ವಿಪರೀತ ಮದ್ಯಪಾನದಿಂದ 2016ರಲ್ಲಿ 30 ಲಕ್ಷ ಸಾವು: ವಿಶ್ವ ಆರೋಗ್ಯ ಸಂಸ್ಥೆ

Update: 2018-09-22 07:16 GMT

ಜಿನೇವಾ, ಸೆ.22:  ವಿಪರೀತ ಮದ್ಯಪಾನದಿಂದಾಗಿ 2016ರಲ್ಲಿ ಜಗತ್ತಿನಲ್ಲಿ 30 ಲಕ್ಷ ಮಂದಿ ಸಾವನ್ನಪ್ಪಿದ್ದು, ಇವರಲ್ಲಿ ಹೆಚ್ಚಿನವರು ಪುರುಷರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈಗಿನ ನೀತಿಗಳು ಮದ್ಯಪಾನವನ್ನು ನಿರುತ್ತೇಜಿಸುತ್ತಿಲ್ಲವಾದ ಕಾರಣ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಮದ್ಯಪಾನದ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದೆಂದು  ಅದು ಹೇಳಿದೆ.

ಶುಕ್ರವಾರ ಬಿಡುಗಡೆಗೊಳಿಸಿದ ತನ್ನ ವರದಿಯಲ್ಲಿ ಈ ವಿಚಾರ ಬಹಿರಂಗಪಡಿಸಿದ ಸಂಸ್ಥೆ ಜಗತಿನಾದ್ಯಂತ 23.7 ಕೋಟಿ ಪುರುಷರು ಹಾಗೂ  4.6 ಕೋಟಿ ಮಹಿಳೆಯರು ಮದ್ಯಪಾನ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿದ್ದು, ಯುರೋಪ್ ಮತ್ತು ಅಮೆರಿಕಾ ನಾಗರಿಕರು ಅತಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆಂದು ಹೇಳಿದೆ. ಯುರೋಪ್ ನಲ್ಲಿ ತಲಾ ಮದ್ಯಪಾನ ಸೇವನೆಯು ಜಗತ್ತಿನಲ್ಲಿಯೇ ಅಧಿಕವಾಗಿದೆ. ಆದರೆ 2010ರಿಂದೀಚೆಗೆ ಇದು ಶೇ.10ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ.

ಮದ್ಯಪಾನದಿಂದಾಗಿ ಉಂಟಾಗುವ ಮೂರನೇ ಒಂದರಷ್ಟು ಸಾವುಗಳು ರಸ್ತೆ ಅಪಘಾತಗಳು ಹಾಗೂ ಸ್ವಯಂ ಹಾನಿಯಿಂದ ಉಂಟಾಗುತ್ತಿವೆ ಹಾಗೂ ಪ್ರತಿ ಐದು ಸಾವಿನ ಪ್ರಕರಣಗಳಲ್ಲಿ ಒಂದು ಪ್ರಕರಣವು  ಆರೋಗ್ಯ ಸಮಸ್ಯೆಗಳಿಂದ ಸಂಭವಿಸುತ್ತವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆರೋಗ್ಯಕರ ಸಮಾಜದ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿರುವ ಈ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರಾದ ಟೆಡ್ರೊಸ್ ಅಧನೊಮ್  ಘೆಬ್ರೆಯೆಸುಸ್ ತಿಳಿಸಿದ್ದಾರೆ.

ಜಾಗತಿಕವಾಗಿ 230 ಕೋಟಿ ಜನರು ಮದ್ಯ ಸೇವಿಸುತ್ತಾರೆಂದೂ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News