ಬೆಂಗಳೂರು: ಬಿಎಸ್‌ವೈ ನಿವಾಸಕ್ಕೆ ‘ಕೈ’ ಕಾರ್ಯಕರ್ತರ ಮುತ್ತಿಗೆ

Update: 2018-09-20 12:24 GMT

ಬೆಂಗಳೂರು, ಸೆ. 20: ‘ರಾಜ್ಯದಲ್ಲಿನ ಮೈತ್ರಿ ಸರಕಾರ ಅಸ್ಥಿರಕ್ಕೆ ಯತ್ನಿಸಿದರೆ ಬಿಜೆಪಿ ವಿರುದ್ಧ ಜನತೆ ದಂಗೆ ಏಳಲಿದ್ದಾರೆ’ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಬಿಎಸ್‌ವೈ ನಿವಾಸಕ್ಕೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಮಧ್ಯಾಹ್ನ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿರುವ ಬಿಎಸ್‌ವೈ ನಿವಾಸಕ್ಕೆ ಏಕಾಏಕಿ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು, ವಿಪಕ್ಷ ನಾಯಕ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಹಾಗೂ ಕೇಂದ್ರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಜಟಾಪಟಿ: ಈ ವೇಳೆ ಬಿಎಸ್‌ವೈ ಅವರು ತನ್ನ ನಿವಾಸದಲ್ಲೆ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತ್ತಲ್ಲದೆ, ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೂ ಹೋಯಿತು.

ಸ್ಥಳದಲ್ಲೆ ಇದ್ದ ಬಿಜೆಪಿ ಶಾಸಕರಾದ ರೇಣುಕಾಚಾರ್ಯ, ವಿಶ್ವನಾಥ್, ಮಾಡಾಳು ವಿರೂಪಾಕ್ಷಪ್ಪ, ದೊಡ್ಡಪ್ಪಗೌಡ ಪಾಟೀಲ್, ಹರೀಶ್ ಪೂಂಜಾ, ರವಿಕುಮಾರ್ ಮತ್ತು ಆಯನೂರು ಮಂಜುನಾಥ್, ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಸಲು ಯತ್ನಿಸಿದರು. ಆದರೆ, ಅದು ಸಫಲವಾಗಲಿಲ್ಲ.

ಆ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಪರಸ್ಪರ ಆರೋಪ- ಪ್ರತ್ಯಾರೋಪ, ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ, ಧಿಕ್ಕಾರದ ಘೋಷಣೆಗಳು ಮೊಳಗಿದವು. ಬಿಎಸ್‌ವೈ ನಿವಾಸಕ್ಕೆ ನುಗ್ಗಲು ಕಾರ್ಯಕರ್ತರು ಮುಂದಾದರು. ಈ ವೇಳೆ ಶಾಸಕ ರೇಣುಕಾಚಾರ್ಯ, ಕೈ ಕಾರ್ಯಕರ್ತರನ್ನು ತಳ್ಳಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರನ್ನು ಚದುರಿಸಿ, ಬಿಎಸ್‌ವೈ ನಿವಾಸದ ಪಕ್ಕದ ರಸ್ತೆಗೆ ಬ್ಯಾರಿಕೇಡ್ ನಿರ್ಮಾಣ ಮಾಡಿದರು. ಅಲ್ಲದೆ, 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿ, ಬಿಗಿ ಬಂದೋಬಸ್ತ್ ಕಲ್ಪಿಸಲಾಯಿತು.

ಭ್ರಷ್ಟ ಯಡಿಯೂರಪ್ಪ, ಜೈಲಿಗೆ ಹೋಗಿಬಂದ ವ್ಯಕ್ತಿ, ಆಪರೇಷನ್ ಕಮಲದ ನಾಯಕ, ಬಿಎಸ್‌ವೈ ಅನೈತಿಕ ರಾಜಕಾರಣಕ್ಕೆ ಧಿಕ್ಕಾರ. ಕೇಂದ್ರ ಸರಕಾರ ಐಟಿ ಮತ್ತು ಇಡಿ ದುರ್ಬಳಕೆಗೆ ಕಾಂಗ್ರೆಸ್ ಮುಖಂಡರು ಹೆದರಿಸಲು ಮುಂದಾಗಿದೆ. ಇದೆಲ್ಲ ನಡೆಯುವುದಿಲ್ಲ.

-ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಪ್ರತಿಭಟನೆ ನೆಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ನಾಯಕರ ಮೇಲೆ ಗೂಂಡಾಗಿರಿಗೆ ಇಳಿದಿದ್ದು, ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಚೋದನೆ ನೀಡುತ್ತಿದ್ದಾರೆ. ನಾವೂ ತಾಯಿಯ ಎದೆಹಾಲು ಕುಡಿದೆ ಬೆಳೆದಿದ್ದೇವೆ. ನಮಗೂ ಹೇಗೆ ಉತ್ತರ ನೀಡಬೇಕೆಂದು ಗೊತ್ತು.

-ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News