ಆಗಸ್ಟಾ ವೆಸ್ಟ್‌ಲ್ಯಾಂಡ್ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಗಡಿಪಾರು: ದುಬೈ ನ್ಯಾಯಾಲಯ

Update: 2018-09-19 14:55 GMT

ಹೊಸದಿಲ್ಲಿ, ಸೆ.19: 3,600 ಕೋಟಿ ರೂ. ಮೊತ್ತದ ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಒಪ್ಪಂದದ ಮಧ್ಯವರ್ತಿ ಎಂದು ಆರೋಪಿಸಲಾಗಿರುವ ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮೈಕಲ್‌ನ ಗಡಿಪಾರಿಗೆ ದುಬೈ ನ್ಯಾಯಾಲಯ ಆದೇಶಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಮಾಡಿರುವ ತನಿಖೆಗಳ ಆಧಾರದಲ್ಲಿ ಕ್ರಿಶ್ಚಿಯನ್ ಮೈಕಲ್‌ರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಭಾರತ ಅಧಿಕೃತವಾಗಿ ಗಲ್ಫ್ ರಾಷ್ಟ್ರಕ್ಕೆ ಮನವಿ ಮಾಡಿತ್ತು.

ದುಬೈ ನ್ಯಾಯಾಲಯದ ಆದೇಶವು ಅರೆಬಿಕ್ ಭಾಷೆಯಲ್ಲಿದ್ದು ಅದನ್ನು ಭಾರತೀಯ ಅಧಿಕಾರಿಗಳಿಗಾಗಿ ಇಂಗ್ಲಿಶ್‌ಗೆ ತರ್ಜುಮೆ ಮಾಡಬೇಕಾದ ಅಗತ್ಯವಿರುವ ಕಾರಣ ಈ ಆದೇಶದ ಸಂಪೂರ್ಣ ವಿವರ ಬುಧವಾರವಷ್ಟೇ ತಿಳಿಯಲಿದೆ ಎಂದು ವರದಿ ತಿಳಿಸಿದೆ.

ಈ ಒಪ್ಪಂದವು ತನಗೆ ಸಿಗುವಂತೆ ನೋಡಿಕೊಳ್ಳಲು ಕ್ರಿಶ್ಚಿಯನ್ ಮೈಕಲ್‌ಗೆ ಆಗಸ್ಟಾ ವೆಸ್ಟ್‌ಲ್ಯಾಂಡ್ ಸುಮಾರು 225 ಕೋಟಿ ರೂ. ಪಾವತಿಸಿತ್ತು ಎಂದು ಇಡಿ 2016ರಲ್ಲಿ ಮೈಕಲ್ ವಿರುದ್ಧದ ದೋಷಾರೋಪಣಾ ಪಟ್ಟಿಯಲ್ಲಿ ಆರೋಪಿಸಿತ್ತು. ಮೈಕಲ್ ಹೊರತಾಗಿ ಇತರ ಇಬ್ಬರು ಮಧ್ಯವರ್ತಿಗಳಾದ ಗೀಡೊ ಹಶ್ಕೆ ಮತ್ತು ಕಾರ್ಲೊ ಜೆರೊಸರನ್ನೂ ಇಡಿ ಮತ್ತು ಸಿಬಿಐ ತನಿಖೆಗೊಳಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News