ಸರಕಾರ ರಚನೆ ನಿರ್ಧಾರದ ಅಧಿಕಾರ ಬಿಎಸ್‌ವೈಗೆ: ಬಿಜೆಪಿ ಪ್ರ.ಕಾರ್ಯದರ್ಶಿ ಅರವಿಂದ ಲಿಂಬಾವಳಿ

Update: 2018-09-19 14:42 GMT

ಬೆಂಗಳೂರು, ಸೆ. 20: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಗೊಂಡರೆ ಬಿಜೆಪಿ ನೇತೃತ್ವದ ನೂತನ ಸರಕಾರ ರಚನೆ ತೀರ್ಮಾನ ಕೈಗೊಳ್ಳುವ ಪೂರ್ಣ ಅಧಿಕಾರವನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ನೀಡಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಪಕ್ಷದ ವಿಶೇಷ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾವುದೇ ಆಪರೇಷನ್ ಕಮಲ ನಡೆಸುತ್ತಿಲ್ಲ. ಆದರೆ, ಮೈತ್ರಿ ಸರಕಾರದ ಪಾಲುದಾರ ಪಕ್ಷಗಳ ನಡುವಿನ ಆಂತರಿಕ ಕಲಹದಿಂದಲೇ ಸರಕಾರ ಬೀಳಲಿದೆ ಎಂದು ನುಡಿದರು.

ಒಂದು ವೇಳೆ ಮೈತ್ರಿ ಸರಕಾರ ಬಿದ್ದರೆ ಪರ್ಯಾಯ ಸರಕಾರ ರಚನೆ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಿದ್ದು, ಸರಕಾರ ಬಿದ್ದರೆ ಬಿಜೆಪಿ ಸರಕಾರ ರಚನೆಯ ನಿರ್ಧಾರದ ಸಂಪೂರ್ಣ ಅಧಿಕಾರವನ್ನು ಯಡಿಯೂರಪ್ಪಗೆ ಶಾಸಕಾಂಗ ಸಭೆ ಹಾಗೂ ವಿಶೇಷ ಸಭೆ ನೀಡಿದೆ ಎಂದು ಅವರು ತಿಳಿಸಿದರು.

ವಿಧಾನಸಭೆಯಿಂದ ಪರಿಷತ್ತಿನ ಮೂರು ಸ್ಥಾನಗಳಿಗೆ ಅ.3ಕ್ಕೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ, ನಾಮಪತ್ರ ಸಲ್ಲಿಕೆ ನಿರ್ಧಾರದ ಅಧಿಕಾರವನ್ನೂ ಬಿಎಸ್‌ವೈ ಅವರಿಗೆ ನೀಡಲು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಟ್ರಬಲ್ ಶೂಟರ್ಸ್‌ಗೆ ಸಂಕಷ್ಟ: ಟ್ರಬಲ್ ಶೂಟರ್ ಎಂದೆ ಖ್ಯಾತಿ ಗಳಿಸಿರುವ ಸಚಿವ ಡಿ.ಕೆ.ಶಿವಕುಮಾರ್ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರಕಾರ ಅಸ್ಥಿರತೆ ಬಗ್ಗೆ ಅವರ ಪಕ್ಷದಲ್ಲೆ ಚರ್ಚೆ ನಡೆಯುತ್ತಿದೆ. ಮೈತ್ರಿ ಸರಕಾರ ಬಿದ್ದರೆ ಸರಕಾರ ರಚನೆಗೆ ನಾವು ಸಿದ್ಧ ಎಂದರು.

ಅವರ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ. ಅವರ ಶಾಸಕರ ಕೆಲಸಗಳು ಸರಕಾರದಲ್ಲಿ ಆಗುತ್ತಿಲ್ಲ. ಹೀಗಾಗಿ ಇಂತಹ ಸ್ಥಿತಿ ಬಂದಿದೆ. ಆದುದರಿಂದಲೇ ಬಿಜೆಪಿ ಶಾಸಕರಿಗೆ ಆಮಿಷವೊಡ್ಡಲಾಗುತ್ತಿದೆ. ನಮ್ಮ ಪಕ್ಷದ ಶಾಸಕ ಸುಭಾಷ್ ಗುತ್ತೇದಾರ್‌ಗೆ ಸಿಎಂ ಆಹ್ವಾನ ನೀಡಿದ್ದಾರೆ ಎಂದು ಟೀಕಿಸಿದರು.

ಬಿಎಸ್‌ವೈ ಪ್ರವಾಸ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಎಸ್‌ವೈ 15 ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದ ಅವರು, ರಾಜ್ಯದ ಮೈತ್ರಿ ಸರಕಾರದ ಆಡಳಿತ ವೈಫಲ್ಯದ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದರು. ಪರಿಷತ್ ಸದಸ್ಯ ಎನ್.ರವಿಕುಮಾರ್, ಮುಖಂಡ ಆನಂದ್ ಗೋಷ್ಟಿಯಲ್ಲಿ ಹಾಜರಿದ್ದರು.

ಬಿಜೆಪಿಯ 104 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಕೆಲವರು ಅನುಮತಿ ಪಡೆದು ಇಂದಿನ ಸಭೆಗೆ ಗೈರು ಹಾಜರಾಗಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಇದ್ದರು. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಯಾವ ಶಾಸಕರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ’

-ಅರವಿಂದ ಲಿಂಬಾವಳಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News