ಬಿಎಸ್‌ವೈರಿಂದ ಶಾಸಕ ಶಿವಳ್ಳಿಗೆ 5 ಕೋಟಿ ಆಮಿಷ: ದಿನೇಶ್‌ ಗುಂಡೂರಾವ್

Update: 2018-09-22 13:32 GMT

ಬೆಂಗಳೂರು, ಸೆ.22: ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷ ಬಿಜೆಪಿ ‘ಆಪರೇಷನ್ ಕಮಲ’ಕ್ಕೆ ಮುಂದಾಗಿರುವ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ ಆದಾಯ ತೆರಿಗೆ ಇಲಾಖೆ(ಐಟಿ)ಯವರು ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಒತ್ತಾಯಿಸಿದರು.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಶಾಸಕರ ಖರೀದಿಗೆ ಯತ್ನಿಸುತ್ತಿರುವ ಕುರಿತು ತನಿಖೆಯಾದರೆ ಸತ್ಯಾಂಶ ಹೊರಗೆ ಬರುತ್ತದೆ. ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ನಾವು ನೀಡಿರುವ ದೂರನ್ನು ಐಟಿಯವರು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಬಿಜೆಪಿಯವರು ಕೇಂದ್ರ ಸರಕಾರದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರ ಖರೀದಿಗೆ ಬೆಂಗಳೂರು ಸೇರಿದಂತೆ ವಿವಿಧೆಡೆ ಹಣ ಸಂಗ್ರಹ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇರವಾಗಿ ನಮ್ಮ ಪಕ್ಷದ ಕೆಲ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ಸಿ.ಎಸ್.ಶಿವಳ್ಳಿಗೆ ವಾಟ್ಸ್ ಆ್ಯಪ್ ಕಾಲ್ ಮಾಡಿ 5 ಕೋಟಿ ರೂ.ಗಳ ಆಮಿಷವನ್ನು ಒಡ್ಡಿದ್ದಾರೆ ಎಂದು ಅವರು ದೂರಿದರು.

ಮಲ್ಲೇಶ್ವರಂ ಶಾಸಕ ಡಾ.ಅಶ್ವಥ್‌ ನಾರಾಯಣ್, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ನಡೆಸುತ್ತಿರುವ ಪ್ರಯತ್ನಗಳಿಗೆ ಸಂಬಂಧಿಸಿದಂತೆ ನಮ್ಮ ಪಕ್ಷದ ಶಾಸಕರಾದ ಅನಿಲ್ ಚಿಕ್ಕಮಾದು, ಸಿ.ಎಸ್.ಶಿವಳ್ಳಿ ಹಾಗೂ ಇನ್ನಿತರರು ಪತ್ರಿಕಾ ಹೇಳಿಕೆಗಳನ್ನೆ ನೀಡಿದ್ದಾರೆ. ಆದರೂ, ಐಟಿ ಇಲಾಖೆಯವರು ಈ ವಿಷಯದಲ್ಲಿ ಯಾಕೆ ಮೌನವಹಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ದಿನೇಶ್‌ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ 18 ಶಾಸಕರು ನಮ್ಮ ಜೊತೆ ಬರುತ್ತಿದ್ದು, ಇನ್ನೆರಡು ದಿನಗಳಲ್ಲಿ ಸರಕಾರ ಬೀಳಿಸಿ, ಹೊಸ ಸರಕಾರ ರಚನೆ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಐಟಿ ಇಲಾಖೆಯವರು ಶಿವಳ್ಳಿ ಹಾಗೂ ಅನಿಲ್ ಚಿಕ್ಕಮಾದು ಅವರನ್ನು ಕರೆದು ವಿಚಾರಣೆ ಮಾಡಲಿ ಎಂದು ಅವರು ಹೇಳಿದರು.

ರಿಯಲ್‌ ಎಸ್ಟೇಟ್ ಮಾಫಿಯಾ, ಗೂಂಡಾಗಳು, ಫೈನಾನ್ಷಿಯರ್‌ಗಳಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ನಮ್ಮ ಶಾಸಕರನ್ನು ಮುಂಬೈ, ದಿಲ್ಲಿ ಹಾಗೂ ಗೋವಾಗೆ ಬರುವಂತೆ ಆಹ್ವಾನ ನೀಡಲಾಗುತ್ತಿದೆ. ಮಿಲಿಟರಿ ಭದ್ರತೆ ಒದಗಿಸುವುದು ಹಾಗೂ ಅಲ್ಲಿಂದ ಬೆಂಗಳೂರಿಗೆ ಮಿಲಿಟರಿ ವಿಮಾನದಲ್ಲಿ ಕರೆತರುವುದಾಗಿಯೂ ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು. ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಬಲ ಇಲ್ಲದೆ ಈ ರೀತಿಯ ಸಾಹಸಕ್ಕೆ ರಾಜ್ಯ ಬಿಜೆಪಿ ನಾಯಕರು ಕೈ ಹಾಕಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಆದರೆ, ಅವರ ಯಾವ ಪ್ರಯತ್ನವೂ ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದರು.

ಇದೊಂದು ರೀತಿಯ ಕೀಳುಮಟ್ಟದ ರಾಜಕಾರಣ. ಜನರಲ್ಲಿ ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ನಡೆಯುತ್ತಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಜನ ಈ ಬೆಳವಣಿಗೆಗಳನ್ನು ನೋಡುತ್ತಿದ್ದಾರೆ. ಕೇಂದ್ರ ಸರಕಾರವು ಈ ರೀತಿ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಸಹಕಾರ ನೀಡಿದರೆ, ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದು ಸಾಬೀತಾಗುತ್ತದೆ ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

ಬಿಜೆಪಿಯವರ ಅಧಿಕಾರ ದಾಹದ ಮುಖವಾಡ ಜನರ ಮುಂದೆ ಬಂದಿದೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲು ಎಲ್ಲ ರೀತಿಯ ಅನೈತಿಕ ಚಟುವಟಿಕೆಗಳಿಗೆ ಕೈ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಸುಭದ್ರವಾಗಿದ್ದು, ಇವರ ಆಮಿಷಗಳಿಗೆ ನಮ್ಮ ಶಾಸಕರು ಬಲಿಯಾಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ನೀಡಿರುವ ಎಲ್ಲ ಆಮಿಷಗಳನ್ನು ನಮ್ಮ ಶಾಸಕರು ತಿರಸ್ಕರಿಸಿದ್ದಾರೆ. ನಮ್ಮ ಶಾಸಕರ ಮೇಲೆ ನಮಗೆ ವಿಶ್ವಾಸವಿದೆ. ಎಂಟಿಬಿ ನಾಗರಾಜ್ ಮಧ್ಯಾಹ್ನ ನನ್ನ ಜೊತೆ ಮಾತುಕತೆ ನಡೆಸಿದ್ದಾರೆ. ಕೆಲವು ಮಾಧ್ಯಮಗಳು ಕಪೋಲಕಲ್ಪಿತ ಸುದ್ಧಿಗಳನ್ನು ಪ್ರಸಾರ ಮಾಡುತ್ತಿವೆ. ಸಚಿವ ಸ್ಥಾನಕ್ಕೆ ಎಲ್ಲರೂ ಪ್ರಯತ್ನ ಮಾಡುತ್ತಾರೆ. ಅಂತಿಮವಾಗಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದು ಅವರು ಹೇಳಿದರು.

ಸೆ.25ರಂದು ಸಂಜೆ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಸೆ.28ರಂದು ಮೇಯರ್ ಚುನಾವಣೆ ನಡೆಯಲಿದೆ. ಅ.4ರಂದು ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಎಲ್ಲ ಪ್ರಕ್ರಿಯೆಗಳು ಸುಸ್ಥಿರವಾಗಿ ನಡೆಯಲಿವೆ ಎಂದು ಅವರು ಹೇಳಿದರು.

ಬಿಬಿಎಂಪಿಯಲ್ಲೂ ಅಧಿಕಾರ ಹಿಡಿಯಲು ಪಕ್ಷೇತರ ಸದಸ್ಯರನ್ನು ಖರೀದಿ ಮಾಡಲು ಬಿಜೆಪಿ ಪ್ರಯತ್ನ ನಡೆಸಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕಾಗಿ ಎಷ್ಟು ಕೆಳಮಟ್ಟಿಗೆ ಇಳಿದಿದ್ದಾರೆ ನೋಡಿ ಎಂದು ದಿನೇಶ್‌ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News