ್‌ಗೆ ನ್ಯಾಯಾಲಯ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News