ಅಲ್ಪಸಂಖ್ಯಾತ ಮಹಿಳೆಯರ ಸಬಲೀಕರಣಕ್ಕೆ ಅಗತ್ಯ ಸಹಕಾರ: ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಸೀರ್ ಹುಸೇನ್

Update: 2018-09-19 13:57 GMT

ಬೆಂಗಳೂರು, ಸೆ.19: ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಆರಂಭಗೊಂಡಿರುವ ಸಹಕಾರ ಸಂಘಕ್ಕೆ ಸರಕಾರದ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಸೀರ್ ಹುಸೇನ್ ತಿಳಿಸಿದರು.

ಇಲ್ಲಿನ ಆರ್.ಟಿ.ನಗರದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗಾಗಿ ಆರಂಭಿಸಲಾಗಿರುವ ಪ್ರತ್ಯೇಕ ಸಹಕಾರ ಸಂಘ ಇದೇ ಮೊದಲನೆಯದು ಎಂದರು.

ಸಹಕಾರ ಸಂಘದ ಅಧ್ಯಕ್ಷೆ ಬಲ್ಕೀಸ್ ಬಾನು, ಶಿವಮೊಗ್ಗ ಜಿಲ್ಲಾ ಪಂಚಾಯತ್‌ನ ಸದಸ್ಯೆ, ಅಧ್ಯಕ್ಷೆ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅಲ್ಪಸಂಖ್ಯಾತರ ಆಯೋಗಕ್ಕೆ ಅರೆ ನ್ಯಾಯಿಕ ಅಧಿಕಾರ ಸಿಗುವಲ್ಲಿ ಬಲ್ಕೀಸ್ ಬಾನು ಪಟ್ಟಿರುವ ಶ್ರಮ ಅವಿಸ್ಮರಣೀಯ ಎಂದು ಅವರು ಹೇಳಿದರು.

ಸಹಕಾರ ಸಂಘದಲ್ಲಿ ಸದಸ್ಯರೊಂದಿಗೆ ಪ್ರಮುಖವಾಗಿ ಶೇರುದಾರರ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಮಹಿಳೆಯರ ಸಬಲೀಕರಣಕ್ಕೆ ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟು ನೆರವು ಒದಗಿಸಲು ಶ್ರಮಿಸಬೇಕು. ಸಾಲ ನೀಡಿ, ಅದನ್ನು ಮರುಪಾವತಿ ಮಾಡಿಸಿಕೊಳ್ಳುವಲ್ಲಿಯೂ ಕ್ರಮ ಕೈಗೊಳ್ಳಬೇಕು ಎಂದು ನಸೀರ್‌ಹುಸೇನ್ ತಿಳಿಸಿದರು.

ಕೆಎಂಡಿಸಿ, ವಕ್ಫ್‌ಬೋರ್ಡ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಥವಾ ರಾಜ್ಯ ಸರಕಾರದಿಂದಲೇ ನೇರವಾಗಿ ನೆರವು ಒದಗಿಸಲು ನಾವು ಶ್ರಮಿಸುತ್ತೇವೆ. ಕೇಂದ್ರ ಸರಕಾರವು ನನ್ನನ್ನು ಸಂಸತ್ತಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸ್ಥಾಯಿ ಸಮಿತಿ ಸದಸ್ಯನನ್ನಾಗಿ ನೇಮಕ ಮಾಡಿದೆ. ಮೌಲಾನ ಆಝಾದ್ ಫೌಂಡೇಷನ್ ಸೇರಿದಂತೆ ಇನ್ನಿತರ ಸಂಸ್ಥೆಗಳ ಮೂಲಕವು ನೆರವು ಒದಗಿಸಲು ಪ್ರಯತ್ನ ಪಡುತ್ತೇನೆ ಎಂದು ಅವರು ಹೇಳಿದರು.

ಮಹಿಳೆಯರು ಹೊರಗೆ ಬಂದು ಕೆಲಸ ಮಾಡುವ ಸ್ವಾತಂತ್ರ ನೀಡಬೇಕು. ಅವರಲ್ಲಿ ಕ್ಷಮತೆ, ಸಾಮರ್ಥ್ಯ ಇದ್ದರೂ ನಾವು ಅವಕಾಶ ನೀಡುವುದಿಲ್ಲ. ಮುಸ್ಲಿಮ್ ಸಮಾಜದಲ್ಲಿ ಮಹಿಳೆಯರು ಹೊರಗೆ ಬಂದು ಕೆಲಸ ಮಾಡದಂತಹ ಅನೇಕ ಕಟ್ಟು ಪಾಡುಗಳನ್ನು ಹಾಕಿಕೊಂಡಿದ್ದೇವೆ. ಮಹಿಳೆಯರ ಸಬಲೀಕರಣಕ್ಕೆ ಅಗತ್ಯ ಪ್ರೋತ್ಸಾಹ ನೀಡಬೇಕಿದೆ ಎಂದು ನಸೀರ್ ಹುಸೇನ್ ತಿಳಿಸಿದರು.

ನನ್ನ ತಾಯಿ ಶಿಕ್ಷಕಿ. ಆಕೆಯೂ ಕೆಲಸ ಮಾಡಲು ಹೊರಗೆ ಹೋಗಲು ಸಾಕಷ್ಟು ವಿರೋಧ ಎದುರಿಸಬೇಕಾಗಿತ್ತು. ಆದರೆ, ನನ್ನ ತಾಯಿ ಶಿಕ್ಷಕಿಯಾದ ಪರಿಣಾಮ ನಾವು ಐದು ಮಂದಿ ಸಹೋದರ-ಸಹೋದರಿಯರು ಸ್ನಾತಕೋತ್ತರ ಪದವೀಧರರಾಗಿದ್ದೇವೆ. ಇವತ್ತು ನಮ್ಮ ನೆಂಟರಿಷ್ಟರಲ್ಲಿ ಸುಮಾರು 50 ಮಂದಿ ಶಿಕ್ಷಕರು ಇದ್ದಾರೆ ಎಂದು ಅವರು ಹೇಳಿದರು.

ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ನನಗೆ ಪರಿಚಯವಿರುವ ಸ್ಥಳಗಳಲ್ಲಿ ಸಹಕಾರ ಸಂಘದ ಘಟಕಗಳನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಪಡುತ್ತೇನೆ. ಈ ಸಂಘವನ್ನು ಕೇವಲ ಆರ್ಥಿಕ ವ್ಯವಹಾರಗಳಿಗೆ ಸೀಮಿತಗೊಳಿಸುವುದು ಬೇಡ, ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣ ಚಟುವಟಿಕೆಗಳಿಗೂ ಇದನ್ನು ಮುಂದುವರೆಸಿ ಎಂದು ನಸೀರ್ ಹುಸೇನ್ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಬಲ್ಕೀಸ್‌ ಬಾನು, ಉಪಾಧ್ಯಕ್ಷೆ ಪ್ರೊ.ನಾಝ್ನೀನ್‌ ಬೇಗಮ್, ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಮುಬೀನ್ ಮುನವ್ವರ್, ಬಿಬಿಎಂಪಿ ಸದಸ್ಯ ಅಬ್ದುಲ್‌ ವಾಜೀದ್, ಕೆಪಿಸಿಸಿ ಕಾರ್ಯದರ್ಶಿ ನಿಸಾರ್‌ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News