ಮಾತನಾಡಬೇಕಾದರೆ ಹಿಡಿತವಿರಲಿ: ಯಡಿಯೂರಪ್ಪರಿಗೆ ಕುಮಾರಸ್ವಾಮಿ ಎಚ್ಚರಿಕೆ

Update: 2018-09-20 07:28 GMT
ಫುಡ್ ಪಾಯಿಸನ್ ಸಮಸ್ಯೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಡಿ.ಕೆ.ಶಿವಕುಮಾರ್ ರನ್ನು ಸಿಎಂ ಕುಮಾರಸ್ವಾಮಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.

ಬೆಂಗಳೂರು, ಸೆ.20: ಎಚ್ಚರಿಕೆ ನೀಡುತ್ತಿದ್ದೇನೆ. ಮಾತನಾಡಬೇಕಾದರೆ ನಾಲಗೆಯ ಮೇಲೆ ಹಿಡಿತವಿರಲಿ. ವಯಸ್ಸಾಗಿದೆ... ಆ ವಯಸ್ಸಿಗೆ ತಕ್ಕ ಗಾಂಭೀರತೆಯನ್ನು ಉಳಿಸಿಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ.

ಅಪ್ಪ-ಮಕ್ಕಳು ಲೂಟಿಕೋರರು ಎಂದು ಯಡಿಯೂರಪ್ಪ ನಿನ್ನೆ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಈ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿಯವರು ಇಂದು ಫುಡ್ ಪಾಯಿಸನ್ ಸಮಸ್ಯೆಗೊಳಗಾಗಿ ಶೇಷಾದ್ರಿಪುರ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಯಡಿಯೂರಪ್ಪ ರಾಜಕೀಯ ಹಾಗೂ ವಯಸ್ಸಿನಲ್ಲಿ ನನಗಿಂತ ಹಿರಿಯರು. ಅವರು ತಾವು ಬಳಸುವ ಪದ ಪ್ರಯೋಗದ ಮೇಲೆ ಹಿಡಿತ ಸಾಧಿಸಿದರೆ ಉತ್ತಮ. ಈ ಹಿಂದೆ 2008ರಲ್ಲಿ ‘‘ಅಪ್ಪ-ಮಕ್ಕಳನ್ನು ಮುಗಿಸುವುದೇ ನನ್ನ ರಾಜಕೀಯ. ಅಪ್ಪ-ಮಕ್ಕಳನ್ನು ಜೈಲಿಗಟ್ಟುವುದೇ ನನ್ನ ಗುರಿ’’ ಎಂದಿದ್ದರು. ಆದರೆ ಜೈಲಿಗೆ ಹೋದವರು ಯಾರು ಎಂದು ಕುಮಾರಸ್ವಾಮಿ ಕಟಕಿಯಾಡಿದರು.

ಇದೀಗ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗಟ್ಟುವುದಾಗಿ ಇದೀಗ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಅಪ್ಪ-ಮಕ್ಕಳನ್ನು ಲೂಟಿಕೋರರು ಹೇಳುತ್ತಿದ್ದಾರೆ. ಮಾತಿನ ಮೇಲೆ ಹಿಡಿತವಿರಲಿ ಎಂದ ಕುಮಾರಸ್ವಾಮಿ, ಅಪ್ಪ-ಮಕ್ಕಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ ಎಂದು ಯಡಿಯೂರಪ್ಪರಿಗೆ ಎಚ್ಚರಿಸಿದರು.

ರಾಜ್ಯವನ್ನು ಲೂಟಿ ಮಾಡಿರುವ ಯಡಿಯೂರಪ್ಪ ಇದೀಗ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಇದುವರೆಗೆ ತಾಳ್ಮೆಯಿಂದ ಇದ್ದೇನೆ. ನನ್ನನ್ನು ಕೆದಕಿದರೆ ಹಲವು ವಿಷಯಗಳಿವೆ. ಸರಕಾರ ನನ್ನ ಕೈಯಲಿದ್ದು, ಏನೆಲ್ಲ ಮಾಡಬೇಕು ಎಂದು ನನಗೂ ತಿಳಿದಿದೆ. ಆದ್ದರಿಂದ ಎಚ್ಚರದಿಂದ ಇರುವಂತೆ ಯಡಿಯೂರಪ್ಪರಿಗೆ ಸಲಹೆ ನೀಡಲು ಬಯಸುತ್ತೇನೆ ಎಂದರು.

ಕಾಂಗ್ರೆಸ್‌ನ ಸಿ.ಎಸ್.ಶಿವಳ್ಳಿ ಹಾಗೂ ಜೆಡಿಎಸ್‌ನ ಸುರೇಶ್ ಗೌಡರ ಸಹಿತ 18 ಶಾಸಕರನ್ನು ಹೈಜಾಕ್ ಮಾಡಲು ಯಡಿಯೂರಪ್ಪ ಸಂಚು ಹೂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

‘‘ಸಮ್ಮಿಶ್ರ ಸರಕಾರದಲ್ಲಿರುವ 18 ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಅವರನ್ನು ಮುಂಬೈಗೆ ಕರೆದೊಯ್ಯುತ್ತಿದ್ದೇವೆ. ನೀವಿಬ್ಬರು ರೆಡಿಯಾಗಿ’’ ಎಂದು ಸಿ.ಎಸ್.ಶಿವಳ್ಳಿ ಹಾಗೂ ಸುರೇಶ್ ಗೌಡರಿಗೆ ನಿನ್ನೆ ಬಿಜೆಪಿಯವರು ದೂರವಾಣಿ ಕರೆ ಮಾಡಿದ್ದಾರೆ. ಅಲ್ಲದೇ 5 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಅವರೊಂದಿಗೆ ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ರಾಜಕೀಯ ಚಟುವಟಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News