ಇಂಧನ ಬೆಲೆ ಏರಿಕೆಗೆ ಸರಕಾರದ ನೀತಿಯೇ ಕಾರಣ

Update: 2018-09-20 04:46 GMT

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಳೆದ ಒಂದೂವರೆ ತಿಂಗಳಿನಿಂದ ಏರುತ್ತಲೇ ಇದೆ. ರೂಪಾಯಿ ವೌಲ್ಯ ಪಾತಾಳವನ್ನು ಕಂಡಿದೆ. ಇವೆರಡರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಜೀವನಾವಶ್ಯಕ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಈ ಕುರಿತು ಕಾಂಗ್ರೆಸ್ ಮತ್ತು ಎಡಪಂಥೀಯ ಸಂಘಟನೆಗಳು ರಾಷ್ಟ್ರವ್ಯಾಪಿ ಬಂದ್ ಮತ್ತು ಹರತಾಳವನ್ನು ನಡೆಸಿದ್ದವು. ಈ ರೀತಿ ಲಂಗು ಲಗಾಮಿಲ್ಲದ ಇಂಧನ ಬೆಲೆ ಏರಿಕೆಗೆ ಏನು ಕಾರಣ ಎಂದು ಪ್ರಶ್ನಿಸಿದರೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇರವಾಗಿ ಉತ್ತರಿಸಲಾಗದೆ ಜಾಣತನದಿಂದ ನುಣುಚಿಕೊಳ್ಳುತ್ತಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಿದರೆ ದೇಶದ ಆರ್ಥಿಕತೆಯ ಬಗ್ಗೆ ಮತ್ತು ಜಿಡಿಪಿ ಬಗ್ಗೆ ಜೇಟ್ಲಿಯವರು ಬುರುಡೆ ಬಿಡುತ್ತಾರೆ. ದೇಶದ ಆರ್ಥಿಕ ವ್ಯವಸ್ಥೆ ಸುಭದ್ರವಾಗಿದೆ ಎಂದು ಹೇಳುತ್ತಾರೆ.

ಆರ್ಥಿಕ ಬೆಳವಣಿಗೆ ದರದ ಅಂಕೆ ಸಂಖ್ಯೆೆಗಳನ್ನು ನೀಡುತ್ತಾರೆ. ಆದರೆ ಈ ಅಂಕೆ ಸಂಖ್ಯೆಗಳು ಜನಸಾಮಾನ್ಯರ ಹಸಿವನ್ನು ನೀಗಿಸುವುದಿಲ್ಲ. ರೂಪಾಯಿ ವೌಲ್ಯ ದೇಶದ ಇತಿಹಾಸದಲ್ಲಿ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ. ಡಾಲರ್ ಎದುರು ರೂಪಾಯಿ ವೌಲ್ಯ 70 ರೂ.ಗೆ ಕುಸಿದಿದೆ. ಈ ಹಿಂದೆ ನಿಯಂತ್ರಿತ ಆರ್ಥಿಕ ವ್ಯವಸ್ಥೆ ಇದ್ದಾಗ ರೂಪಾಯಿ ದರ ಕುಸಿಯದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಹಣಕಾಸು ಸಚಿವಾಲಯಗಳು ಕಾಲಕಾಲಕ್ಕೆ ನಿಯಂತ್ರಣಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿದ್ದವು. ಅದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತಿತ್ತು. ಆದರೆ ಮುಕ್ತ ಆರ್ಥಿಕ ನೀತಿ ಜಾರಿಗೊಂಡ ನಂತರ ನಿಯಂತ್ರಣ ವ್ಯವಸ್ಥೆಗೆ ಅವಕಾಶ ಇಲ್ಲದಂತಾಗಿದೆ. ರೂಪಾಯಿ ವೌಲ್ಯ ಕುಸಿದರೆ ವಿದೇಶಿ ವಿನಿಮಯ ದುಬಾರಿಯಾಗುತ್ತದೆ. ಇದರಿಂದ ನಮ್ಮ ದೇಶದ ಆರ್ಥಿಕತೆಗೆ ಚೇತರಿಸಲಾಗದ ಏಟು ಬೀಳುತ್ತದೆ.

ಪೆಟ್ರೋಲ್ ಮತ್ತು ಡೀಸೆಲ್‌ಗಳ ಲಂಗು ಲಗಾಮಿಲ್ಲದ ಬೆಲೆ ಏರಿಕೆಗೆ ಇವುಗಳನ್ನು ನಿಯಂತ್ರಣಮುಕ್ತಗೊಳಿಸಿರುವುದೇ ಕಾರಣವಾಗಿದೆ. ಈ ದಿಸೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರದ ಧೋರಣೆ ಸಾಕಷ್ಟು ದೋಷಪೂರಿತವಾಗಿದೆ. 2014ರಲ್ಲಿ ತೈಲ ಬೆಲೆಗಳು ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿದಾಗ ಬಿಜೆಪಿ ನೇತೃತ್ವದ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ದಿಢೀರನೆ ಹೆಚ್ಚಿಸಲು ಆರಂಭಿಸಿತು. 2014ರ ನವೆಂಬರ್ ಮತ್ತು 2018ರ ಜನವರಿ ನಡುವಿನ ಕಾಲಾವಧಿಯಲ್ಲಿ ಅಬಕಾರಿ ಸುಂಕವನ್ನು 9 ಬಾರಿ ಏರಿಸಲಾಗಿದೆ. ಈಗ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 11.15ರೂ. ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ 13.47 ರೂ. ಆಗಿದೆ. ಹೀಗಾಗಿಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಉತ್ಪನ್ನಗಳ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ದಕ್ಕುವುದಿಲ್ಲ. ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಸಮರ್ಪಕವಾದ ತೆರಿಗೆ ವ್ಯವಸ್ಥೆ ಜಾರಿಯಲ್ಲಿದೆ. ಕೇಂದ್ರದ ಅಬಕಾರಿ ಸುಂಕವಲ್ಲದೆ ರಾಜ್ಯಗಳಲ್ಲಿ ವೌಲ್ಯವರ್ಧಿತ ತೆರಿಗೆಯನ್ನು ವಿಧಿಸಲಾಗುತ್ತದೆ. ಹೀಗಾಗಿ ತೈಲ ಬೆಲೆಯಲ್ಲಿನ ಅರ್ಧ ಭಾಗ ತೆರಿಗೆಗೆ ಪಾವತಿಯಾಗುತ್ತದೆ.

2018ರ ಬಜೆಟ್‌ನಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಸುಂಕವನ್ನು 2ರೂ. ಕಡಿಮೆ ಮಾಡಿದ್ದರೂ ಗ್ರಾಹಕರಿಗೆ ಇದರ ಪ್ರಯೋಜನ ಆಗಿಲ್ಲ. ಒಂದೆಡೆ 2 ರೂ. ಸುಂಕ ಕಡಿಮೆ ಮಾಡಿ ಇನ್ನೊಂದೆಡೆ 8 ರೂ. ರಸ್ತೆಯ ಸೆಸ್ ಹಾಕಲಾಗಿದೆ. 6 ವರ್ಷಗಳ ಹಿಂದೆ ಕಚ್ಚಾ ತೈಲದ ಬೆಲೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್‌ಗೆ 140 ಡಾಲರ್ ತಲುಪಿತ್ತು. ಈಗ ಅದು ಕೇವಲ 70 ಡಾಲರ್ ಆಸುಪಾಸಿನಲ್ಲಿದೆ. ವಾಸ್ತವವಾಗಿ ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಬೇಕಾಗಿತ್ತು. ಆದರೆ ದುಬಾರಿಯಾಗಿದೆ. ಇದಕ್ಕೆ ಕಾರಣ ಕೇಂದ್ರದ ನರೇಂದ್ರ ಮೋದಿ ಸರಕಾರದ ಆರ್ಥಿಕ ನೀತಿಗಳು. ಮುಕ್ತ ಆರ್ಥಿಕ ನೀತಿಯ ಹೆಸರಿನಲ್ಲಿ ಸರಕಾರ ಎಲ್ಲವನ್ನು ಮುಕ್ತಗೊಳಿಸುವುದು ಸರಿಯಲ್ಲ. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಗೆ ಸರಕಾರ ಕಡಿವಾಣ ಹಾಕಲೇ ಬೇಕು. ಇದರ ಜೊತೆಗೆ ರೂಪಾಯಿ ಮೌಲ್ಯ ಕುಸಿದ ತಕ್ಷಣ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸರಕಾರ ಜನತೆಯ ಆಕ್ರೋಶವನ್ನು ಎದುರಿಸಬೇಕಾಗುತ್ತದೆ.

ತೈಲ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಹಣದುಬ್ಬರ ಹಾಗೂ ಬೆಲೆ ಏರಿಕೆಗೆ ನಿಯಂತ್ರಣವಿಲ್ಲದಂತಾಗಿದೆ. 2018ರ ಜುಲೈನಲ್ಲಿ ನಗದು ಬೆಲೆ ಸೂಚ್ಯಂಕ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.6.9ರಷ್ಟು ಹೆಚ್ಚಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಪರಿಣಾಮವಾಗಿ ಸಾಗಾಟವೆಚ್ಚವೂ ಹೆಚ್ಚಾಗಿದೆ. ಟ್ರಾಕ್ಟರ್ ಮತ್ತು ಪಂಪ್‌ಸೆಟ್‌ಗಳಿಗೆ ಬಳಸುವ ಡೀಸೆಲ್ ಬೆಲೆ ಏರಿಕೆಯಿಂದಾಗಿ ರೈತರು ತೊಂದರೆಗೆ ಒಳಗಾಗಿದ್ದಾರೆ. ಸರಕಾರವು ಸತತವಾಗಿ ಹೆಚ್ಚಿಸಿಕೊಂಡು ಬಂದಿರುವ ಅಬಕಾರಿ ಸುಂಕಗಳನ್ನು ಹಿಂದೆಗೆದುಕೊಳ್ಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಆದರೆ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವ ನೆಪ ಮುಂದೆ ಮಾಡಿ ಮೋದಿ ಸರಕಾರ ಅಬಕಾರಿ ಸುಂಕಗಳನ್ನು ಕಡಿಮೆ ಮಾಡಲು ನಿರಾಕರಿಸುತ್ತಿದೆ. ಕಾರ್ಪೊರೇಟ್ ಬಂಡವಾಳಶಾಹಿಗಳಿಗೆ ಮತ್ತು ಶ್ರೀಮಂತರಿಗೆ ತೆರಿಗೆಗಳಲ್ಲಿ ರಿಯಾಯಿತಿ ನೀಡಿದ ಈ ಸರಕಾರ ಆದಾಯ ಸಂಗ್ರಹಕ್ಕಾಗಿ ಬಡವರ ಜೇಬಿಗೆ ಕೈ ಹಾಕಿದೆ. ಜನ ಸಾಮಾನ್ಯರು ಬಳಸುವ ಇಂಧನ ವಸ್ತುಗಳ ಮೇಲೆ ಸಿಕ್ಕಾಪಟ್ಟೆ ಅಬಕಾರಿ ಸುಂಕವನ್ನು ವಿಧಿಸಿದೆ. ಹೀಗಾಗಿ ಬೆಲೆ ಏರಿಕೆ ಲಂಗುಲಗಾಮಿಲ್ಲದೆ ಹೆಚ್ಚಾಗುತ್ತಲೇ ಇದೆ.

ಪೆಟ್ರೋಲ್ ಮತ್ತು ಡೀಸೆಲ್ ವಿದೇಶದಿಂದ ಬರುವ ವಸ್ತು. ಅದಕ್ಕಾಗಿ ಹೆಚ್ಚು ಬೆಲೆ ತೆರಬೇಕಾಗುತ್ತದೆ ಎಂದು ಕೇಂದ್ರ ಮಂತ್ರಿಗಳು ಸುಳ್ಳು ನೆಪ ಹೇಳುತ್ತಾರೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದಾಗಲೂ ಕೂಡ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಲು ಕಾರಣವೇನು? ಇದಕ್ಕೆ ಕೇಂದ್ರ ಸರಕಾರದ ಮಿತಿಮೀರಿದ ಸುಂಕ ಹೇರಿಕೆಯೇ ಕಾರಣವಾಗಿದೆ. ಸರಕಾರ ತಕ್ಷಣ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಜನ ಸಾಮಾನ್ಯರಲ್ಲಿ ಹಾಗೂ ಮಧ್ಯಮ ವರ್ಗದವರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಈಗಾಗಲೇ ರಾಷ್ಟ್ರವ್ಯಾಪಿ ಪ್ರತಿಭಟನೆ ಹಾಗೂ ಬಂದ್‌ಗಳನ್ನು ಜನ ನಡೆಸಿದ್ದಾರೆ. ಮುಂದಿನ 8 ತಿಂಗಳಲ್ಲಿ ಮತದಾರರ ಬಳಿ ಹೋಗಬೇಕಾದ ಬಿಜೆಪಿ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ಅಬಕಾರಿ ಸುಂಕವನ್ನು ಕಡಿಮೆ ಮಾಡುವಲ್ಲಿ ಚಿಂತಿಸಲೇಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News