ಮಾಸ್ತಿ ಸಮಗ್ರ ಸಾಹಿತ್ಯ ಮಾನವೀಯ ಮೌಲ್ಯಗಳ ಹುಡುಕಾಟವಾಗಿದೆ: ಸಾಹಿತಿ ಎಂ.ಎಚ್.ಕೃಷ್ಣಯ್ಯ

Update: 2018-09-19 17:00 GMT

ಬೆಂಗಳೂರು, ಸೆ.19: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಮಗ್ರ ಸಾಹಿತ್ಯವು ಮನುಷ್ಯ ಹಾಗೂ ಸಮಾಜ, ಮನುಷ್ಯ-ಮನುಷ್ಯ ನಡುವಿನ ಮಾನಮೀಯ ಮೌಲ್ಯಗಳ ಹುಡುಕಾಟವಾಗಿದೆ ಎಂದು ಹಿರಿಯ ಸಾಹಿತಿ ಎಂ.ಎಚ್.ಕೃಷ್ಣಯ್ಯ ಅಭಿಪ್ರಾಯಿಸಿದರು.

ಸದ್ಭಾವನಾ ಪ್ರತಿಷ್ಠಾನವು ನಗರದ ಉದಯಭಾನು ಕಲಾ ಸಂಘದಲ್ಲಿ ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ಸಂದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್-ಮರುನೋಟ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬದುಕಿನ ಯಾವ ಮೌಲ್ಯ ಬದುಕನ್ನು ಸಹನೀಯಗೊಳಿಸುತ್ತದೆಯೊ ಅಂತಹ ಮೌಲ್ಯ ಎಲ್ಲ ಕಾಲಕ್ಕೂ ಇರಬೇಕೆಂದು ಬಯಸುವುದೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯದ ಒಟ್ಟು ಆಶಯವಾಗಿದೆ. ಅವರ ಸಣ್ಣ ಕತೆಗಳು ಪದೇ ಪದೇ ಓದಿದಾಗಲು ವ್ಯಕ್ತಿಗಳ ವಿವಿಧ ರೀತಿಯ ಸ್ವಭಾವಗಳ ದರ್ಶನವಾಗುತ್ತದೆ ಎಂದು ಅವರು ಶ್ಲಾಘಿಸಿದರು.

ಮಾಸ್ತಿಯವರು ತಮ್ಮ ಸಾಹಿತ್ಯದ ಮೂಲಕ ಧರ್ಮದ ಹುಡುಕಾಟ ನಡೆಸಿದ್ದಾರೆ. ಇಲ್ಲಿ ಧರ್ಮವೆಂದರೆ, ಮನುಷ್ಯ ಹಾಗೂ ಸಮಾಜ, ಮನುಷ್ಯ ಹಾಗೂ ನಿಸರ್ಗ, ಮನುಷ್ಯ ಹಾಗೂ ಮನುಷ್ಯನ ನಡುವಿನ ಸಂಬಂಧವಾಗಿದೆ. ಇಲ್ಲಿ ಧರ್ಮವೆಂದರೆ ಮತವೆಂದು ಭಾವಿಸಬಾರದು. ಧರ್ಮಕ್ಕೂ ಮತಕ್ಕೂ ವ್ಯತ್ಯಾಸವಿದೆ. ಹೀಗಾಗಿ ಮಾನವೀಯ ಮೌಲ್ಯಗಳನ್ನೊಳಗೊಂಡ ಧರ್ಮ, ಸಮಾಜ, ನಿಸರ್ಗದ ಕುರಿತು ಸದಾ ಚಿಂತಿಸುತ್ತಿದ್ದರು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಜಯ ಪದವಿಪೂರ್ವ ಕಾಲೇಜಿನ ಮುಖ್ಯಸ್ಥ ಡಾ.ಎಸ್.ಎಲ್.ಶ್ರೀನಿವಾಸ ಮೂರ್ತಿ, ಕನ್ನಡ ಉಪನ್ಯಾಸಕಿ ಇಂದಿರಾ ಶರಣ್, ಟ್ರಸ್ಟ್‌ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News