ಹೊಸ ತಾಲೂಕುಗಳಿಗೆ ಸೌಲಭ್ಯಕ್ಕೆ ಕ್ರಮ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-09-19 14:36 GMT

ಬೆಂಗಳೂರು, ಸೆ. 19: ರಾಜ್ಯದಲ್ಲಿ ಈಗಾಗಲೇ ರಚನೆಯಾಗಿರುವ 50 ಹೊಸ ತಾಲೂಕುಗಳಿಗೆ ವಿವಿಧ ಇಲಾಖೆಗಳ ಕಚೇರಿಯನ್ನು ಮಂಜೂರು ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ಕಂದಾಯ ಇಲಾಖೆಯ ವಿವಿಧ ವಿಷಯಗಳ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಎಂ.ಪಿ.ಪ್ರಕಾಶ್ ವರದಿಯನ್ವಯ ಹೊಸದಾಗಿ ರಚನೆಯಾದ ತಾಲೂಕಿನಲ್ಲಿ ಕನಿಷ್ಠ 14ಇಲಾಖೆಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಹೊಸ ತಾಲೂಕುಗಳಲ್ಲಿ ಉಳಿದ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳನ್ನು ಸ್ಥಾಪಿಸಲು ಸಹಮತಿ ನೀಡುವಂತೆ ಆರ್ಥಿಕ ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವನೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದು.

ಈ ಸಂದರ್ಭದಲ್ಲಿ ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣದ ಕುರಿತು ಚರ್ಚೆ ನಡೆಸಲಾಯಿತು. ಇದಲ್ಲದೆ ಹೊಸ ತಾಲೂಕು ರಚನೆಯ ಬಗ್ಗೆ ಬಂದಿರುವ ಬೇಡಿಕೆಗಳಲ್ಲಿ ನಿಜವಾಗಿಯೂ ಅಗತ್ಯವಿರುವ ಸ್ಥಳವನ್ನು ಗುರುತಿಸುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು. ಭೂ ಮಾಪನ ಇಲಾಖೆಯ ಕರ್ನಾಟಕ ಭೂ ಕಂದಾಯ ಕಾಯ್ದೆಯ 1964ರ ಕಲಂ 94 (ಸಿ) ಅಡಿಯಲ್ಲಿ 26,922 ಅರ್ಜಿಗಳನ್ನು ಹಾಗೂ ಮತ್ತು 94 (ಸಿ.ಸಿ) ಅಡಿಯಲ್ಲಿ 13,971 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸಾಮಾಜಿಕ ಭದ್ರತೆ ಪಿಂಚಣಿ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರೈತರ ಆತ್ಮಹತ್ಯೆ ಪ್ರಕರಣದಲ್ಲಿ 2018ರ ಜೂನ್ ಅಂತ್ಯದವರೆಗೆ 35 ಪ್ರಕರಣಗಳಿಗೆ 5ಲಕ್ಷ ರೂ. ಪರಿಹಾರ ನೀಡಲಾಗಿತ್ತು. 2018ರ ಆಗಸ್ಟ್ ಅಂತ್ಯಕ್ಕೆ ಈ ಪ್ರಕರಣಗಳ ವಿಲೇವಾರಿ ಚುರುಕುಗೊಂಡಿದ್ದು 114 ಪ್ರಕರಣಗಳಲ್ಲಿ 5 ಲಕ್ಷ ರೂ.ಪರಿಹಾರ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 2742 ಕಂದಾಯ ಗ್ರಾಮಗಳನ್ನು ರಚಿಸಬೇಕಾಗಿದ್ದು, 1413 ಕಂದಾಯ ಗ್ರಾಮಗಳ ರಚನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 724ಕಂದಾಯ ಗ್ರಾಮಗಳ ರಚನೆಗೆ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ, ಭೂಪರಿವರ್ತನೆ ಕಾಯ್ದೆಯನ್ನು ಸರಳಗೊಳಿಸಲು ಸೆ.17ರಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವ ದೇಶಪಾಂಡೆ ತಿಳಿಸಿದರು. ಸರಳೀಕರಣ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷವಿಲ್ಲದಂತೆ ಎಚ್ಚರವಹಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದರು. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವಿವಿಧ ಐದು ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ಸಿದ್ಧತೆ ನಡೆದಿದ್ದು, ಈ ಬಗ್ಗೆ ಕಾನೂನು ಇಲಾಖೆಯ ಸಲಹೆ ಪಡೆಯಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಖತ್ರಿ, ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಗಂಗಾರಾಂ ಬಡೇರಿಯಾ, ಭೂ ಮಾಪನ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹಾ ಪರಿವೀಕ್ಷಕ ಡಾ.ಕೆ.ವಿ.ತ್ರಿಲೋಕಚಂದ್ರ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News