ಇಬ್ಬರನ್ನು ಮನೆಯಿಂದಲೇ ಕರೆದೊಯ್ಯಲಾಗಿತ್ತು ಎನ್ನುತ್ತಿರುವ ಕುಟುಂಬ ಸದಸ್ಯರು

Update: 2018-09-21 10:59 GMT
ಮುಸ್ತಕೀಮ್ ತಾಯಿ (ಫೋಟೊ ಕೃಪೆ: indianexpress.com)

ಅಲಿಘರ್, ಸೆ.21: ಆರು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇಕಾಗಿದ್ದ ಇಬ್ಬರು ವ್ಯಕ್ತಿಗಳನ್ನು ಅಲಿಘರ್ ನಲ್ಲಿ ಗುರುವಾರ ಎನ್‍ಕೌಂಟರ್ ನಲ್ಲಿ ಸಾಯಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಮೃತ ಇಬ್ಬರು ಆರೋಪಿಗಳಾದ ಮುಸ್ತಕೀಮ್ (25) ಹಾಗೂ ನೌಶಾದ್ (22)ರ ಸುಳಿವು ನೀಡಿದವರಿಗೆ 25,000 ರೂ. ಬಹುಮಾನ ಈ ಹಿಂದೆ ಘೋಷಿಸಲಾಗಿತ್ತು ಎಂದೂ ಪೊಲೀಸರು ಹೇಳಿಕೊಂಡಿದ್ದಾರೆ. ಈ ಎನ್‍ಕೌಂಟರ್ ನೊಂದಿಗೆ ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರಕಾರ ಕಳೆದ ಮಾರ್ಚ್ 27ರಂದು ಅಸ್ತಿತ್ವಕ್ಕೆ ಬಂದಂದಿನಿಂದ ನಡೆದ ಎನ್‍ಕೌಂಟರ್ ಗಳ ಸಂಖ್ಯೆ 67ಕ್ಕೆ ಏರಿದೆ.

ಆದರೆ ಎನ್‍ಕೌಂಟರ್ ನಲ್ಲಿ ಹತ್ಯೆಗೀಡಾದ ಇಬ್ಬರು ವ್ಯಕ್ತಿಗಳ ಕುಟುಂಬ ಸದಸ್ಯರು ಮಾತ್ರ ಭೈನಸ್ಪದ ಎಂಬಲ್ಲಿನ ಅವರ ಮನೆಗಳಿಂದ ರವಿವಾರ ಕರೆದೊಯ್ಯಲಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅವರ ಪ್ರಕಾರ ಮುಸ್ತಕೀಮ್ ವಯಸ್ಸು 22 ಆಗಿದ್ದರೆ ನೌಶಾದ್ ವಯಸ್ಸು 17 ಆಗಿದೆ.

“ರವಿವಾರ ರಾತ್ರಿ 2.30ರ ಹೊತ್ತಿಗೆ ಮನೆಗೆ ಬಂದು ಇಬ್ಬರನ್ನೂ ಕರೆದೊಯ್ದರು. ಮುಸ್ತಕೀಮ್ ಸೋದರ ಸಲ್ಮಾನ್ ನನ್ನು ಮಂಗಳವಾರ ಬಂಧಿಸಲಾಗಿತ್ತು” ಎಂದು ಆತನ ಅಜ್ಜಿ ಹೇಳಿದರೆ ನೌಶಾದ್ ತಾಯಿ, ದಿನಗೂಲಿ ಕಾರ್ಮಿಕೆ ಶಹೀನ್ ತಾನು ನ್ಯಾಯಕ್ಕಾಗಿ ಹೋರಾಡುವುದಾಗಿ ಹೇಳಿದ್ದಾರೆ.

ಪೊಲೀಸರ ಪ್ರಕಾರ ಐದು ಮಂದಿಯ ವಿರುದ್ಧ ಆರು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ ಮಂಗಳವಾರ ದಾಖಲಿಸಲಾಗಿದ್ದರೆ, ಅವರಲ್ಲಿ ಮುಸ್ತಕೀಮ್, ನೌಶಾದ್ ಹಾಗೂ ಅಫ್ಸರ್ ತಪ್ಪಿಸಿಕೊಂಡಿದ್ದರು. “ಮುಸ್ತಕೀಮ್ ಮತ್ತು ನೌಶಾದ್ ಬುಧವಾರ ಕ್ವಾರ್ಸಿ ಪೊಲೀಸ್ ಠಾಣಾ ಸರಹದ್ದಿನಿಂದ ಒಂದು ಮೋಟಾರ್ ಬೈಕ್ ಮತ್ತು ಎರಡು ಮೊಬೈಲ್ ಫೋನುಗಳನ್ನು ಕದ್ದಿದ್ದರಿಂದ ಪೊಲೀಸರು ಅವರಿಗಾಗಿ ಶೋಧಿಸುತ್ತಿರುವಾಗ ಅವರು ಹರ್ದುವಾಗಂಜ್ ನತ್ತ ಸಾಗುತ್ತಿರುವುದನ್ನು ಕಂಡುಬಂದಿತ್ತು.  ಅವರನ್ನು ತಡೆಯಲಾದರೂ ಅವರು ಪೊಲೀಸರತ್ತ ಗುಂಡು ಹಾರಿಸಿದ್ದರಿಂದ ಪೊಲೀಸರು ಪ್ರತಿ ಗುಂಡು ಹಾರಿಸಬೇಕಾಯಿತು. ನಂತರ ಅವರು ಮಛ್ವ ಕಾಲುವೆ ಸಮೀಪದ ಪಾಳು ಬಿದ್ದ ಕಟ್ಟಡ ಪ್ರವೇಶಿಸಿ ಅಲ್ಲಿಂದಲೂ ಗುಂಡು ಹಾರಿಸಲಾರಂಭಿಸಿದರು. ಸುಮಾರು ಒಂದೂವರೆ ಗಂಟೆ ಗುಂಡಿನ ಚಕಮಕಿಯ ನಂತರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟರು,'' ಎಂದು ಎಸ್‍ಪಿ ಅತುಲ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ.

ಘಟನೆಯಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಪ್ರದೀಪ್ ಕುಮಾರ್ ಗಾಯಗೊಂಡಿದ್ದರು. ಸತ್ತ ಇಬ್ಬರೂ ಬಾಡಿಗೆ ಹಂತಕರಾಗಿದ್ದರೆಂದು ಪೊಲೀಸರು ಹೇಳಿದ್ದಾರೆ. ಇಬ್ಬರನ್ನೂ ಅವರ ಮನೆಯಿಂದ ಪೊಲೀಸರು ಕರೆದೊಯ್ದಿದ್ದರು ಎಂಬ ಅವರ ಕುಟುಂಬಗಳ ಆರೋಪವನ್ನು ಎಸ್‍ ಪಿ ಶ್ರೀವಾಸ್ತವ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News