ಎರಡು ಶಾಲೆಗಳಲ್ಲಿ ಇಬ್ಬರು 4 ವರ್ಷದ ಬಾಲಕಿಯರ ಮೇಲೆ ಅತ್ಯಾಚಾರ

Update: 2018-09-22 12:58 GMT

ಹೈದರಾಬಾದ್, ಸೆ.22: ಕೆಲವೇ ದಿನಗಳ ಅಂತರದಲ್ಲಿ ನಗರದ ಎರಡು ಶಾಲೆಗಳಲ್ಲಿ ನಾಲ್ಕು ವರ್ಷದ ಇಬ್ಬರು ವಿದ್ಯಾರ್ಥಿನಿಯರ ಮೇಲೆ  ನಡೆದಿದೆಯೆನ್ನಲಾದ ಅತ್ಯಾಚಾರ ಪ್ರಕರಣ ಸಾಕಷ್ಟು ಆತಂಕ ಸೃಷ್ಟಿಸಿದೆಯಲ್ಲದೆ ಈ ಸಂಸ್ಥೆಗಳನ್ನು ಮುಚ್ಚಬೇಕೆಂಬ ಆಗ್ರಹವೂ ಕೇಳಿ ಬಂದಿದೆ.

ನಗರದ ಖ್ಯಾತ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಕಲಿಯುತ್ತಿರುವ ಒಂದನೇ ತರಗತಿಯ ಬಾಲಕಿಯ ಮೇಲೆ ಅಪರಿಚಿತನೊಬ್ಬ  ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ನಡೆದಿದೆ. ತನ್ನ ಮೇಲೆ ದೌರ್ಜನ್ಯವೆಸಗಿದ ವ್ಯಕ್ತಿ ಯಾರೆಂದು ಸಂತ್ರಸ್ತೆ ಬಾಲಕಿಗೆ ತಿಳಿದಿಲ್ಲ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಬಾಲಕಿಯ ತಂದೆ ಹೈದರಾಬಾದ್ ಪೊಲೀಸರಲ್ಲಿ ನೀಡಿದ ದೂರಿನ ಆಧಾರದಲ್ಲಿ ಅಪರಿಚಿತ ವ್ಯಕ್ತಿಯ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಈ ಘಟನೆ ಸೆಪ್ಟೆಂಬರ್ 14ರಂದು ನಡೆದಿದೆಯೆನ್ನಲಾಗಿದ್ದು ಬಾಲಕಿಯ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ಶಾಲೆ ತನ್ನ ವಿದ್ಯಾರ್ಥಿನಿಯರಿಗೆ ರಕ್ಷಣೆಯೊದಗಿಸಲು ವಿಫಲವಾಗಿರುವುದರಿಂದ  ಅದಕ್ಕೆ ನೀಡಲಾದ ಪರವಾನಗಿಯನ್ನು ರದ್ದುಗೊಳಿಸಿ ಅದನ್ನು ಮುಚ್ಚಬೇಕೆಂದು ಆಂಧ್ರ ಪ್ರದೇಶ ಮಕ್ಕಳ ಹಕ್ಕುಗಳ ಸಂಘಟನೆ ಅಧ್ಯಕ್ಷ ಪಿ ಅಚ್ಯುತ ರಾವ್ ಆಗ್ರಹಿಸಿದ್ದಾರೆ.

ಇಂತಹುದೇ ಇನ್ನೊಂದು ಘಟನೆಯಲ್ಲಿ ಗೊಲ್ಕೊಂಡ ಪೊಲೀಸರು ನಗರದ ಶಾಲೆಯೊಂದರ  ಸೂಪರ್‍ವೈಸರ್ ವಿರುದ್ಧ ಪಕ್ರರಣ ದಾಖಲಿಸಿದ್ದಾರೆ, ಶಾಲೆಯ ಕಿಂಡರ್‍ಗಾರ್ಟನ್ ವಿದ್ಯಾರ್ಥಿನಿಯೊಬ್ಬಳಿಗೆ ಚಾಕಲೇಟ್ ಆಮಿಷ ನೀಡಿ  ವಾಶ್ ರೂಮಿಗೆ ಕರೆದುಕೊಂಡು ಹೋಗಿ ಆತ ಅತ್ಯಾಚಾರ ನಡೆಸಿದ್ದಾನೆಂದು ಆರೋಪಿಸಲಾಗಿದೆ.

ಬಾಲಕಿ ಮನೆಗೆ ಹಿಂದಿರುಗಿ ಹೊಟ್ಟೆ ನೋವೆಂದು ಹೇಳಿದ್ದು ಆಕೆಯ ಬಟ್ಟೆಯಲ್ಲಿ ರಕ್ತದ ಕಲೆಗಳನ್ನು ನೋಡಿ ಪೊಲೀಸ್ ದೂರು ನೀಡಿ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಗುರಿ ಪಡಿಸಲಾಗಿದ್ದು ಅತ್ಯಾಚಾರ ದೃಢಪಟ್ಟಿದೆಯೆನ್ನಲಾಗಿದೆ. ಬಾಲಕಿಗೆ ಒಂದು ಸಣ್ಣ ಶಸ್ತ್ರಕ್ರಿಯೆ ಕೂಡ ನಡೆಸಲಾಗಿದ್ದು ಆಕೆಯೀಗ ಚೇತರಿಸಿಕೊಳ್ಳುತ್ತಿದ್ದಾಳೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News