ಸೆ.21 ರಿಂದ ಅಂತರ್‌ರಾಷ್ಟ್ರೀಯ ಆಹಾರ ಮೇಳ

Update: 2018-09-19 17:07 GMT

ಬೆಂಗಳೂರು, ಸೆ.19: ವಿಶೇಷ ಹಾಗೂ ವಿಶಿಷ್ಟವಾದ ಅಂತರ್‌ರಾಷ್ಟ್ರೀಯ ಸಸ್ಯಾಹಾರಿ ಆಹಾರ ಮೇಳವನ್ನು ಸೆ.21 ರಿಂದ ಮೂರು ದಿನಗಳ ಕಾಲ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ ರಿಬ್ಬನ್ ಸಂಸ್ಥೆಯ ಮುಖ್ಯಸ್ಥ ಅನಿಲ್ ಗುಪ್ತ, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಈ ಸಸ್ಯಾಹಾರಿ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ದೇಶ-ವಿದೇಶಗಳ ಹಲವಾರು ಖಾದ್ಯಗಳನ್ನು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮೇಳದಲ್ಲಿ ದಿಲ್ಲಿ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ್ ಸೇರಿದಂತೆ 15 ರಾಜ್ಯಗಳ ಹಾಗೂ ವಿವಿಧ ದೇಶಗಳ 150 ಕ್ಕೂ ಅಧಿಕ ಮಳಿಗೆಗಳು ಇರುತ್ತವೆ. ಮೇಳದಲ್ಲಿ ಎರಡು ಸಾವಿರಕ್ಕೂ ಅಧಿಕ ಬಗೆಯ ತಿನಿಸುಗಳು ಸಿಗಲಿವೆ ಎಂದು ಅವರು ವಿವರಿಸಿದರು. ಸಾಮಾನ್ಯ ಜನರಿಗೂ ಕೈಗೆಟುವಂತೆ 20 ರಿಂದ 150 ರೂ.ಗಳವರೆಗೂ ದರ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮೇಳದ ಮೊದಲ ದಿನ ಮಧ್ಯಾಹ್ನ 12 ಗಂಟೆಗೆ ಐಸ್ ಕ್ರೀಂ ತಿನ್ನುವ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬಹುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸೂಕ್ತ ಬಹುಮಾನ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಮೂರು ದಿನಗಳ ಕಾಲದ ಮೇಳವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಚಾಲನೆ ನೀಡಲಿದ್ದು, ನಟಿ ಮೇಘನಾ ರಾಜ್, ವಿಧಾನಪರಿಷತ್ ಸದಸ್ಯ ಶರವಣ, ನಟ ಸಿಹಿಕಹಿ ಚಂದ್ರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಮೂರು ದಿನವೂ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೂ ಮೇಳ ತೆರೆದಿರುತ್ತದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News