ರೈತರ ಆತ್ಮಹತ್ಯೆ ತಡೆಯುವಲ್ಲಿ ರಾಜ್ಯ ಸರಕಾರ ವಿಫಲ: ಯಡಿಯೂರಪ್ಪ

Update: 2018-09-22 12:23 GMT

ಬೆಂಗಳೂರು, ಸೆ.22: ರಾಜ್ಯದ ಜನರ ಮತ್ತು ರೈತರ ಇಂದಿನ ಪರಿಸ್ಥಿತಿಯು ‘ರೋಮ್ ಸಾಮ್ರಾಜ್ಯವು ಹೊತ್ತಿ ಉರಿಯುತ್ತಿರುವಾಗ ನೀರೋ ಪಿಟೀಲು ಭಾರಿಸುತ್ತಿದ್ದ’ ಎಂಬ ಹೇಳಿಕೆಯನ್ನು ನೆನಪಿಸುವಂತಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

ತಮ್ಮ ಜೀವನ ನಿರ್ವಹಣೆ ಮಾಡಲಾಗದೆ ವಿಫಲರಾದ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವಾಗ, ಇದನ್ನು ನಿಭಾಯಿಸಬೇಕಾದ ಮುಖ್ಯಮಂತ್ರಿ ಕುಮಾರಸ್ವಾಮಿ, ದೇವಾಲಯಗಳನ್ನು ಸುತ್ತುತ್ತಿದ್ದಾರೆ ಹಾಗೂ ಅವರ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಅನಗತ್ಯ ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಮತ್ತು ಜನರ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ರಾಜ್ಯವನ್ನು ಆಳಲು ವಿಫಲವಾದಾಗ ಮುಖ್ಯಮಂತ್ರಿಯನ್ನು ಬಿಜೆಪಿ ಮತ್ತು ನಾನು ಟೀಕಿಸಿದಾಗ, ಬಿಜೆಪಿ ತನ್ನ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಆಪಾದನೆ ಮಾಡುತ್ತಾರೆ ಎಂದು ಅವರು ಟೀಕಿಸಿದರು.

ಇಂದು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸುಂಕತೊನ್ನೂರು ಗ್ರಾಮದಲ್ಲಿ ರೈತ ನಂದೀಶ್, ಅವರ ಹೆಂಡತಿ ಕೋಮಲಾ ಹಾಗೂ ಮಕ್ಕಳಾದ ಚಂದನಾ ಮತ್ತು ಮನು ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗೆ ಜವಾಬ್ದಾರಿ ಯಾರು? ಎಂದು ಮುಖ್ಯಮಂತ್ರಿಯನ್ನು ಅವರು ಪ್ರಶ್ನಿಸಿದ್ದಾರೆ.

ಈ ಕೃಷಿ ಕುಟುಂಬದ ಮರಣವು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವು ಜನರ ಅಗತ್ಯಗಳನ್ನು ಪೂರೈಸಲು ವಿಫಲವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಈ ಸರಕಾರವು ಘೋಷಿಸಿದ ಕೃಷಿ ಸಾಲ ಮನ್ನಾ ಯೋಜನೆಯು ‘ಸುಳ್ಳಿನ ಕಂತೆ’ ಎಂಬುದು ಇದರಿಂದ ತಿಳಿದು ಬರುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕುಮಾರಸ್ವಾಮಿ ಘೋಷಿಸಿದ ಸಾಲ ಮನ್ನಾ ಯೋಜನೆ ಅಪ್ರಯೋಜಕವಾಗಿದೆ. ಇದೊಂದು ಕಣ್ಣೊರೆಸುವ ತಂತ್ರ. ಈ ಸರಕಾರವು ರೈತರ ಸಾಲ ಮನ್ನಾ ಮಾಡುವ ಸ್ಪಷ್ಟ ನೀಲನಕ್ಷೆ ಹಾಗೂ ಉದ್ದೇಶಗಳನ್ನು ಹೊಂದಲು ವಿಫಲವಾಗಿದೆ. ರೈತರ ಸಾಲ ಮನ್ನಾ ಯೋಜನೆಯು ನಿಜವಾಗಿದ್ದರೆ ಇನ್ನೂ ಕೂಡ ರೈತರು ಏಕೆ ಸಾವನ್ನಪ್ಪುತ್ತಿದ್ದಾರೆ? ರೈತರ ಆತ್ಮಹತ್ಯೆಯನ್ನು ಏಕೆ ತಡೆಯಲಾಗುತ್ತಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.

ನಿಮ್ಮ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ 50 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದೂ ಕೂಡ ಯುವ ರೈತ ಮತ್ತು ಅವರ ಇಡೀ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿರುವುದು ನಿಮ್ಮ ಸಾಲ ಮನ್ನಾ ಯೋಜನೆಯಲ್ಲಿ ಯಾವುದೇ ಸತ್ವ ಇಲ್ಲ ಎಂಬುದನ್ನು ಬಹಿರಂಗಪಡಿಸುತ್ತದೆ ಎಂದು ಯಡಿಯೂರಪ್ಪ ಟೀಕಿಸಿದ್ದಾರೆ.

ನೀವು ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ರೈತರ ಸಮಸ್ಯೆಗಳನ್ನು ಚರ್ಚಿಸಲು ಯಾವುದಾದರೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೀರಾ? ಬಜೆಟ್ ಕುರಿತು ಮಾತನಾಡುವಾಗ ನೀವು ರೈತರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ನೂರಾರು ವಿಷಯಗಳನ್ನು ಹೇಳಿದ್ದೀರಿ, ಇಸ್ರೇಲ್ ತಂತ್ರಜ್ಞಾನವನ್ನು ನಮ್ಮ ಹೊಲಗಳಿಗೆ ತರುವ ಬಗ್ಗೆಯೂ ನೀವು ಮಾತನಾಡಿದ್ದೀರಿ. ಇಸ್ರೇಲ್ ತಂತ್ರಜ್ಞಾನ ಹೋಗಲಿ ಬಿಡಿ, ನಮ್ಮ ರೈತರ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಅವುಗಳನ್ನು ಕಡಿಮೆ ಮಾಡಲು ನೀವು ಎಷ್ಟು ಸಮಯವನ್ನು ಕಳೆದಿದ್ದೀರಿ? ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದ 18 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಬರಗಾಲದಂತಹ ಸ್ಥಿತಿ ಬಂದೊದಗಿದೆ. ರೈತರು ತಮ್ಮ ಮುಂಗಾರು ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಮತ್ತು ಹಿಂಗಾರು ಬಿತ್ತನೆ ಮಾಡಲು ಹಣವಿಲ್ಲದೇ ಪರಿತಪಿಸುತ್ತಿದ್ದಾರೆ. ನಿಮ್ಮ ಸರಕಾರ ಬದುಕುಳಿಯುವುದು ಈಗಿನ ಅಗತ್ಯವಲ್ಲ, ಜನರು ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸುವುದು ಇಂದಿನ ಅಗತ್ಯವಾಗಿದೆ. ಇನ್ನಾದರೂ ನಿಮ್ಮ ರಾಜಕೀಯ ತಂತ್ರಗಾರಿಕೆಗೆ ವಿರಾಮ ನೀಡಿ, ಬಡವರು ಮತ್ತು ರೈತರ ಪರ ಕಾಳಜಿ ತೋರಿಸಿ ಎಂದು ಯಡಿಯೂರಪ್ಪ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

ಸಿಎಂ ಉದಾಸೀನತೆಯಿಂದಲೇ ಸಾವು

ಇಂದು ಮರಣ ಹೊಂದಿದ ರೈತ ನಂದೀಶ್ ಸ್ವತಃ ತಮ್ಮ ಡೆತ್ ನೋಟ್‌ನಲ್ಲಿ ತನ್ನ ಸಾಲಗಳಿಂದ ಪರಿಹಾರ ಪಡೆಯಲು ಎರಡು ಬಾರಿ ತಮ್ಮನ್ನು ಭೇಟಿ ಮಾಡಿದ್ದೇನೆಂದು ಬಹಿರಂಗಪಡಿಸಿದ್ದಾನೆ. ಅವರ ಆತ್ಮಹತ್ಯೆಗೆ ನೀವೇ ಕಾರಣರೆಂದು ಯಾಕೆ ಆರೋಪಿಸಬಾರದು? ನಿಮ್ಮ ಉದಾಸೀನತೆಯಿಂದ ಈ ಸಾವು ಸಂಭವಿಸಿಲ್ಲವೇ ? ಈಗಲಾದರೂ ನನ್ನ ಹಾಗೂ ಬಿಜೆಪಿ ವಿರುದ್ಧ ಮಾತನಾಡುವ ಕ್ಷುಲ್ಲಕ ರಾಜಕೀಯ ನಿಲ್ಲಿಸುತ್ತೀರಾ? ರಾಜ್ಯದ ಜನರ ಅದರಲ್ಲೂ ವಿಶೇಷವಾಗಿ ರೈತರ ಸಮಸ್ಯೆಗಳ ಬಗ್ಗೆ ಯೋಚಿಸುತ್ತೀರಾ?

-ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News