ಬೆಂಗಳೂರು: ಪೆಟ್ ಸಿ.ಟಿ ಸ್ಕಾನ್ ಕಟ್ಟಡ ನಿರ್ಮಾಣಕ್ಕೆ ಚಾಲನೆ

Update: 2018-09-20 15:25 GMT

ಬೆಂಗಳೂರು, ಸೆ.20: ನಗರದ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿರುವ ನ್ಯೂಕ್ಲಿಯರ್ ಮೆಡಿಸಿನ್ ವಿಭಾಗ, ಪೆಟ್ ಸಿ.ಟಿ ಸ್ಕಾನ್ ಕಟ್ಟಡ ನಿರ್ಮಾಣಕ್ಕೆ ಹಾಗೂ ಅಫಾರಿಸಿಸ್ ಯಂತ್ರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ವಿ.ಮಂಜುಳಾ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಗೌವರ್ನರ್ ಸುರೇಶ್ ಹರಿ, ಬಿಬಿಎಂಪಿ ಸದಸ್ಯೆ ಗಂಗಾಂಬಿಕಾ ಮಲ್ಲಿಕಾರ್ಜುನ, ಸಹಭಾಗಿತ್ವ ಕಂಪನಿ ಸದಸ್ಯರಾದ ಪ್ರಸನ್ನ ನಾಗರಾಜ್, ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯೋಜನೆಗಳ ಕುರಿತು ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ, ಭವಿಷ್ಯದಲ್ಲಿ ಆಸ್ಪತ್ರೆಯನ್ನು ಉತ್ತಮ ದರ್ಜೆಗೇರಿಸಲು ಸಿದ್ಧತೆ ಆರಂಭವಾಗಿದೆ. ರೋಬೋಟಿಕ್ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಯಂತ್ರಗಳನ್ನು ಖರೀದಿಸಲಾಗುತ್ತಿದೆ. ಇದರಿಂದ ರೋಗಿಗಳಿಗೆ ಅಗತ್ಯ ನೆರವು ಸಿಗಲಿದೆ ಎಂದು ಅವರು ಹೇಳಿದರು.

ಆಸ್ಪತ್ರೆಯಲ್ಲಿ ರೋಗಿಗಳಿಗೆ ಕ್ರೆಡಿಟ್ ಕಾರ್ಡ್ ಹಾಗೂ ವಿಮೆಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ಬಡ, ಮಧ್ಯಮ ವರ್ಗದ ಎಲ್ಲ ರೋಗಿಗಳಿಗೂ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ಪೆಟ್ ಸ್ಕಾನ್ ಎಂದರೇನು?: ಪೆಟ್ ಸ್ಕಾನ್ ಎಂಬುದು ಸಿ.ಟಿ ಸ್ಕಾನ್ ರೀತಿಯಲ್ಲಿನ ಒಂದು ರೋಗ ತಪಾಸಣೆ ವಿಧಾನವಾಗಿದೆ. ಇದರಿಂದ ಕ್ಯಾನ್ಸರ್ ಪೀಡಿತರು ಯಾವ ಹಂತದಲ್ಲಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕನ ಮಾಡಲು ಸಾಧ್ಯವಾಗುತ್ತದೆ. ಚಿಕಿತ್ಸೆಗೂ ಮೊದಲು ಇದರ ಮೂಲಕ ಸ್ಕಾನ್ ಮಾಡಿ, ಯಾವ ರೀತಿಯ ಚಿಕಿತ್ಸೆ ನೀಡಬೇಕಾಗುತ್ತದೆ ಎಂಬುದನ್ನು ಗುರುತಿಸಲಾಗುತ್ತದೆ.

ನಮ್ಮ ದೇಶದಲ್ಲಿ 2002ರಲ್ಲಿ ಮುಂಬೈನ ಟಾಟಾ ಆಸ್ಪತ್ರೆಯಲ್ಲಿ ಪೆಟ್ ಸ್ಕಾನ್ ಯಂತ್ರವನ್ನು ಅಳವಡಿಸಲಾಗಿತ್ತು. ಅದನ್ನು ಅಂದಿನ ಪ್ರಧಾನಿ ವಾಜಪೇಯಿ ಉದ್ಘಾಟಿಸಿದ್ದರು. ಇದೀಗ ಸರಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ಜನರಿಗೂ ಅತ್ಯುತ್ತಮ ಸೇವೆ ನೀಡುವ ಉದ್ದೇಶದಿಂದ ಕ್ಯಾನ್ಸರ್ ಪತ್ತೆ ಮಾಡುವ ಯಂತ್ರವನ್ನು ಅಳವಡಿಸಲಾಗಿದೆ.

ಈ ಸ್ಕಾನಿಂಗ್ ವಿಭಾಗವನ್ನು ನೂತನ ಕಟ್ಟಡದಲ್ಲಿ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಮುಂದಿನ ವರ್ಷಕ್ಕೆ ಕಾಮಗಾರಿ ಮುಗಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಹೊಸದಾಗಿ ಕೆಲವು ತಂತ್ರಜ್ಞರನ್ನು ಮಾತ್ರ ನೇಮಕ ಮಾಡಿಕೊಳ್ಳುವ ಕುರಿತು ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದರೆ ಹೊಸ ವಿಭಾಗಕ್ಕೆ ವೈದ್ಯರ ನೇಮಕದ ಅಗತ್ಯ ಇಲ್ಲ ಎಂದು ವೈದ್ಯರು ಹೇಳಿದರು.

80 ಲಕ್ಷ ರೂ.ಗಳ ವೆಚ್ಚದಲ್ಲಿ ಈ ಯಂತ್ರವನ್ನು ರೋಟರಿ ಸಂಸ್ಥೆ ಬಾಡಿಗೆ ರೂಪದಲ್ಲಿ ಕಿದ್ವಾಯಿ ಸಂಸ್ಥೆಗೆ ನೀಡಿದೆ. ಇದಕ್ಕೆ ಬೇಕಾದ ಕಿಟ್‌ಗಳನ್ನು ಉಚಿತವಾಗಿ ನೀಡುತ್ತಿದೆ. ವರ್ಷಕ್ಕೆ 150 ಕಿಟ್‌ಗಳನ್ನು ನಾಲ್ಕು ವರ್ಷದವರೆಗೆ ಉಚಿತವಾಗಿ ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಕೇವಲ ಮಕ್ಕಳ ಚಿಕಿತ್ಸೆಗಾಗಿ ಮಾತ್ರ ಬಳಸಲಾಗುತ್ತದೆ. ಕಿಮೋಥೆರಪಿ ಬಳಿಕ ಬಿಳಿರಕ್ತಕಣಗಳ ಶುದ್ಧೀಕರಣಕ್ಕೆ ಈ ಯಂತ್ರ ಬಳಕೆಯಾಗುತ್ತಿದೆ. ವರ್ಷಕ್ಕೆ 150 ರಿಂದ 190 ಮಕ್ಕಳಿಗೆ ಚಿಕಿತ್ಸೆ ನೀಡಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟರು.

ದಿನಕ್ಕೆ 20 ರೋಗಿಗಳಿಗೆ ಸ್ಕಾನಿಂಗ್

ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಅನ್ನು ಪತ್ತೆ ಮಾಡುವ ಸಲುವಾಗಿ ಇದುವರೆಗೂ ಅಲ್ಟ್ರಾಸೌಂಡ್ ಹಾಗೂ ಸಿ.ಟಿ ಸ್ಕಾನ್ ವ್ಯವಸ್ಥೆಯನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ, ಅದಕ್ಕಿಂತ ಉನ್ನತ ದರ್ಜೆಯ ವಿವರಗಳನ್ನು ಇದರಿಂದ ಪಡೆಯಬಹುದಾಗಿದೆ. ಈ ಯಂತ್ರದ ಮೂಲಕ ಪ್ರತಿ ದಿನ 20 ರೋಗಿಗಳನ್ನು ಸ್ಕಾನ್ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News