ಎಸ್-400 ಕ್ಷಿಪಣಿ ಖರೀದಿಸಿದರೆ ಭಾರತದ ವಿರುದ್ಧವೂ ದಿಗ್ಬಂಧನ?

Update: 2018-09-21 17:51 GMT

ವಾಶಿಂಗ್ಟನ್, ಸೆ. 21: ರಶ್ಯದಿಂದ ಎಸ್-400 ರಕ್ಷಣಾ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಖರೀದಿಸಿರುವುದಕ್ಕಾಗಿ ಚೀನಾ ಸೇನೆಯ ವಿರುದ್ಧ ಅಮೆರಿಕ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ. ಇದೇ ಎಸ್-400 ಕ್ಷಿಪಣಿಗಳನ್ನು ಖರೀದಿಸಲು ಭಾರತವೂ ಕಾಯುತ್ತಿದೆ.

ಹಾಗಾಗಿ, ಈ ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಮುಂದಾಗಿರುವ ದೇಶಗಳು ತಮ್ಮ ನಿರ್ಧಾರದ ಬಗ್ಗೆ ‘ಇನ್ನೊಮ್ಮೆ ಯೋಚಿಸಬೇಕು’ ಎಂದು ಯಾವುದೇ ದೇಶವನ್ನು ಹೆಸರಿಸದೆ ಅಮೆರಿಕದ ಟ್ರಂಪ್ ಆಡಳಿತ ಹೇಳಿದೆ.

 ಅಮೆರಿಕದ ರಶ್ಯ ಸಂಬಂಧಿ ಕಾನೂನಿನಲ್ಲಿ ಈ ದಂಡನಾತ್ಮಕ ಅಂಶವಿದೆ. ಈ ಕಾನೂನಿನ ಪ್ರಕಾರ, ರಶ್ಯದ ಶಸ್ತ್ರ ತಯಾರಿಕಾ ಕಂಪೆನಿಗಳು, ಗುಪ್ತಚರ ಸಂಸ್ಥೆಗಳು ಮತ್ತು ಸೇನಾ ಘಟಕಗಳೊಂದಿಗೆ ಗಣನೀಯ ಪ್ರಮಾಣದ ವ್ಯವಹಾರಗಳನ್ನು ನಡೆಸಲು ಮುಂದಾಗುವ ಯಾರೇ ಆದರೂ ಅಮೆರಿಕದಿಂದ ಪರವಾನಿಗೆಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಯುಕ್ರೇನ್ ಮೇಲೆ ದಾಳಿ ನಡೆಸಿರುವುದಕ್ಕಾಗಿ ಹಾಗೂ 2016ರ ಅಮೆರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿರುವುದಕ್ಕಾಗಿ ರಶ್ಯವನ್ನು ಶಿಕ್ಷಿಸಲು ಅಮೆರಿಕವು 2017ರಲ್ಲಿ ಕೋಂಬ್ಯಾಟಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ತ್ರೂ ಸ್ಯಾಂಕ್ಷನ್ಸ್ ಆ್ಯಕ್ಟ್ (ಸಿಎಎಟಿಎಸ್‌ಎ) ಎಂಬ ಕಾನೂನನ್ನು ಜಾರಿಗೆ ತಂದಿರುವುದನ್ನು ಸ್ಮರಿಸಬಹುದಾಗಿದೆ.

ಅಮೆರಿಕವು ಈ ಕಾನೂನಡಿಯಲ್ಲಿ ಪ್ರಥಮ ದಂಡನಾ ಕ್ರಮವನ್ನು ಚೀನಾದ ವಿರುದ್ಧ ತೆಗೆದುಕೊಂಡಿದೆ.

ಅಮೆರಿಕದ ದಂಡನೆಗೆ ಒಳಗಾಗಿರುವ ಚೀನಾದ ಸಂಸ್ಥೆ ಈಕ್ವಿಪ್‌ಮೆಂಟ್ ಡೆವಲಪ್‌ಮೆಂಟ್ ಡಿಪಾರ್ಟ್‌ಮೆಂಟ್ (ಇಡಿಡಿ) ಚೀನಾ ಸೇನೆಯ ಭಾಗವಾಗಿದೆ. ರಶ್ಯದಿಂದ ಎಸ್‌ಯು-35 ಯದ್ಧವಿಮಾನಗಳು ಮತ್ತು ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಡಿಸೆಂಬರ್ ಮತ್ತು ಜನವರಿಯಲ್ಲಿ ಖರೀದಿಸಿರುವುದಕ್ಕಾಗಿ ಈ ದಂಡನಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ.

ಎಸ್-400 ಕ್ಷಿಪಣಿ ಖರೀದಿ ಗಂಭೀರ ವಿಷಯ: ಅಮೆರಿಕ

ಇತರ ಎಸ್-400 ಕ್ಷಿಪಣಿ ವ್ಯವಸ್ಥೆಯ ಸಂಭಾವ್ಯ ಖರೀದಿದಾರರ ವಿರುದ್ಧ ದಂಡನಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಇನ್ನೂ ಖಚಿತ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ಹೇಳಿದ್ದಾರೆ.

ಆದಾಗ್ಯೂ, ಈ ವಿಷಯದಲ್ಲಿ ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.

‘‘ಎಸ್-400ರಂಥ ಕ್ಷಿಪಣಿ ವ್ಯವಸ್ಥೆಗಳು ಪ್ರಮುಖ ಅಸ್ತ್ರಗಳಾಗಿವೆ ಹಾಗೂ ಇವುಗಳಿಗೆ ಸಿಎಎಟಿಎಸ್‌ಎ ಕಾನೂನು ಅನ್ವಯಿಸಬಹುದಾಗಿದೆ ಎಂಬುದನ್ನು ನಾವು ಸಂಬಂಧಪಟ್ಟವರಿಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದೇವೆ’’ ಎಂದು ಯಾವುದೇ ದೇಶವನ್ನು ಹೆಸರಿಸದೆ ಅವರು ಹೇಳಿದ್ದಾರೆ.

ವಿನಾಯಿತಿ ಕೋರಿದ ಭಾರತ

 ರಶ್ಯದಿಂದ 6 ಬಿಲಿಯ ಡಾಲರ್ (ಸುಮಾರು 43,500 ಕೋಟಿ ರೂಪಾಯಿ) ವೆಚ್ಚದಲ್ಲಿ ಐದು ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಭಾರತ ಉದ್ದೇಶಿಸಿದೆ.

ಇದಕ್ಕಾಗಿ ಸಿಎಎಟಿಎಸ್‌ಎ ಕಾನೂನಿನಿಂದ ವಿನಾಯಿತಿ ನೀಡುವಂತೆ ಅದು ಅಮೆರಿಕವನ್ನು ಕೋರಿದೆ.

ಈ ಕಾನೂನಿನಡಿ ವಿಶೇಷ ವಿನಾಯಿತಿ ನೀಡುವ ಅಧಿಕಾರ ಅಮೆರಿಕದ ಅಧ್ಯಕ್ಷರಿಗಿದೆ.

ಈ ತಿಂಗಳ ಆದಿ ಭಾಗದಲ್ಲಿ ಹೊಸದಿಲ್ಲಿಯಲ್ಲಿ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಜೊತೆ ಭಾರತದ ವಿದೇಶ ಸಚಿವೆ ಸುಶ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಡೆಸಿದ 2+2 ಮಾತುಕತೆಯ ವೇಳೆ, ವಿನಾಯಿತಿ ನೀಡುವ ಪ್ರಸ್ತಾಪವನ್ನು ಭಾರತ ಮುಂದಿಟ್ಟಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News