ಅ.15ರೊಳಗೆ ವಿವಿ ಕುಲಪತಿ-ಸದಸ್ಯರ ನೇಮಕ: ಸಚಿವ ಜಿ.ಟಿ.ದೇವೇಗೌಡ

Update: 2018-09-19 17:03 GMT

ಬೆಂಗಳೂರು, ಸೆ.19: ರಾಜ್ಯ ವ್ಯಾಪ್ತಿಯ ವಿಶ್ವವಿದ್ಯಾಲಯಗಳಿಗೆ ಅ.15ರೊಳಗಾಗಿ ಕುಲಪತಿ, ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಬುಧವಾರ ನಗರದ ಚಾಮರಾಜಪೇಟೆಯ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಆವರಣದಲ್ಲಿ ನೂತನ ಕಟ್ಟಡಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ಚುರುಕುಗೊಳ್ಳಬೇಕಿದೆ. ಹೀಗಾಗಿ, ಅ.15ರೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದೆಂದರು.

ಎಲ್ಲರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯಗಳ ನಿಯಮದ ಪ್ರಕಾರ ಪ್ರಾಧ್ಯಾಪಕರು ಹಾಗೂ ಶಿಕ್ಷಣ ತಜ್ಞರನ್ನು ಮಾತ್ರವೇ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದ ಅವರು, ರಾಜಕಾರಣಿಗಳ ಹಿಂಬಾಲಕರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಲಾಗುತ್ತಿತ್ತು ಎಂದರು.

ಅ.14ಕ್ಕೆ ಮೆರವಣಿಗೆ: ಮೈಸೂರು ದಸರಾದಲ್ಲಿ ಆಯೋಜಿಸಲಾಗುತ್ತಿರುವ ಯುವ ಸಂಭ್ರಮಾಚರಣೆಯಲ್ಲಿ ರಾಜ್ಯದ ನಾನಾ ಕಾಲೇಜುಗಳ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ಕಲಾವಿದರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ಅವಕಾಶ ನೀಡುವ ಸಲುವಾಗಿ ಅ.14ರಂದು ಅರಮನೆ ಮೈದಾನದಲ್ಲಿ ಆನೆಗಳ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.

ಜಾಗ ನೀಡಿ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಪದ್ಮಾಶೇಖರ್ ಮಾತನಾಡಿ, ದೇಶದ ಯಾವುದೇ ಸಂಸ್ಕೃತ ವಿವಿಗಳಲ್ಲಿ ಇಲ್ಲದಂತಹ ಒಂದು ವರ್ಷದ ಕಾಂಪ್ಯೂಟೇಷನ್ ಲಿಂಗ್ವಿಸ್ಟಿಕ್ ಡಿಪ್ಲೋಮಾ ಕೋರ್ಸ್ ಅನ್ನು ಕರ್ನಾಟಕ ಸಂಸ್ಕೃತ ವಿವಿಯಿಂದ ಆರಂಭಿಸಲಾಗುತ್ತಿದೆ. ಈ ಕೋರ್ಸ್ ಕಲಿಯಲು ವಿದೇಶಿ ವಿದ್ಯಾರ್ಥಿಗಳು ಹೆಚ್ಚು ಉತ್ಸುಕರಾಗಿದ್ದಾರೆ. ಹೀಗಾಗಿ ಈ ಕೋರ್ಸ್‌ಗೆ ಅಧ್ಯಯನ ಕೇಂದ್ರ ತೆರೆಯಲು ಬೆಂಗಳೂರು ವಿವಿಯಲ್ಲಿ 10 ಎಕರೆ ಜಾಗ ನೀಡಬೇಕು ಎಂದು ಮನವಿ ಮಾಡಿದರು.

‘ವಿವಿ ವಾಹನ ಬಳಸುವಂತಿಲ್ಲ’

ವಿಶ್ವವಿದ್ಯಾಲಯದಲ್ಲಿರುವ ರಿಜಿಸ್ಟ್ರಾರ್, ಅಧಿಕಾರಿಗಳು ಸರಕಾರದ ಅಧಿಕೃತ ವಾಹನಗಳನ್ನು ಬಳಸಿಕೊಂಡು ವಿಧಾನಸೌಧ ಮತ್ತು ಹೊರ ಜಿಲ್ಲೆಗಳಲ್ಲಿ ರಾಜಕಾರಣಿಗಳ ಹಿಂದೆ ಸುತ್ತುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಒಂದು ವೇಳೆ ತುರ್ತಾಗಿ ವಿಧಾನಸೌಧ ಅಥವಾ ಬೇರೆ ಜಿಲ್ಲೆಗಳಿಗೆ ತೆರಳಬೇಕಾದಂತಹ ಸಂದರ್ಭದಲ್ಲಿ, ಕುಲಪತಿಗಳು ಮತ್ತು ರಿಜಿಸ್ಟ್ರಾರ್‌ಗಳು ಕಡ್ಡಾಯವಾಗಿ ಇಲಾಖೆಯ ಅನುಮತಿ ಪಡೆಯಬೇಕೆಂದು ಆದೇಶ ಹೊರಡಿಸಲಾಗುವುದು.

-ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News