ಗುತ್ತಿಗೆದಾರರಿಂದ ಕಾರ್ಮಿಕರಿಗೆ ವಂಚನೆ: ಆರೋಪ

Update: 2018-09-19 15:22 GMT

ಬೆಂಗಳೂರು, ಸೆ.19: ಕಾರ್ಮಿಕ ಕಾನೂನಿನ ಅನ್ವಯ ನೇತಾಜಿ ಸುಭಾಷ್ ದಕ್ಷಿಣ ಕ್ರೀಡಾ ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಗುತ್ತಿಗೆದಾರರು ವೇತನ ನೀಡದೇ ವಂಚಿಸುತ್ತಿದ್ದಾರೆ ಎಂದು ಕ್ರೀಡಾಪಟು ವೀರಯ್ಯ ಹಿರೇಮಠ್ ಆರೋಪಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರ ಮತ್ತು ಗುತ್ತಿಗೆದಾರರ ನಡುವಿನ ಒಪ್ಪಂದ ಪ್ರಕಾರ ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಲುವಾಗಿ ಮಂಜುನಾಥ್ ಏಜೆನ್ಸಿ ಪೌರ ಕಾರ್ಮಿಕರನ್ನು ಕಳಿಸಿಕೊಟ್ಟಿದೆ. ಆದರೆ, ನಿಯಮದ ಅನ್ವಯ ಸರಿಯಾದ ಸಮಯಕ್ಕೆ ವೇತನ ನೀಡದೇ ವಂಚಿಸಲಾಗುತ್ತಿದೆ ಎಂದು ದೂರಿದರು.

ಕಾರ್ಮಿಕ ಕಾನೂನು ಪ್ರಕಾರ ಪ್ರತಿಯೊಬ್ಬ ಕಾರ್ಮಿಕರಿಗೆ 553 ರೂ.ಗಳು ವೇತನ ನೀಡಬೇಕು. ಆದರೆ, ಗುತ್ತಿಗೆದಾರರು ಕೇವಲ 333 ರೂ.ಗಳು ನೀಡುತ್ತಿದ್ದು, ಉಳಿದ ಹಣವನ್ನು ಕಬಳಿಸುತ್ತಿದ್ದಾರೆ. ಮಾಸಿಕ 16 ಸಾವಿರದ 590 ರೂ.ಗಳು ನೀಡಬೇಕಿದ್ದರೂ, ಗುತ್ತಿಗೆದಾರರು ಕೇವಲ 10 ಸಾವಿರ ರೂ.ಗಳನ್ನು ನೀಡುತ್ತಿದ್ದಾರೆ. ಒಬ್ಬರಿಂದ ಮಾಸಿಕ ಸುಮಾರು ಆರು ಸಾವಿರ ರೂ.ಗಳನ್ನು ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ರೀಡಾ ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದಲ್ಲಿ 20 ಜನ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಗುತ್ತಿಗೆದಾರರ ಹಾಜರಾತಿ ಪುಸ್ತಕದಲ್ಲಿ 34 ಜನ ಕಾರ್ಮಿಕರು ಎಂದು ನಮೂದಿಸಲಾಗಿದೆ. ಈ ಸಂಬಂಧ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಕೂಡಲೇ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಅವರಿಗೆ ಸಹಕಾರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಸಿಗಬೇಕಾದ ನ್ಯಾಯಬದ್ಧವಾದ ವೇತನವನ್ನು ನೀಡಬೇಕು. ವಂಚಿಸಿರುವ ಎಲ್ಲ ಹಣವನ್ನು ಪಾವತಿಸಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News