ಗಾಂಧಿ ಜಯಂತಿ ಅಂಗವಾಗಿ ಅ.2 ರಂದು ಪ್ಲಾಸಿಕ್ ಮುಕ್ತ ನಗರ ಜಾಗೃತಿಗಾಗಿ ‘ಪ್ಲಾಗ್ ರನ್’

Update: 2018-09-19 17:17 GMT

ಬೆಂಗಳೂರು, ಸೆ.19: ಗಾಂಧಿ ಜಯಂತಿಯ ಅಂಗವಾಗಿ ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಬಿಬಿಎಂಪಿ, ಗೋ ನೇಟಿವ್, ಯುನೈಟೆಡ್ ವೇ ಬೆಂಗಳೂರು ಹಾಗೂ ನಮ್ಮ ನಿಮ್ಮ ಸೈಕಲ್ ಫೌಂಡೇಷನ್ ಜಂಟಿಯಾಗಿ ಅ.2 ರಂದು ವಿನೂತನವಾಗಿ ಪ್ಲಾಗ್ ರನ್ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಬುಧವಾರ ನಗರದ ಬಿಬಿಎಂಪಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್, ಪಾಲಿಕೆಯಿಂದ ಮೊದಲ ಬಾರಿಗೆ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಹಾಗೂ ಪ್ಲಾಸ್ಟಿಕ್‌ನಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ರಸ್ತೆ ಬದಿಗಳಲ್ಲಿ, ಕೆರೆಗಳ ಸುತ್ತ, ಕಾಡುಗಳ ಮಧ್ಯೆ ಮತ್ತು ಶಾಲಾ-ಕಾಲೇಜುಗಳ ಸುತ್ತಮುತ್ತ ಪ್ಲಾಸ್ಟಿಕ್ ಮಾಲಿನ್ಯವನ್ನು ಸ್ವಚ್ಛಗೊಳಿಸುವುದು ಈ ಓಟದ ಉದ್ದೇಶವಾಗಿದೆ ಎಂದು ಹೇಳಿದರು.

ಅಂದು ನಗರದ 50 ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಓಟ ಜರುಗಲಿದೆ. ಇದರಲ್ಲಿ ಈಗಾಗಲೇ ಐದು ಸಾವಿರ ಜನ ನೋಂದಾಯಿಸಿಕೊಂಡಿದ್ದು, ಇನ್ನೂ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಯಿದೆ. ಮುಂಜಾನೆಯಿಂದ ಆರಂಭವಾಗುವ ಓಟವು ಸುಮಾರು ಮೂರು ಕಿ.ಮೀ.ವ್ಯಾಪ್ತಿಯಲ್ಲಿ ವಾಕಿಂಗ್ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹ ಮಾಡಲಾಗುತ್ತದೆ. ಅನಂತರ ಅದನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ರವಾನೆ ಮಾಡಲಾಗುತ್ತದೆ. ಇದು ಹೊಸ ಪ್ರಯತ್ನವಾಗಿದ್ದು, ಗಿನ್ನೆಸ್ ದಾಖಲೆ ಸೇರುವ ಸಾಧ್ಯತೆಯಿದೆ ಎಂದು ತಿಳಿಸಿದರು.

ನಮ್ಮ ನಿಮ್ಮ ಸೈಕಲ್ ಫೌಂಡೇಷನ್‌ನ ಮುರಳಿ ಮಾತನಾಡಿ, ದಿನದಿಂದ ದಿನಕ್ಕೆ ಫ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಒಂದು ಬಾರಿ ಬಳಕೆ ಮಾಡಿ, ಎಸೆಯುವ ಪ್ಲಾಸ್ಟಿಕ್ ಬಳಕೆ ಅತಿಯಾಗಿದೆ. ಇದರಿಂದಾಗಿ ಪರಿಸರ ಮಾಲಿನ್ಯದ ಜೊತೆಗೆ ಮನುಷ್ಯನ ಆರೋಗ್ಯದ ಗಂಭೀರವಾದ ಪರಿಣಾಮ ಬೀರುತ್ತಿದೆ. ಹೀಗಾಗಿ, ಪ್ಲಾಸ್ಟಿಕ್ ರಹಿತ ಬ್ಯಾಗ್, ಬಾಟೆಲ್ ಸೇರಿದಂತೆ ಮತ್ತಿತರ ವಸ್ತುಗಳನ್ನು ಬಳಕೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಅ.2 ರಂದು ನಡೆಯಲಿರುವ ಈ ಓಟದಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ಈ www.bengaluru.plog.run ವೆಬ್‌ಸೈಟ್ ಮೂಲಕ ನೋಂದಾಯಿಸಿ ಕೊಳ್ಳಬಹುದು. ನಗರದ ವಿವಿಧ ಕಡೆಗಳಲ್ಲಿ ಓಟ ನಡೆಯುತ್ತಿರುವುದರಿಂದ ಭಾಗವಹಿಸುವವರು ತಮ್ಮ ಸ್ಥಳ ಅಥವಾ ವಲಯವನ್ನು ಆಯ್ಕೆ ಮಾಡಿ ಸಂಬಂಧಪಟ್ಟ ಸ್ವಯಂ ಸೇವಕರೊಂದಿಗೆ ಸಂಪರ್ಕಿಸಬಹುದಾಗಿದೆ. ಪಾಲ್ಗೊಳ್ಳುವ ಎಲ್ಲರಿಗೂ ಗ್ಲೌಸ್, ಮಾಸ್ಕ್, ಏಪ್ರಾನ್ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಏನೆಲ್ಲಾ ನಡೆಯುತ್ತದೆ ?

-ನಲವತ್ತು ಜನ ಸಮುದಾಯಗಳೊಂದಿಗೆ ಸ್ಪಂದನ

-ಇಪ್ಪತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಜಾಗೃತಿ ಮತ್ತು ಕಾರ್ಯಾಗಾರ

-ಹತ್ತು ಕೆರೆಗಳ ಸುತ್ತ ಸ್ವಚ್ಛತಾ ಯೋಜನೆ

-ಬೆಂಗಳೂರಿನ ಸೇನೆ ಮತ್ತು ಅರೆ ಸೇನೆಯಿಂದ ಸ್ವಚ್ಛತಾ ಜಾಗೃತಿ

-ನಗರದ ಸುತ್ತಲಿನ ಅರಣ್ಯಗಳ(ಬನ್ನೇರುಘಟ್ಟ, ನಂದಿ ಬೆಟ್ಟ) ಸ್ವಚ್ಛತೆ

-ಪ್ಲಾಸ್ಟಿಕ್ ಬಳಕೆ ನಿಲ್ಲಿಸುತ್ತೇವೆ, ಬೇರೆಯವರಿಗೂ ತಿಳಿಸುತ್ತೇವೆ ಎಂಬ ಪ್ರತಿಜ್ಞೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News