ಒಡಕು ಮೂಡಿಸುವುದರಲ್ಲಿ ಬಿಜೆಪಿಯವರು ನಿಸ್ಸೀಮರು: ಮಲ್ಲಿಕಾರ್ಜುನ ಖರ್ಗೆ

Update: 2018-09-22 12:27 GMT

ಬೆಂಗಳೂರು, ಸೆ. 22: ಯಾವುದೇ ಒಂದು ಪಕ್ಷದಲ್ಲಿ ಒಡಕು, ಭಿನ್ನಾಭಿಪ್ರಾಯ ಮೂಡಿಸುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಬಿಜೆಪಿಯವರಿಗೆ ಬಹುಮತ ಇಲ್ಲದಿದ್ದಾಗ ಶಾಸಕರನ್ನು ಗೋವಾಗೆ ಕರೆದುಕೊಂಡು ಹೋಗಿ, ಅನಂತರ ಸರಕಾರ ರಚಿಸಿದ್ದರು. ಮೈತ್ರಿ ಸರಕಾರ ಸುಭದ್ರವಾಗಿರುವಾಗ ಬಿಜೆಪಿಯವರು ಏಕೆ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕಬೇಕೆಂದು ಪ್ರಶ್ನಿಸಿದರು.

ಸಂಪುಟ ವಿಸ್ತರಣೆಗೆ ಯಾವುದೇ ಗೊಂದಲ ಇಲ್ಲ. ಎಲ್ಲ ಶಾಸಕರಿಗೆ ಸ್ಥಾನಮಾನ ಕೊಡಲು ಸಾಧ್ಯವಿಲ್ಲ. ಆದರೆ, ಸಚಿವ ಸ್ಥಾನ ಕೈತಪ್ಪಿದ ಶಾಸಕರ ಅಸಮಾಧಾನ ಸಹಜ. ಅದನ್ನೆ ನೆಪ ಮಾಡಿಕೊಂಡು ವಿಪಕ್ಷದವರು ಗುಲ್ಲೆಬ್ಬಿಸುವುದು ಸರಿಯಲ್ಲ. ಇದು ಹುಲಿ ಬಂತು ಹುಲಿ ಕಥೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

‘ದಂಗೆ’ ಪದ ಬಳಕೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೆ ಸ್ಪಷ್ಟೀಕರಣ ನೀಡಿದ್ದಾರೆ. ಬಿಜೆಪಿಯವರು ಮಾಡಿರುವುದನ್ನು ಜನ ಒಪ್ಪಲ್ಲ ಅನ್ನುವ ಅರ್ಥದಲ್ಲಿ ಕುಮಾರಸ್ವಾಮಿ ಈ ಪದ ಬಳಕೆ ಮಾಡಿರಬಹುದು. ನೀವ್ಯಾಕೆ ಅದರ ಹಿಂದೆ ಬಿದ್ದಿದ್ದೀರಾ? ರಾಜ್ಯಪಾಲರಿಗೆ ದೂರು ಕೊಡಲಿ, ಬಿಜೆಪಿಗೆ ಅದೇ ಕೆಲಸ. ಕೇಂದ್ರದಲ್ಲಿ ನಮ್ಮ ಸರಕಾರ ಇದೆ ಅಂತಾ ಹೆದರಿಸೋದು ಸರಿಯೇ? ಎಂದು ಖರ್ಗೆ ಪ್ರಶ್ನಿಸಿದರು.

ನೀವೂ ನನ್ನನ್ನು ಹಿಂದೆ ತಳ್ತೀರಾ ?

ಫೋಟೋ ತೆಗೆದುಕೊಳ್ಳಲು ‘ಸಾರ್ ಸ್ವಲ್ಪ ಹಿಂದೆ ಹೋಗಿ ಸಾರ್’ ಎಂದು ಛಾಯಾಚಿತ್ರಗಾರರು, ಮಲ್ಲಿಕಾರ್ಜುನ ಖರ್ಗೆಯುವರನ್ನು ಕೋರಿದರು. ಇದಕ್ಕೆ ಸ್ಪಂದಿಸಿ ಪ್ರತಿಕ್ರಿಯೆ ನೀಡಿದ ಖರ್ಗೆ, ಹೌದಾ ಹಿಂದೆ ಹೋಗಬೇಕಾ..! ಅಲ್ಲಾ.. ಎಲ್ರೂ ನನ್ನ ಹಿಂದೆ ತಳ್ತಾರೆ..., ನೀವು ನನ್ನ ಹಿಂದೆ ತಳ್ತೀರಾ..ಎಂದು ಚಟಾಕಿ ಹಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News