ಕೆ.ಸಿ.ವ್ಯಾಲಿ ಯೋಜನೆ ವಿಚಾರ: ಮತ್ತಷ್ಟು ಕಾಲಾವಕಾಶ ಕೋರಿ ಸರಕಾರದಿಂದ ಹೈಕೋರ್ಟ್‌ಗೆ ಮನವಿ

Update: 2018-09-20 15:43 GMT

ಬೆಂಗಳೂರು, ಸೆ.20: ನಗರದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕೆರೆಗಳಿಗೆ ಹರಿಸುವ ಕೆಸಿ ವ್ಯಾಲಿ ಯೋಜನೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಜ್ಯಾಕ್ ವೆಲ್)ದಲ್ಲಿನ ನೀರಿನ ಗುಣಮಟ್ಟದ ವರದಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಹೈಕೋರ್ಟ್‌ಗೆ ಸರಕಾರ ಮನವಿ ಮಾಡಿದೆ.

ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ಬೆಳ್ಳಂದೂರು ಕೆರೆಯಿಂದ ಕೋರಮಂಗಲ-ಚಲ್ಲಘಟ್ಟ(ಕೆ.ಸಿ.ವ್ಯಾಲಿ) ಯೋಜನೆಯ ಮೂಲಕ ಕೋಲಾರ ಕೆರೆಗಳಿಗೆ ನೀರು ಹರಿಸಲಿಕ್ಕಾಗಿ ಬೆಳಗೆರೆ ಬಳಿ ನಿರ್ಮಿಸಿರುವ ಜಾಕ್‌ವೆಲ್‌ನಲ್ಲಿ ಸಂಗ್ರಹಿಸಿರುವ ನೀರಿನ ಗುಣಮಟ್ಟದ ವರದಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಎಜಿ ಮನವಿ ಮೇರೆಗೆ ಕಾಲಾವಕಾಶ ನೀಡಿದ ಪೀಠ, ಈ ಹಿಂದೆ ನೀರಿನ ಗುಣಮಟ್ಟ ಪರೀಕ್ಷಿಸುವರೆಗೂ ಕೋಲಾರದ ಕೆರೆಗಳಿಗೆ ನೀರು ಹರಿಸಬಾರದೆಂಬ ಮಧ್ಯಂತರ ಆದೇಶವನ್ನೂ ವಿಸ್ತರಿಸಿ, ವಿಚಾರಣೆಯನ್ನು ಇದೇ ಸೆ.26ಕ್ಕೆ ಮುಂದೂಡಿತು.

ಚಿಕ್ಕಬಳ್ಳಾಪುರದ ಬೆಳೆಗೆರೆ ಬಳಿ ಇರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಜ್ಯಾಕ್‌ವೆಲ್)ದಲ್ಲಿನ ನೀರಿನ ಗುಣಮಟ್ಟ ಸರಿಯಿಲ್ಲ, ಹೀಗಾಗಿ ಕೆರೆಗೆ ಹರಿಸಿರುವ ನೀರಿನಲ್ಲಿ ನೊರೆ ಕಾಣಿಸಿಕೊಳ್ಳುತ್ತಿದೆ. ಇಂತಹ ನೀರಿನಿಂದ ಅಂತರ್ಜಲ ಕೂಡ ಹಾಳಾಗಲಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ ಕಳೆದ ವಿಚಾರಣೆ ವೇಳೆ ನೀರಿನ ಪರೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿತ್ತು. ಆದರೆ ವರದಿ ಸಿದ್ದವಾಗಿಲ್ಲದ ಕಾರಣ ಸರಕಾರ ಮತ್ತಷ್ಟು ಕಾಲಾವಕಾಶಕ್ಕೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News