ರಾಜ್ಯದಲ್ಲಿ ನಿಮ್ಮ ಸರಕಾರವಿದ್ದರೆ, ಕೇಂದ್ರದಲ್ಲಿ ನಮ್ಮದೇ ಅಧಿಕಾರವಿದೆ: ಕುಮಾರಸ್ವಾಮಿಗೆ ಬಿಎಸ್‌ವೈ ತಿರುಗೇಟು

Update: 2018-09-20 13:32 GMT

ಬೆಂಗಳೂರು, ಸೆ. 20: ‘ರಾಜ್ಯದಲ್ಲಿ ನಿಮ್ಮ ಅಧಿಕಾರ ಇರಬಹುದು, ಕೇಂದ್ರದಲ್ಲಿ ನಮ್ಮದೇ ಅಧಿಕಾರ ಇದೆ. ನೀವು ಏನೇ ಮಾಡಿದರೂ, ನಮಗೂ ಏನ್ ಮಾಡಬೇಕೆಂದು ಗೊತ್ತಿದೆ. ನಿಮ್ಮ ಇಂತಹ ಬೆದರಿಕೆಗೆ ನಾನು ಹೆದರುವುದಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಗುರುವಾರ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಆಗಿ ನನ್ನ ಇತಿ-ಮಿತಿ ನನಗೆ ಗೊತ್ತಿದೆ. ಹದ್ದು ಮೀರಿ ಮಾತನಾಡುತ್ತಿರುವುದು ನೀವು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಯಡಿಯೂರಪ್ಪ ಜೈಲಿಗೆ ಹೋದವರು, ಅವರ ವಿರುದ್ಧ ಹಲವು ಹಗರಣಗಳ ಆರೋಪಗಳಿವೆ ಎನ್ನುತ್ತೀರಿ, ನಿಮ್ಮ ಮೇಲೆ ಹಗರಣಗಳ ಆರೋಪಗಳಿಲ್ಲವೇ? ಡಿನೋಟಿಫಿಕೇಷನ್ ಹಗರಣಗಳು ನಿಮ್ಮ ಮೇಲೆ ಕಡಿಮೆ ಇವೆಯೇ?’ ಎಂದು ಯಡಿಯೂರಪ್ಪ ಇದೇ ವೇಳೆ ಪ್ರಶ್ನಿಸಿದರು.

‘ಶಿವರಾಂ ಕಾರಂತ ಬಡಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿದೆ. ಅದು ಬಿಟ್ಟು ಬೆದರಿಕೆ ಹಾಕುವ ತಂತ್ರ ಸಲ್ಲ. ದೇವೇಗೌರ ಕುಟುಂಬ ಮೈಸೂರಿನಲ್ಲಿ ಎಷ್ಟು ನಿವೇಶನ ಮಾಡಿಕೊಂಡಿದೆ ಎಂದು ಗೊತ್ತಿದೆ. ಎಲ್ಲವನ್ನು ದಾಖಲೆ ಸಮೇತ ಹೊರ ಹಾಕ್ತೀನಿ’ ಎಂದು ಎಚ್ಚರಿಸಿದರು.

ಅಧಿಕಾರ ಯಾರಿಗೂ ಶಾಶ್ವತವಲ್ಲ. ಮುಖ್ಯಮಂತ್ರಿ ಸ್ಥಾನವೂ ಶಾಶ್ವತ ಅಲ್ಲ. ನಮ್ಮ ಐದು ವರ್ಷದ ಅವಧಿಯಲ್ಲಿ ಯಾರ ವಿರುದ್ಧವೂ ಸೇಡಿನ ರಾಜಕಾರಣ ಮಾಡಲಿಲ್ಲ. ಆದರೆ, ನೀವು ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಎ.ಮಂಜು, ನಿಮ್ಮ ಕುಟುಂಬದ ವಿರುದ್ಧ ಮಾಡಿರುವ ಭೂ ಹಗರಣ ಆರೋಪ ಕುರಿತು ಕೂಡಲೇ ಸ್ಪಷ್ಟೀಕರಣ ನೀಡಬೇಕು. ಮುಂದಿನ ದಿನಗಳಲ್ಲಿ ಎಲ್ಲವೂ ಜನರಿಗೆ ಗೊತ್ತಾಗಲಿದೆ ಎಂದ ಅವರು, ಈವರೆಗೂ ನಾನು ಡಿ.ಕೆ.ಶಿವಕುಮಾರ್ ವಿರುದ್ಧ ಎಲ್ಲಿಯೂ ಮಾತನಾಡಿಲ್ಲ. ಆದರೂ, ನನ್ನ ವಿರುದ್ಧ ಅವರು ಹೇಳಿಕೆ ನೀಡಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ದೂರು ದಾಖಲು ಮಾಡಿಕೊಂಡಿರುವುದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಈ ಪ್ರಕರಣದಿಂದ ಹೊರಬರುವುದು ನಿಮಗೆ ಕಷ್ಟದ ಕೆಲಸ ಅಲ್ಲ. ಅದನ್ನು ಅವರು ಮಾಡಲಿ ಎಂದು ಬಿಎಸ್‌ವೈ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News