ದೇವೇಗೌಡರ ಮಕ್ಕಳಿಂದ ರಾಜ್ಯ ಲೂಟಿ: ಯಡಿಯೂರಪ್ಪ ಗಂಭೀರ ಆರೋಪ

Update: 2018-09-19 13:34 GMT

ಬೆಂಗಳೂರು, ಸೆ. 19: ರಾಜ್ಯದಲ್ಲಿ ತುಘಲಕ್ ದರ್ಬಾರು ನಡೆಯುತ್ತಿರುವುದು ಜನತೆ ನೋಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ಇಲ್ಲಿನ ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಶಾಸಕರ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಯಾವುದೇ ಸಚಿವರು ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕಮಿಷನ್ ಇಲ್ಲದೆ ಅಭಿವೃದ್ಧಿ ಕೆಲಸ ಆಗುವುದಿಲ್ಲ. ಕಮಿಷನ್ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ದೇವೇಗೌಡರ ಮಕ್ಕಳು ಅನೇಕ ಭ್ರಷ್ಟಾಚಾರ ನಡೆಸಿದ್ದು, ಜಿಲ್ಲಾಧಿಕಾರಿ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದ ಅವರು, ಸಚಿವ ಎಚ್.ಡಿ.ರೇವಣ್ಣ ಕುಟುಂಬ ಭೂಹಗರಣ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎ.ಮಂಜು ಆರೋಪಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತೇ ಆಡುವುದಿಲ್ಲ. ಆದರೆ, ಸಚಿವ ಎಚ್.ಡಿ.ರೇವಣ್ಣ ಈ ಬಗ್ಗೆ ಹಗುರವಾಗಿ ಮಾತಾಡ್ತಾರೆ. ರಾಜ್ಯದ ಬೊಕ್ಕಸವನ್ನು ದೇವೇಗೌಡರ ಮಕ್ಕಳು ಲೂಟಿ ಮಾಡ್ತಿದ್ದಾರೆಂದು ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆಯುತ್ತಿದೆ. ಆದರೆ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದ್ದು, 38 ಸ್ಥಾನ ಪಡೆದಿರುವ ಜೆಡಿಎಸ್ ಅಧಿಕಾರ ನಡೆಸುತ್ತಿದ್ದು, 104 ಸ್ಥಾನ ಗಳಿಸಿರುವ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಕೂತಿದ್ದೇವೆ ಎಂದು ಯಡಿಯೂರಪ್ಪ ನುಡಿದರು.

ಕಾಂಗ್ರೆಸ್-ಜೆಡಿಎಸ್ ಒಳಜಗಳದಿಂದ ಸರಕಾರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಈ ಸರಕಾರದಲ್ಲಿ ಕಮಿಷನ್ ಕೊಡದಿದ್ದರೆ ಯಾವುದೇ ಬಿಲ್ ಪಾಸ್ ಆಗುವುದಿಲ್ಲ. ಕರ್ನಾಟಕದಲ್ಲಿ 13 ಜಿಲ್ಲೆಗಳು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಆದರೆ, ಯಾವುದೇ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲವೆಂದು ದೂರಿದರು.

ವಿಶೇಷ ಪ್ಯಾಕೇಜ್‌ಗೆ ಮನವಿ: ಬರ ಪರಿಸ್ಥಿತಿ ಹಾಗೂ ಅತಿವೃಷ್ಟಿ ಹಿನ್ನೆಲೆಯಲ್ಲಿ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದು, ನಿನ್ನೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರಿಗೆ ಮನವಿ ಮಾಡಿಕೊಂಡಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಅರವಿಂದ್ ಲಿಂಬಾವಳಿ, ಸಿ.ಟಿ.ರವಿ, ರವಿಕುಮಾರ್, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಕೋಟ ಶ್ರೀನಿವಾಸ ಪೂಜಾರಿ, ಶ್ರೀರಾಮುಲು ಹಾಗೂ ಇತರರಉ ಹಾಜರಿದ್ದರು.

‘ಚದುರಂಗದ ಆಟದಲ್ಲಿ ಎದುರಾಳಿ ಇಲ್ಲದೆ ಪಾನ್ ಮೂವ್ ಮಾಡಿದ್ರೆ ಏನು ಪ್ರಯೋಜನ ? ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜವಾಬ್ದಾರಿಯಿಂದ ಮಾತನಾಡಬೇಕು. ಬೇಜವಾಬ್ದಾರಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ’

-ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News