ಪಿಪಿಎಫ್, ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಹೆಚ್ಚಳ

Update: 2018-09-20 14:39 GMT

ಹೊಸದಿಲ್ಲಿ,ಸೆ.20: ಹಲವಾರು ವರ್ಷಗಳ ಬಳಿಕ ಕೊನೆಗೂ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲು ಸರಕಾರವು ನಿರ್ಧರಿಸಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕೆ ಎನ್‌ಎಸ್‌ಸಿ ಮತ್ತು ಪಿಪಿಎಫ್ ಸೇರಿದಂತೆ ವಿವಿಧ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಶೇ.0.4ರವರೆಗೆ ಏರಿಕೆ ಮಾಡಲಾಗಿದೆ.

ಸಣ್ಣ ಉಳಿತಾಯಗಳನ್ನು ಪ್ರೋತ್ಸಾಹಿಸುವುದು ಮತ್ತು ಹಿರಿಯ ನಾಗರಿಕರು ಹಾಗೂ ಹೆಣ್ಣುಮಕ್ಕಳ ಕಲ್ಯಾಣವನ್ನು ಉತ್ತೇಜಿಸುವುದು ಸರಕಾರದ ಈ ನಿರ್ಧಾರದ ಉದ್ದೇಶವಾಗಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಟ್ವೀಟಿಸಿದ್ದಾರೆ. ಈ ಬಡ್ಡಿದರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುವುದು. ನೂತನ ಬಡ್ಡಿದರಗಳು ಅ.1ರಿಂದ ಅನ್ವಯಿಸಲಿವೆ.

ವಿವಿಧ ಯೋಜನೆಗಳಿಗೆ ಬಡ್ಡಿದರ ಏರಿಕೆ

ಸುಕನ್ಯಾ ಸಮೃದ್ಧಿ ಯೋಜನೆ: ಶೇ.8.1ರಿಂದ ಶೇ.8.5ಕ್ಕೆ

ಹಿರಿಯ ನಾಗರಿಕರ ಉಳಿತಾಯ ಯೋಜನೆ:ಶೇ.8.3ರಿಂದ ಶೇ.8.7ಕ್ಕೆ

(ಮೂರು ತಿಂಗಳಿಗೊಮ್ಮೆ ಬಡ್ಡಿ ಪಾವತಿ)

ಸಾರ್ವಜನಿಕ ಭವಿಷ್ಯನಿಧೀ(ಪಿಪಿಎಫ್):ಶೇ.7.6ರಿಂದ ಶೇ.8ಕ್ಕೆ

ಕಿಸಾನ್ ವಿಕಾಸ ಪತ್ರ(ಕೆವಿಪಿ):ಶೇ.7.3ರಿಂದ ಶೇ.7.7ಕ್ಕೆ

ಐದು ವರ್ಷಗಳ ಸಾವಧಿ ಠೇವಣಿಗಳು ಮತ್ತು ಆವರ್ತನ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಅನುಕ್ರಮವಾಗಿ ಶೇ.7.8 ಮತ್ತು ಶೇ.7.3ಕ್ಕೆ ಹೆಚ್ಚಿಸಲಾಗಿದೆ. ಒಂದರಿಂದ ಮೂರು ವರ್ಷಗಳ ಸಾವಧಿ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಶೇ.0.3ರಷ್ಟು ಹೆಚ್ಚಿಸಲಾಗಿದೆ.

ಆದರೆ ಉಳಿತಾಯ ಖಾತೆಗಳ ಮೇಲಿನ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯನು ಮಾಡಲಾಗಿಲ್ಲ.

ಬಡ್ಡಿ ಏರಿಕೆಯಿಂದಾಗಿ ಕೆವಿಪಿಯಡಿ ಠೇವಣಿಗಳು ಈಗ ಹಿಂದಿನ 118 ತಿಂಗಳಿಗಳಿಗೆ ಬದಲಾಗಿ 112 ತಿಂಗಳುಗಳಲ್ಲಿ ಪಕ್ವಗೊಳ್ಳಲಿವೆ.

ಹೆಚ್ಚುಕಡಿಮೆ ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು 2012,ಎ.1ರಿಂದ ಕಡಿಮೆಯಾಗುತ್ತಲೇ ಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News