"ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಆಯುರ್ವೇದಿಕ್, ಹೋಮಿಯೋಪತಿ ಪದ್ಧತಿಗೆ ಆದ್ಯತೆ"

Update: 2018-09-19 13:49 GMT

ಬೆಂಗಳೂರು, ಸೆ.19: ಕೇಂದ್ರ ಸರಕಾರದ ಆಯುಷ್ಮಾನ್ ಭಾರತ ಹಾಗೂ ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಆಯುರ್ವೇದ ಹಾಗೂ ಹೋಮಿಯೋಪತಿ ಚಿಕಿತ್ಸಾ ಪದ್ಧತಿಗೆ ಆದ್ಯತೆ ನೀಡಲು ಪ್ರಯತ್ನಿಸಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ ತಿಳಿಸಿದರು.

ಬುಧವಾರ ಕರ್ನಾಟಕ ಹೋಮಿಯೋಪತಿ ಮಂಡಳಿ ನಗರದ ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಅ್ಯಂಡ್ ವೇರ್ ಹೌಸಿಂಗ್ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ಹೋಮಿಯೋ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಯುರ್ವೇದ ಹಾಗೂ ಹೋಮಿಯೋಪತಿ ದೇಶದ ಪಾರಂಪರಿಕ ಚಿಕಿತ್ಸಾ ಪದ್ಧತಿಗಳಾಗಿದ್ದು, ಸಾವಿರಾರು ವರ್ಷಗಳಿಂದ ಜನತೆಯ ಆರೋಗ್ಯದಲ್ಲಿ ಮಹತ್ವವಾದ ಪಾತ್ರವಹಿಸಿವೆ. ಆದರೆ, ಅಲೋಪತಿ ಪದ್ಧತಿಗೆ ಹೆಚ್ಚಿನ ಮಹತ್ವ ಸಿಗುತ್ತಿದ್ದಂತೆ ಆಯುರ್ವೇದಿಕ್ ಹಾಗೂ ಹೋಮಿಯೋಪತಿ ಜನತೆಯಿಂದ ಮರೆಯಾಗುವ ಹಂತಕ್ಕೆ ಮುಟ್ಟಿದೆ. ಹೀಗಾಗಿ ನಮ್ಮ ಪಾರಂಪರಿಕ ಚಿಕಿತ್ಸಾ ಪದ್ಧತಿಯ ಮಹತ್ವ ಕುರಿತು ಜನತೆಯಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಲಾಗುವುದು ಎಂದು ಅವರು ಆಶಿಸಿದರು.

ಕೇರಳದಲ್ಲಿ ಆಯುರ್ವೇದ ಹಾಗೂ ಹೋಮಿಯೋಪತಿ ಪದ್ಧತಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಅಲೋಪತಿಗೆ ಇರುವಷ್ಟೆ ಸ್ಥಾನವನ್ನು ಪಾರಂಪರಿಕ ಚಿಕಿತ್ಸಾ ಪದ್ಧತಿಗೂ ನೀಡುತ್ತಾ ಬಂದಿದೆ. ಅದೇ ರೀತಿಯಲ್ಲಿ ಚೀನಾ ದೇಶವು ಆರೋಗ್ಯ ಕ್ಷೇತ್ರದಲ್ಲಿ ಆಧುನಿಕವಾಗಿ ಎಷ್ಟೆ ಪ್ರಗತಿಯನ್ನು ಸಾಧಿಸಿದ್ದರೂ ತನ್ನ ಪಾರಂಪರಿಕಾ ಚಿಕಿತ್ಸಾ ಪದ್ಧತಿಗೆ ಮೊದಲ ಸ್ಥಾನ ನೀಡಿದೆ. ಅವರ ಮಾದರಿಯಲ್ಲಿಯೆ ರಾಜ್ಯದಲ್ಲೂ ಆಯುರ್ವೇದಿಕ್ ಹಾಗೂ ಹೋಮಿಯೋಪತಿಯ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ಅವರು ಹೇಳಿದರು.

ದೇಶದಲ್ಲಿ ಹೋಮಿಯೋಪತಿ ಹಾಗೂ ಆಯುರ್ವೇದಿಕ್ ಚಿಕಿತ್ಸಾ ಪದ್ಧತಿಗಳೆರಡನ್ನೂ ಸಮಾನವಾಗಿ ನೋಡಬೇಕಿದೆ. ಇವೆರಡೂ ಚಿಕಿತ್ಸಾ ಪದ್ಧತಿಗಳು ಒಂದಾಗಿ ಅಲೋಪತಿ ಚಿಕಿತ್ಸಾ ಪದ್ಧತಿಯನ್ನು ಮೀರಿ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಹಾಗೂ ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಕರ್ನಾಟಕ ಹೋಮಿಯೋಪತಿ ಮಂಡಳಿಯ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್ ಮಾತನಾಡಿ, ರಾಜ್ಯದಲ್ಲಿ 13ಸಾವಿರಕ್ಕೂ ಹೆಚ್ಚು ಹೋಮಿಯೋಪತಿ ವೈದ್ಯರಿದ್ದಾರೆ. ಕೆಲವು ಕಡೆ ಅನಧಿಕೃತವಾಗಿ ಹೋಮಿಯೋಪತಿ ಪ್ರಾಕ್ಟೀಸ್ ಮಾಡುತ್ತಿರುವ ನಕಲಿ ವೈದ್ಯರನ್ನು ಪೊಲೀಸರಿಗೆ ಹಿಡಿದು ಕೊಡಲಾಗಿದೆ. ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಕುರಿತು ಜನತೆಯಲ್ಲಿ ವಿಶ್ವಾಸ ಮೂಡಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಹೋಮಿಯೋಪತಿ ಮಂಡಳಿಗೆ ಪ್ರತ್ಯೇಕ ಭವನ ಕಟ್ಟಬೇಕೆಂದು ಕಳೆದ 40ವರ್ಷದಿಂದ ನಡೆಸಿದ ಪ್ರಯತ್ನಕ್ಕೆ ಇಂದು ಫಲಸಿಕ್ಕಿದೆ. ಒಂದು ಕೋಟಿ ರೂ.ವೆಚ್ಚದಲ್ಲಿ ಮಂಡಳಿಗೆ ಕಚೇರಿ ಕಟ್ಟಿ, ನಂತರದಲ್ಲಿ ಸುಮಾರು 8 ಕೋಟಿ ರೂ.ನಲ್ಲಿ ಕಾಂಪ್ಲೆಕ್ಸ್ ಕಟ್ಟಲಾಗುವುದು. ಅದರಲ್ಲಿ ಸುಸಜ್ಜಿತವಾದ ಸಭಾಂಗಣ, ಹೊಟೇಲ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ನಿರ್ದೇಶಕ ಮೀನಾಕ್ಷಿ ನೇಗಿ, ಬಿಬಿಎಂಪಿ ಸದಸ್ಯೆ ಪ್ರತಿಮಾ, ಹೋಮಿಯೋಪತಿ ಮಂಡಳಿಯ ರಿಜಿಸ್ಟ್ರಾರ್ ಡಾ.ಅಶ್ವತ್ಥ ನಾರಾಯಣ ಮತ್ತಿತರರಿದ್ದರು.

ಹೋಮಿಯೋಪತಿಗೆ ಸಂಬಂಧಿಸಿದ ಚಿಕಿತ್ಸಾಲಯಗಳನ್ನು ಪ್ರತಿ ತಾಲೂಕಿಗೊಂದು ಸ್ಥಾಪಿಸುವಂತೆ ಕರ್ನಾಟಕ ಹೋಮಿಯೋಪತಿ ಮಂಡಳಿ ಬೇಡಿಕೆ ಇಟ್ಟಿದೆ. ಪ್ರಾಥಮಿಕವಾಗಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಥಾಪಿಸಲಾಗುವುದು. ತದ ನಂತರ ಎಲ್ಲ ನಗರಗಳಲ್ಲೂ ಸ್ಥಾಪಿಸಲು ಚಿಂತನೆ ನಡೆಸಲಾಗುವುದು.

ಶಿವಾನಂದ ಎಸ್.ಪಾಟೀಲ, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News