ಹೊಸದಾಗಿ ಮೂರು ವಾಣಿಜ್ಯ ನ್ಯಾಯಾಲಯ ಸ್ಥಾಪನೆ: ಸಚಿವ ಕೃಷ್ಣ ಭೈರೇಗೌಡ

Update: 2018-09-19 14:45 GMT

ಬೆಂಗಳೂರು, ಸೆ. 19: ರಾಜ್ಯದಲ್ಲಿ ಹೊಸದಾಗಿ ಮೂರು ವಾಣಿಜ್ಯಾತ್ಮಕ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲು ಮಂಜೂರಾತಿ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣ ಭೈರೇಗೌಡ ಇಂದಿಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ವಾಣಿಜ್ಯ ವ್ಯವಹಾರಗಳ ದಾವೆಗಳ ಸುಗಮ ನಿರ್ವಹಣೆಗಾಗಿ ಈ ಮೂರು ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಎರಡು ನ್ಯಾಯಾಲಯಗಳು ಬೆಂಗಳೂರಿನಲ್ಲಿ ಹಾಗೂ ಒಂದು ನ್ಯಾಯಾಲಯ ಬಳ್ಳಾರಿಯಲ್ಲಿ ಸ್ಥಾಪನೆ ಮಾಡಲು ಮಂಜೂರಾತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ವ್ಯವಹಾರವನ್ನು ಸರಳ ರೀತಿಯಲ್ಲಿ ಅನುಷ್ಠಾನಗೊಳಿಸುವುದಕ್ಕಾಗಿ ವಾಣಿಜ್ಯಾತ್ಮಕ ನ್ಯಾಯಾಲಯಗಳ ವಾಣಿಜ್ಯ ವಿಭಾಗ ಹಾಗೂ ಹೈಕೋರ್ಟಿನ ವಾಣಿಜ್ಯ ಮೇಲ್ಮನವಿ ವಿಭಾಗದ ದಾಖಲಾಗುವ ಪ್ರಕರಣಗಳನ್ನು ಈ ನ್ಯಾಯಾಲಯ ನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಈ ನ್ಯಾಯಾಲಯಗಳಿಗೆ ಅಗತ್ಯವಾದ ಹುದ್ದೆಗಳಿಗೂ ಮಂಜೂರಾತಿ ನೀಡಲಾಗಿದೆ. ಪ್ರತಿ ನ್ಯಾಯಾಲಯಕ್ಕೆ ಒಬ್ಬರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ಒಬ್ಬರು ಶಿರಸ್ತೆದಾರರು, ತೀರ್ಪು ಬರಹಗಾರರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು, ಅಟೆಂಡರ್ ಹಾಗೂ ಜವಾನ ಸೇರಿ 8 ಹುದ್ದೆಗಳ ಸೃಜನೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News