ಗೋಳ್ವಾಲ್ಕರ್ ಚಿಂತನೆಗಳಲ್ಲಿ ಕೆಲವನ್ನು ಆರೆಸ್ಸೆಸ್ ಕೈಬಿಟ್ಟಿದೆ: ಮೋಹನ್ ಭಾಗವತ್

Update: 2018-09-20 07:52 GMT

ಹೊಸದಿಲ್ಲಿ, ಸೆ.20: ಗೋಳ್ವಾಲ್ಕರ್ ಚಿಂತನೆಗಳಲ್ಲಿ ಕೆಲವನ್ನು ಆರೆಸ್ಸೆಸ್ ಕೈಬಿಟ್ಟಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಸಂಘಟನೆಯ ಪಿತಾಮಹ ಎನಿಸಿದ ಗುರು ಎಂ.ಎಸ್.ಗೋಳ್ವಾಲ್ಕರ್ ಅವರ "ಬಂಚ್ ಆಫ್ ಥಾಟ್ಸ್" (ಗೋಳ್ವಾಲ್ಕರ್ ಅವರ ಉಪನ್ಯಾಸಗಳ ಸಂಕಲನ) ಆರೆಸ್ಸೆಸ್‍ಗೆ ಸುಧೀರ್ಘ ಕಾಲದಿಂದ ವೇದವಾಕ್ಯವಾಗಿತ್ತು.

"ಬಂಚ್ ಆಫ್ ಥಾಟ್ಸ್ ಅವರ ಭಾಷಣಗಳ ಸಂಗ್ರಹವಾಗಿದ್ದು, ನಿರ್ದಿಷ್ಟ ಸನ್ನಿವೇಶದಲ್ಲಿ ಅದನ್ನು ಸಿದ್ಧಪಡಿಸಲಾಗಿದೆ. ಕಾಲ ಬದಲಾಗುತ್ತದೆ ಹಾಗೂ ಅದಕ್ಕೆ ತಕ್ಕಂತೆ ನಮ್ಮ ಯೋಚನೆಗಳೂ ಬದಲಾಗುತ್ತವೆ. ಆರೆಸ್ಸೆಸ್ ಸಂಸ್ಥಾಪಕ ಡಾ.ಹೆಡ್ಗೇವಾರ್ ಅವರು, ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳಲು ಮುಕ್ತ ಎಂದು ಹೇಳಿದ್ದರು" ಎಂದು ಭಾಗವತ್ ವಿವರಿಸಿದರು.

ಮುಸ್ಲಿಮರನ್ನು ಅನಪೇಕ್ಷಿತ ಎಂದು ಆರೆಸ್ಸೆಸ್ ಕಾಣುವುದಿಲ್ಲ ಎಂದು ಭಾಗವತ್ ನೀಡಿದ ಹೇಳಿಕೆಯು, ಗೋಳ್ವಾಲ್ಕರ್ ಅವರ ಚಿಂತನೆಗೆ ವಿರುದ್ಧವಲ್ಲವೇ ಎಂದು ಕೇಳಿದ್ದಕ್ಕೆ ಈ ಸ್ಪಷ್ಟನೆ ನೀಡಿದರು. ಕ್ರಿಶ್ಚಿಯನ್ನರ ಜತೆ ಮುಸ್ಲಿಂ ಸಮುದಾಯವನ್ನೂ ಸೇರಿಸಿ, ಗೋಳ್ವಾಲ್ಕರ್, "ಇವರು ದೇಶದ ಶತ್ರುಗಳು" ಎಂದು ಹೇಳಿದ್ದರು.

ಬಂಚ್ ಆಫ್ ಥಾಟ್ಸ್‍ನಲ್ಲಿ ಇಂದಿಗೂ ಪ್ರಸ್ತುತವೆನಿಸಿದ್ದನ್ನು ಮಾತ್ರ ಸೇರಿಸಿ ಸಂಘಟನೆಯ ಆಂತರಿಕ ಬಳಕೆಗೆ "ಗುರೂಜಿ: ವಿಷನ್ ಅಂಡ್ ಮಿಷನ್" ಎಂದು ಪ್ರಕಟಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News