ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿಲ್ಲ: ಸಚಿವ ಡಿ.ಕೆ.ಶಿವಕುಮಾರ್

Update: 2018-09-19 14:53 GMT

ಬೆಂಗಳೂರು, ಸೆ.19: ಜಾರಿ ನಿರ್ದೇಶನಾಲಯದಿಂದ ನನಗೆ ಯಾವ ನೋಟಿಸ್ ಕೂಡ ಬಂದಿಲ್ಲ. ನಾನು ಯಾರಿಗೂ ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಅತ್ಯಾಚಾರ ಮಾಡಿಲ್ಲ, ಕಾನೂನು ಬಾಹಿರವಾದ ಯಾವ ಕೆಲಸಗಳನ್ನೂ ಮಾಡಿಲ್ಲ. ಆದುದರಿಂದ, ಬಿಜೆಪಿ ಮಾಡುವ ಆರೋಪಗಳಿಗೆ ಹೆದರಿ ಓಡಿ ಹೋಗಲು ನಾನು ಹೇಡಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಬುಧವಾರ ನಗರದ ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ವಕ್ತಾರ ಸಂದೀಪ್ ಪಾತ್ರ ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡಲು ಆಸ್ಪತ್ರೆಯಿಂದ ಬಂದಿದ್ದೇನೆ ಎಂದರು.

ಕೇಂದ್ರ ಸರಕಾರದ ಸ್ವಾಯತ್ತ ಸಂಸ್ಥೆಗಳಲ್ಲಿ ಬಿಜೆಪಿ ತನ್ನ ಪಾತ್ರ ಇರುವುದನ್ನು ಒಪ್ಪಿಕೊಂಡಿರುವುದು ಸಂತೋಷದ ವಿಷಯ. 2017ರ ಆ.2ರಂದು ಗುಜರಾತ್ ಶಾಸಕರು ನಮ್ಮ ಜಿಲ್ಲೆಯ ರೆಸಾರ್ಟ್‌ನಲ್ಲಿದ್ದ ಸಂದರ್ಭದಲ್ಲಿ, ಅದೇ ದಿನ ನನ್ನ ಕುಟುಂಬ, ಸ್ನೇಹಿತರು, ಹಿತೈಷಿಗಳಿಗೆ ಸೇರಿದ 82 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಯಿತು. ಆ ಮೂಲಕ ನಮ್ಮ ಸುಪರ್ದಿಯಲ್ಲಿದ್ದ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಯಿತು ಎಂದು ಅವರು ಹೇಳಿದರು.

ಅನಾರೋಗ್ಯದ ಕಾರಣದಿಂದ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ಆದರೆ, ಕೆಲವು ಮಾಧ್ಯಮಗಳಲ್ಲಿ ಇಡಿ ನೋಟಿಸ್ ಬಂದಿರುವುದರಿಂದ ನಾನು ಆಸ್ಪತ್ರೆಗೆ ದಾಖಲಾಗಿರುವುದಾಗಿ ಬಿಂಬಿಸಲಾಯಿತು. ನಾನು ಹೇಡಿಯಲ್ಲ, ಓಡಿ ಹೋಗುವುದಿಲ್ಲ. ನನ್ನ ವಿರುದ್ಧ ಪ್ರಕರಣ ದಾಖಲಿಸಲು ಇಡಿಗೆ ಒಂದು ವರ್ಷ ಒಂದು ತಿಂಗಳು ಬೇಕಾಯಿತೇ? ಎಂದು ಶಿವಕುಮಾರ್ ಪ್ರಶ್ನಿಸಿದರು.

ಕಾನೂನಿಗೆ ಗೌರವ ಕೊಡುವ ವ್ಯಕ್ತಿ ನಾನು. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ವಿಚಾರಣೆಗೆ ಸ್ಪಂದಿಸಿದ್ದೇನೆ. ಇಡಿಯಿಂದ ನೋಟಿಸ್ ಬಂದರೆ ಅವರಿಗೂ ಸ್ಪಂದಿಸುತ್ತೇನೆ. ನಾನು ಕಳಂಕರಹಿತವಾಗಿ ಹೊರ ಬರುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಮಾಧ್ಯಮಗಳಲ್ಲಿ ತೋರಿಸಿದ 6.8 ಕೋಟಿ ರೂ, 8 ಕೋಟಿ ರೂ.ಹಣ ನನ್ನದ್ದಲ್ಲ. ಅದು ನನ್ನ ಸ್ನೇಹಿತರಿಗೆ ಸೇರಿದ್ದು. ಆದರೆ, ಅದು ನನಗೆ ಸಂಬಂಧಿಸಿದ್ದು ಎಂದು ಬಿಂಬಿಸಲಾಗುತ್ತಿದೆ. ನನ್ನ ಮನೆಯಲ್ಲಿ ಸಿಕ್ಕ 41 ಲಕ್ಷ ರೂ.ಮಾತ್ರ ನನ್ನದು. ಆದಾಯ ತೆರಿಗೆ ಇಲಾಖೆಯವರು ಕೇಳಿದರೆ ಅದರ ಮೂಲವನ್ನು ತೋರಿಸುತ್ತೇನೆ ಎಂದು ಅವರು ಹೇಳಿದರು.

ಆದಾಯ ತೆರಿಗೆ ಅಧಿಕಾರಿಗಳು ನನ್ನ ಕುಟುಂಬ, ಸ್ನೇಹಿತರಿಗೆ ಕಿರುಕುಳ ನೀಡಿದ್ದಾರೆ. ನನ್ನ ಸಿಬ್ಬಂದಿಗೆ ಬೆದರಿಕೆಯೊಡ್ಡು, ಕೊಲೆ ಮಾಡುವುದಾಗಿ ಬೆದರಿಸಿ ಹೇಳಿಕೆಗಳನ್ನು ಪಡೆದಿದ್ದಾರೆ. ಇದ್ಯಾವುದಕ್ಕೂ ನಾನು ಬಗ್ಗುವುದಿಲ್ಲ. ನಾನು ನನ್ನ ಪಕ್ಷ ಹಾಗೂ ಪಕ್ಷದ ನಾಯಕರಿಗೆ ಯಾವುದೇ ರೀತಿಯ ಹಣ ನೀಡಿಲ್ಲ. ಎಸ್.ಜಿ., ಆರ್.ಜಿ.ಇದೆಲ್ಲ ಯಾವ ಡೈರಿಯಲ್ಲಿದೆ. ಜೈನ್ ಡೈರಿ, ಅಡ್ವಾಣಿ ಡೈರಿ, ಮೋದಿ ಡೈರಿ ಬಗ್ಗೆ ನ್ಯಾಯಾಲಯ ಏನು ಹೇಳಿದೆ ಎಂಬುದನ್ನು ಸಂದೀಪ್ ಪಾತ್ರಗೆ ಗೊತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಯಡಿಯೂರಪ್ಪ ಭ್ರಷ್ಟಾಚಾರದ ಚೆಕ್‌ಗಳನ್ನು ಪಡೆದಿದ್ದಾರೆ. ಆದಾಯ ತೆರಿಗೆ ಇಲಾಖೆಯ ತನಿಖಾಧಿಕಾರಿಗಳೇ ಅದನ್ನು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಅದರ ಬಗ್ಗೆ ಉತ್ತರ ನೀಡುತ್ತಾರೆಯೇ? ಯಡಿಯೂರಪ್ಪ ತಮ್ಮ ಪಕ್ಷದ ಸಭೆಯಲ್ಲಿ ಎರಡು ಮೂರು ದಿನಗಳಲ್ಲಿ ನನ್ನನ್ನು ಜೈಲಿಗೆ ಕಳುಹಿಸಿ, ರಾಜ್ಯದಲ್ಲಿ ಸರಕಾರ ರಚನೆ ಮಾಡುವುದಾಗಿ ಹಗಲು ಗನಸು ಕಾಣುತ್ತಿದ್ದಾರೆ. ನನಗೆ ಜೈಲಿಗೆ ಕಳುಹಿಸಿದರೂ ಹೆದರುವುದಿಲ್ಲ. ಎಲ್ಲವನ್ನೂ ಎದುರಿಸುತ್ತೇನೆ. ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಶಿವಕುಮಾರ್ ತಿಳಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನನ್ನ ಪಕ್ಷಕ್ಕೆ ಹಾನಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯವರು ಸರಕಾರ ರಚನೆ ಮಾಡಲು ಸಾಧ್ಯವಿಲ್ಲ. ನಮ್ಮ ಶಾಸಕರಿಗೆ ಎಷ್ಟು ಹಣ, ಅಧಿಕಾರದ ಆಮಿಷ ಒಡ್ಡಿದ್ದಾರೆ ಎಂಬುದು ಗೊತ್ತಿದೆ. ಸಮಯ ಬಂದಾಗ ನಾನು ಅದನ್ನು ಬಹಿರಂಗಪಡಿಸುತ್ತೇನೆ ಎಂದು ಅವರು ಹೇಳಿದರು.

ಬಿಜೆಪಿ ಇವತ್ತು ಅಧಿಕಾರದಲ್ಲಿರುತ್ತದೆ, ನಾಳೆ ಇರಲ್ಲ. ಆದರೆ, ಸ್ವಾಯತ್ತ ಸಂಸ್ಥೆಗಳು ಇರುತ್ತವೆ ಎಂಬುದನ್ನು ಮರೆಯಬೇಡಿ. ನನ್ನ ಮನೆಯಲ್ಲಿ ಯಾವ ದಾಖಲೆಗಳು ಸಿಕ್ಕಿವೆ ಎಂಬುದು ಸಂದೀಪ್ ಪಾತ್ರಗೆ ಗೊತ್ತಿಲ್ಲ. ಇಡಿ ಅಧಿಕಾರಿಗಳು ನನಗೆ ಕರೆಯಲಿ, ಅವರಿಗೆ ಎಲ್ಲವನ್ನೂ ತಿಳಿಸುತ್ತೇನೆ. ನನ್ನ ಬಳಿ ಯಾವ ಡೈರಿ ಇದೆ, ಯಾವ ಡೈರಿಗಳ ಕಾಪಿಗಳು ಇವೆ ಎಲ್ಲವನ್ನೂ ದೇಶದ ಮುಂದೆ ಇಡುತ್ತೇನೆ ಎಂದು ಅವರು ಹೇಳಿದರು.

2019ರ ಚುನಾವಣೆಯಲ್ಲಿ ದೇಶ ನಿಮಗೆ ಫಲಿತಾಂಶ ತೋರಿಸುತ್ತದೆ. ನೀವು ನಮ್ಮನ್ನು ಬ್ಲಾಕ್‌ಮೇಲ್ ಮಾಡಲು ಸಾಧ್ಯವಿಲ್ಲ. 82 ಕಡೆ ದಾಳಿ ನಡೆದಾಗ ಬಲವಂತವಾಗಿ ಎಲ್ಲ ಪ್ರಕರಣಗಳಲ್ಲಿಯೂ ಆಸ್ತಿಗಳು, ಹಣ ಎಲ್ಲವೂ ನನಗೆ ಸೇರಿದ್ದು ಎಂದು ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ನಾವು ಹೋರಾಟ ಮಾಡಿ ಅದನ್ನು ಸಾಬೀತು ಪಡಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.

ನನ್ನನ್ನು ಜೈಲಿಗೆ ಕಳುಹಿಸಿದರೂ ಬಿಜೆಪಿ ಇಲ್ಲಿ ಸರಕಾರ ರಚನೆ ಮಾಡಲು ಸಾಧ್ಯವಿಲ್ಲ. ಅವರು ನನ್ನನ್ನು ಯಾವ ಕಾರಣಕ್ಕಾಗಿ ಬಂಧಿಸುತ್ತಾರೆ. ಯಾವ ಹವಾಲ ಕೂಡ ನಾನು ಮಾಡಿಲ್ಲ. 41 ಲಕ್ಷ ರೂ.ಮಾತ್ರ ನನ್ನದು, ಉಳಿದದ್ದು ನನ್ನ ಸ್ನೇಹಿತರದ್ದು. ನನ್ನ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಯಾಕೆ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಲಿ ಎಂದು ಅವರು ತಿಳಿಸಿದರು.

ನನ್ನ ಬಳಿಯಿರುವ ಪ್ರತಿಯೊಂದು ರೂಪಾಯಿಯ ಲೆಕ್ಕ ಇದೆ. 30 ಕೋಟಿ ರೂ.ತೆರಿಗೆಯನ್ನು ನನ್ನ ಕುಟುಂಬಕ್ಕೆ ಸಂಬಂಧಿಸಿದ್ದನ್ನು ಪಾವತಿಸಿದ್ದೇನೆ. ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ನಾನು ನಾಲ್ಕು ಜನ ಶಾಸಕರನ್ನು ಕಳುಹಿಸಬೇಕಿತ್ತು. ಆದರೆ, ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ನಾನು ಮಾಡಿಲ್ಲ ಎಂದು ಅವರು ಹೇಳಿದರು.

ನನ್ನ ವಿರುದ್ಧ ನಡೆಯುತ್ತಿರುವ ಪಿತೂರಿ ಬಗ್ಗೆ ಬಿಜೆಪಿಯ ಸಂಸದರೇ ನನ್ನ ಸಹೋದರ ಡಿ.ಕೆ.ಸುರೇಶ್‌ಗೆ ತಿಳಿಸಿದ್ದಾರೆ. ಬಿಜೆಪಿಯವರಿಗೆ ಇವೆಲ್ಲ ಶೋಭೆ ತರುವುದಿಲ್ಲ. ಮುಖ್ಯಮಂತ್ರಿಗೂ ಈ ಎಲ್ಲ ವಿಷಯಗಳ ಬಗ್ಗೆ ಗೊತ್ತಿದೆ. ನಾನು ಯಾವ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ನಾನೇಕೆ ರಾಜೀನಾಮೆ ನೀಡಲಿ. ಜೈಲಿಗೆ ಹೋಗಿ ಬಂದವರು ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆ(ಯಡಿಯೂರಪ್ಪ), ಜೈಲಿನಲ್ಲಿದ್ದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ(ಅಮಿತ್ ಶಾ). ಇನ್ನು ನನ್ನ ವಿರುದ್ಧ ಚಾರ್ಜ್‌ಶೀಟ್ ಆಗಿಲ್ಲ ಆಗಲೇ ರಾಜೀನಾಮೆ ಕೇಳುತ್ತಿದ್ದಾರೆ. ನ್ಯಾಯಾಲಯದ ಮೇಲೆ ಒತ್ತಡ ತಂದು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News