ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಾಜರಾಗಲು ಹೈಕೋರ್ಟ್ ತಾಕೀತು

Update: 2018-09-19 16:57 GMT

ಬೆಂಗಳೂರು, ಸೆ.19: ಕೊಲೆಯತ್ನ ಪ್ರಕರಣದ ಆರೋಪಿಯನ್ನು ಹಾಜರುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಗುರುವಾರ ಬೆಳಗ್ಗೆ 10.30ಕ್ಕೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೈಕೊರ್ಟ್ ಬುಧವಾರ ತಾಕೀತು ಮಾಡಿದೆ.

ಕೊಲೆಯತ್ನ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಮಂಗಳೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕಾವೂರು ಠಾಣಾ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠವು ಈ ಸೂಚನೆ ನೀಡಿತು.

ಮಂಗಳೂರಿನ ಮೂಡುಶೆಡ್ಡೆ ಎಂಬಲ್ಲಿ 2012ರಲ್ಲಿ ವ್ಯಕ್ತಿಯೊಬ್ಬನ ಮೇಲೆ ಕೊಲೆಯತ್ನ ಪ್ರಕರಣ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ್ದ ಕಾವೂರು ಠಾಣಾ ಪೊಲೀಸರು, ಗಣೇಶ, ಲಾಯ್ಡಿ ಮಾಂತೀರೊ ಮತ್ತು ಬಿಪಿನ್ ಎಂಬ ಆರೋಪಿಗಳನ್ನು ಬಂಧಿಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮಂಗಳೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ, ಈ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ 2016ರ ಎ.6ರಂದು ತೀರ್ಪು ನೀಡಿತ್ತು. ಈ ಆದೇಶ ಪ್ರಶ್ನಿಸಿ ಕಾವೂರು ಠಾಣಾ ಪೊಲೀಸರು ಹೈಕೋರ್ಟ್‌ಗೆ ಮೇಲ್ಮನವಿ ಲ್ಲಿಸಿದ್ದರು.

ಅದರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಆರೋಪಿಗಳ ಹಾಜರಾತಿಗೆ ಸಮನ್ಸ್ ನೀಡಿತ್ತು. ಗಣೇಶ್ ಹಾಗೂ ಬಿಪಿನ್ ವಿಚಾರಣೆಗೆ ಹಾಜರಾಗಿದ್ದರೆ, ಲಾಯ್ಡ್ ಮಾಂತೀರೊ ಗೈರಾಗಿದ್ದನು. ಇದರಿಂದ ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿದ್ದರೂ ಆತ ಕೋರ್ಟ್‌ಗೆ ಬಂದಿರಲಿಲ್ಲ. ಇದರಿಂದ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದ್ದ ಹೈಕೋರ್ಟ್, ಬುಧವಾರಕ್ಕೆ ವಿಚಾರಣೆ ಮುಂದೂಡಿತ್ತು. ಆದರೆ, ಬುಧವಾರವೂ ಆರೋಪಿಯನ್ನು ಹಾಜರುಪಡಿಸದಕ್ಕೆ ಪ್ರಕರಣದ ಕುರಿತು ವಿವರಣೆ ನೀಡಲು ಗುರುವಾರ ಬೆಳಗ್ಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಆಯುಕ್ತರಿಗೆ ನ್ಯಾಯಪೀಠ ನಿರ್ದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News