ಆರೆಸ್ಸೆಸ್ ಎಂದರೆ ರಾಷ್ಟ್ರೀಯ ಸುಳ್ಳುಗಾರರ ಸಂಘ: ಪ್ರೊ.ಕೆ.ಎಸ್.ಭಗವಾನ್

Update: 2018-09-19 17:04 GMT

ಬೆಂಗಳೂರು, ಸೆ.19: ಆರೆಸ್ಸೆಸ್ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವಲ್ಲ, ರಾಷ್ಟ್ರೀಯ ಸುಳ್ಳುಗಾರರ ಸಂಘ. ಹೀಗಾಗಿ, ಅವರ ಮಾತನ್ನು ಯಾರೂ ನಂಬಬಾರದು ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಗರದ ಎನ್‌ಜಿಒ ಸಭಾಂಗಣದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಆಯೋಜಿಸಿದ್ದ ‘ಅಸಹಿಷ್ಣುತೆಯನ್ನು ಕೊನೆಗೊಳಿಸೋಣ, ಫ್ಯಾಸಿಸಂ ವಿರುದ್ಧ ಒಂದಾಗೋಣ’ ರಾಷ್ಟ್ರೀಯ ಅಭಿಯಾನದ ಭಾಗವಾಗಿ ‘ಜುಮ್ಲಾ ರಿಪಬ್ಲಿಕ್’ ಎಂಬ ಸಾಕ್ಷಚಿತ್ರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂವಿಧಾನದಲ್ಲಿ ಸಮಾನತೆ, ಸ್ವಾತಂತ್ರ, ಸಹೋದರತ್ವ, ಸಹಭಾಳ್ವೆ ನೀಡಲಾಗಿದೆ. ಆದರೆ, ಆರೆಸ್ಸೆಸ್‌ಗೆ ಇದರಲ್ಲಿ ನಂಬಿಕೆಯಿಲ್ಲ. ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಅಲ್ಲದೆ, ಚುನಾವಣೆಯ ಸಂದರ್ಭಲ್ಲಿ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ, ದೇಶದಲ್ಲಿನ ಅಲ್ಪಸಂಖ್ಯಾತರು ತಮ್ಮ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಸಂಘಪರಿವಾರ ಸ್ವಯಂ ಸೇವಕರು ಎನ್ನುವ ಮೂಲಕ ಸೇವಕ ಪದಕ್ಕೆ ಅಪಮಾನಿಸುತ್ತಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರು ಜಾಗೃತರಾಗುತ್ತಿದ್ದಾರೆ. ಅದೇ ರೀತಿಯಲ್ಲಿ ಹಿಂದೂ ಧರ್ಮದಲ್ಲಿರುವ ಶೋಷಿತ ಸಮುದಾಯ ಜಾಗೃತಗೊಳ್ಳುತ್ತಿದೆ. ಆದರೆ, ಅದು ಸಾಕಾಗುತ್ತಿಲ್ಲ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಾಗೃತರಾಗಬೇಕು. ನಮ್ಮ ಸಮಾಜದಲ್ಲಿ ಯಾರಿಗೂ ತಮ್ಮದೇ ಆದ ಸಾಂಸ್ಕೃತಿಕ ನಾಯಕರಿಲ್ಲ. ಒಂದೆರಡು ಸಮುದಾಯದಲ್ಲಿದ್ದರೂ, ನಾವೇ ಶ್ರೇಷ್ಟರು, ಉಳಿದವರೆಲ್ಲಾ ಕನಿಷ್ಠರು ಎಂದು ವಾದಿಸುತ್ತಿದ್ದಾರೆ ಎಂದು ಹೇಳಿದರು.

ಹಿಂದೂ ಧರ್ಮದಲ್ಲಿರುವ ಶೋಷಿತರಿಗೆ ದೇಶ ಇಂದಿಗೂ ಸರಿಯಾಗಿ ಅರ್ಥವಾಗಿಲ್ಲ. ಮೊದಲು ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ಭಾರತ ಎಂಬುದು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಹಲವಾರು ಧರ್ಮ, ಜಾತಿಗಳಿವೆ. ಅದನ್ನು ಅರ್ಥ ಮಾಡಿಕೊಳ್ಳುವುದಷ್ಟು ಸುಲಭವಲ್ಲ. ಸತತವಾದ ಅಧ್ಯಯನ ಮೂಲಕ ಅರ್ಥ ಮಾಡಿಕೊಳ್ಳಬೇಕು ಎಂದ ಸಲಹೆ ನೀಡಿದ ಅವರು, ಸಮಗ್ರವಾದ ತಿಳುವಳಿಕೆ ಇಲ್ಲದಿದ್ದರಿಂದ ಆಳುವ ವರ್ಗ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ 2014 ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕೇವಲ ಶೇ.31 ರಷ್ಟು ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಆದರೆ, ಶೇ.69 ಮತಗಳನ್ನು ಪಡೆದಿರುವವರು ನೋಡುತ್ತಾ ಕೂತಿದ್ದಾರೆ. ಹೀಗಾಗಿ, 2019 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕು. ಸೀಟುಗಳನ್ನು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸಬೇಕು. ಬಿಜೆಪಿ ಅಭ್ಯರ್ಥಿಯ ವಿರುದ್ಧವಾಗಿ ಕೇವಲ ಒಂದು ಪಕ್ಷದ ಅಧಿಕೃತ ಅಭ್ಯರ್ಥಿಯಷ್ಟೇ ಸ್ಪರ್ಧೆ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.

ಭಾರತದಲ್ಲಿ ಹೆಣ್ಣು-ಗಂಡು ಎರಡು ಧರ್ಮಗಳಷ್ಟೇ ಉಳಿಯಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಜಾತಿ, ಧರ್ಮವನ್ನು ಮೀರಿ ಅಂತರ್ ಜಾತಿ ವಿವಾಹಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಆ ಮೂಲಕ ಜಾತಿ, ಧರ್ಮಗಳನ್ನು ಮೀರಿದ ಸಮ ಸಮಾಜ ನಿರ್ಮಿಸಬೇಕು. ಎಲ್ಲವನ್ನು ಮೀರಿದ ವಾತಾವರಣ ಸೃಷ್ಟಿಸಬೇಕು ಎಂದು ಕರೆ ನೀಡಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ದೇಶದಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಹಿಂದುತ್ವ ಶಕ್ತಿ ಹೆಚ್ಚಾಗಿದೆ. ಹಿಂದುತ್ವವಾದಿಗಳ ಅಟ್ಟಹಾಸ ಮಿತಿ ಮೀರಿದೆ. ಆದರೆ, ನಾವೂ ಹಿಂದೂಗಳೇ. ನಮ್ಮದು ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ, ರಾಮಕೃಷ್ಣ ಪರಮಹಂಸರು ಪ್ರತಿಪಾದಿಸಿದ ಹಿಂದೂ ಧರ್ಮವಾಗಿದೆ ಎಂದರು. ಬಿಜೆಪಿ ಹಾಗೂ ಸಂಘಪರಿವಾರ ತಮ್ಮದೇ ರೀತಿಯಲ್ಲಿ ದೇಶವನ್ನು ಕಟ್ಟಲು ಮುಂದಾಗಿದ್ದಾರೆ. ರಾಜ್ಯಾಂಗವನ್ನು ಧಿಕ್ಕರಿಸಿ, ಮನುಸ್ಮತಿಯನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಒಂದಾಗುವ ಮೂಲಕ ನಾವು ನವ ಭಾರತವನ್ನು ಕಟ್ಟಬೇಕಿದೆ. ಅದಕ್ಕಾಗಿ, ಹಿಂದೂ, ಮುಸ್ಲಿಮ್, ಕ್ರೈಸ್ತ ಎಂಬ ಭೇದ-ಭಾವವಿಲ್ಲದೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಅವರು ನುಡಿದರು.

ಆರೆಸ್ಸೆಸ್ ಈ ದೇಶದಲ್ಲಿ ಮುಸ್ಲಿಮ್, ಕ್ರೈಸ್ತರು ಇರೋವರೆಗೂ ರಾಷ್ಟ್ರಧ್ವಜ ಹಾರಿಸುವುದಿಲ್ಲ, ಬದಲಿಗೆ ನಮ್ಮ ಭಗವಾನ್ ಧ್ವಜವನ್ನೇ ರಾಷ್ಟ್ರಧ್ವಜವನ್ನಾಗಿ ಹಾರಿಸುತ್ತೇವೆ ಎಂದು ಘೋಷಿಸಿದ್ದರು. ಆದರೆ, ಇಂದು ಅವರೇ ದೇಶಪ್ರೇಮದ ಬಗ್ಗೆ ಪಾಠ ಮಾಡುತ್ತಿದ್ದಾರೆ. ಅಲ್ಲದೆ, ನಾವು ಮುಸ್ಲಿಮ್‌ರನ್ನು ಹೊರಗಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಚುನಾವಣೆಯ ತಂತ್ರವಾಗಿದ್ದು, ಇದಕ್ಕೆ ಸೊಪ್ಪು ಹಾಕಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಪಿ.ವಿ.ಶುಹೈಬ್, ಪ್ರಧಾನ ಕಾರ್ಯದರ್ಶಿ ಟಿ.ಅಬ್ದುಲ್ ನಾಸಿರ್, ರಾಜ್ಯಾಧ್ಯಕ್ಷ ಮಹಮ್ಮದ್ ತಪ್ಸೀರ್, ಪ್ರಧಾನ ಕಾರ್ಯದರ್ಶಿ ರವೂಫ್, ಕೇಂದ್ರ ಸಮಿತಿ ಸದಸ್ಯರಾದ ಪಿ.ಅಬ್ದುಲ್ ನಾಸಿರ್, ವಸೀಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಆರೆಸ್ಸೆಸ್ ಹಾಗೂ ಅದರ ಅಂಗ ಸಂಸ್ಥೆಗಳು ಹಾಗೂ ಅಧಿಕಾರದಲ್ಲಿರುವ ಸರಕಾರ ಶೈಕ್ಷಣಿಕ ವ್ಯವಸ್ಥೆಯನ್ನು ನಾಶ ಮಾಡಲು ಮುಂದಾಗಿದ್ದಾರೆ. ಇತ್ತೀಚಿಗೆ ಜೆಎನ್‌ಯು ನಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಗೆಲ್ಲುವುದಿಲ್ಲ ಎಂಬ ಸತ್ಯ ಅರಿವಾದ ಕೂಡಲೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಪರಿವಾರದ ವಿದ್ಯಾರ್ಥಿ ಸಂಘಟನೆ ನಡೆದುಕೊಂಡಿದೆ. ಆದರೆ, ಕೊನೆಗೆ ಪ್ರಜಾಪ್ರಭುತ್ವ ಗೆದ್ದಿದೆ. ಹೋರಾಟಗಾರರನ್ನು, ಲೇಖಕರನ್ನು, ಸಾಹಿತಿಗಳಿಗೆ ನಕ್ಸಲ್ ಪಟ್ಟ ಕಟ್ಟುತ್ತಿದ್ದಾರೆ. ಪ್ರತಿಭಟಿಸಿದರೆ, ನಮ್ಮ ಹಕ್ಕುಗಳನ್ನು ಕೇಳಿದರೆ ದೇಶದ್ರೋಹಿ ಸರ್ಟಿಫಿಕೇಟ್ ನೀಡುತ್ತಿದ್ದಾರೆ.

-ಪಿ.ವಿ.ಶುಹೈಬ್, ಸಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News