ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು ಆನ್‌ಲೈನ್ ಸಕಾಲ ಸೇವೆಯಲ್ಲಿ ಲಭ್ಯ: ಸಚಿವೆ ಜಯಮಾಲಾ

Update: 2018-09-19 17:11 GMT

ಬೆಂಗಳೂರು, ಸೆ.19: ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಎಲ್ಲ ಸೇವೆಗಳು ಆನ್‌ಲೈನ್ ಮೂಲಕ ಲಭ್ಯವಾಗಲಿವೆ. ಇಲಾಖೆಯ ಆಡಳಿತವನ್ನು ಮತ್ತಷ್ಟು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾ ತಿಳಿಸಿದರು.

ಬುಧವಾರ ಕನ್ನಡೇತರರು ಕನ್ನಡ ಕಲಿಯಲು ಅನುಕೂಲವಾಗುವಂತೆ ನೂತನವಾಗಿ ಅಭಿವೃದ್ಧಿ ಪಡಿಸಿರುವ ವೆಬ್‌ಸೈಟ್ ಹಾಗೂ ಇಲಾಖೆಯ ಆನ್‌ಲೈನ್ ಸಕಾಲ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಸಕಾಲ ಸೇವೆಯನ್ನು ಆನ್‌ಲೈನ್ ಮೂಲಕ ತರಲಾಗಿದೆ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಬರುವುದಲ್ಲದೆ, ಜನರಿಗೆ ಸುಲಭದಲ್ಲಿ ಸೇವೆಗಳು ಲಭ್ಯವಾಗಲಿವೆ ಎಂದು ತಿಳಿಸಿದರು.

ಕನ್ನಡೇತರರಿಗೆ ಕನ್ನಡ ಕಲಿಸಲು www.kannadakalike.org ನ್ನು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ರೂಪಿಸಿದ್ದು, ಇದರಿಂದ ಕನ್ನಡೇತರರು ಸುಲಭವಾಗಿ ಕನ್ನಡ ಕಲಿಯಬಹುದಾಗಿದೆ. ಇದರಲ್ಲಿ ಪದ್ಯ, ಹಾಡು, ನಿರೂಪಣೆ, ಅನುಕರಣೆ ಇದ್ದು ಇದರಲ್ಲಿ ಒಟ್ಟು 30 ವಿಡಿಯೊಗಳನ್ನು ಬಳಸಲಾಗಿದೆ. ಅಲ್ಲದೆ, ಕನ್ನಡ ವ್ಯಾಕರಣ, ನೂತನ ಭಾಷಾ ಕಲಿಕೆ ವಿಧಾನದಿಂದ ಕನ್ನಡವನ್ನು ಕಲಿಯಬಹುದಾಗಿದೆ ಎಂದು ಅವರು ಹೇಳಿದರು.

ಈ ವೇಳೆ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, 2015ರಿಂದ ಕನ್ನಡ ಪೀಠವು ಅಸ್ತಿತ್ವದಲ್ಲಿದ್ದು, ಕನ್ನಡ ಮೇರುಕೃತಿಗಳಾದ ಕವಿರಾಜಮಾರ್ಗ, ವಡ್ಡಾರಾದನೆ ಹಾಗೂ ಗದಾಯುದ್ಧವನ್ನು ಇಂಗ್ಲಿಷ್‌ಗೆ ಅನುವಾದ ಮಾಡಿ ಯಶಸ್ವಿಯಾಗಿದೆ ಎಂದರು.

ಕನ್ನಡೇತರರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಕನ್ನಡ ಕಲಿಕೆ ವೆಬ್‌ಸೈಟ್‌ನಲ್ಲಿ ಜನರಿಗೆ ಅರ್ಥವಾಗುವ ಸುಲಭ ರೀತಿಯಲ್ಲಿ ಕನ್ನಡ ಕಲಿಕೆಯ ಪಠ್ಯ ರೂಪಿಸಲಾಗಿದೆ. ಇದರಲ್ಲಿ ಕರ್ನಾಟಕ ಇತಿಹಾಸ, ಜಾನಪದ ಸಾಹಿತ್ಯ, ವರ್ತಮಾನ, ರಂಗಭೂಮಿ, ಉದ್ಯಮ, ಮಾರುಕಟ್ಟೆ, ಕೃಷಿ, ಆಹಾರ, ಉಡುಗೆ, ತೊಡುಗೆ, ಚಿತ್ರಕಲೆ, ಭೌಗೋಳಿಕತೆ ಮುಂತಾದ ವಿಷಯಗಳನ್ನು ಸೇರಿಸಲಾಗಿದೆ. ಹಿಂದಿ, ಉರ್ದುವನ್ನು ಹೊರತುಪಡಿಸಿದರೆ ಬೇರಾವ ಭಾಷೆಯಲ್ಲೂ ಇಂತಹ ಪ್ರಯೋಗಗಳು ನಡೆದಿಲ್ಲ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಸೇರಿದಂತೆ ಇಲಾಖೆಯ ಹಿರಿ ಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News