ಎಸ್ಸಿ-ಎಸ್ಟಿ ನಿರುದ್ಯೋಗಿಗಳ ಆರ್ಥಿಕ ಪರಿವರ್ತನೆಗೆ ‘ಐರಾವತ’ ಸಹಕಾರಿ: ಸಚಿವ ಪ್ರಿಯಾಂಕ್ ಖರ್ಗೆ

Update: 2018-09-22 13:41 GMT

ಬೆಂಗಳೂರು, ಸೆ. 22: ರಾಜ್ಯ ಸರಕಾರ ರೂಪಿಸಿರುವ ‘ಐರಾವತ ಯೋಜನೆ’ ಒಂದು ವಿಶಿಷ್ಟ-ವಿಭಿನ್ನ ಪ್ರಯತ್ನವಾಗಿದೆ. ಈ ಯೋಜನೆ ಎಸ್ಸಿ-ಎಸ್ಟಿ ನಿರುದ್ಯೋಗಿ ಯುವಕ-ಯುವತಿಯರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪರಿವರ್ತನೆ ತರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಶನಿವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಉಬರ್ ಸಂಸ್ಥೆಯೊಂದಿಗೆ ಒಡಂಬಡಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರಗಳಲ್ಲಿ ಮನೆ ಬಾಗಿಲಿಗೆ ಟ್ಯಾಕ್ಸಿ ಸೌಲಭ್ಯ ಒದಗಿಸುತ್ತಿರುವ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಎಸ್ಸಿ-ಎಸ್ಟಿ ನಿರುದ್ಯೋಗಿಗಳ ಬದುಕು ಹಸನಾಗಿಸಲು ಸಮಾಜ ಕಲ್ಯಾಣ ಇಲಾಖೆ ಈ ಮಹತ್ವಯುತ ಯೋಜನೆಯನ್ನು ರೂಪಿಸಿದೆ ಎಂದರು.

ಯುವ ಜನಾಂಗ ಇಂತಹ ಅವಕಾಶಗಳ ಮೂಲಕ ತಮ್ಮ ಆರ್ಥಿಕ ಸ್ಥಿತಿಗತಿಯನ್ನು ಉತ್ತಮ ಪಡಿಸಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಈ ಯೋಜನೆಯಡಿ ಗರಿಷ್ಠ 5ಲಕ್ಷ ರೂ.ಸಹಾಯಧನ ನೀಡಲಾಗುವುದು ಎಂದರು.

ಮೊದಲ ಹಂತವಾಗಿ ಮುಖ್ಯನಗರ ಪ್ರದೇಶಗಳಾದ ಬೆಂಗಳೂರು, ಮೈಸೂರು ಹಾಗೂ ಮಂಗಳೂರು ನಗರಗಳಲ್ಲಿ ಈ ಯೋಜನೆಯನ್ನು ಉಬರ್ ಸಂಸ್ಥೆ ಸಹಯೋಗದೊಂದಿಗೆ ಆರಂಭಿಸಲಾಗುವುದು. ಕ್ರಮೇಣ ಉಬರ್ ಹಾಗೂ ಇನ್ನಿತರ ಟ್ಯಾಕ್ಸಿ ಕಂಪೆನಿಗಳ ಸಹಯೋಗದೊಂದಿಗೆ ಇನ್ನಿತರ ನಗರಗಳಿಗೂ ‘ಐರಾವತ’ ಸೇವೆಯನ್ನು ವಿಸ್ತರಿಸಲಾಗವುದು ಎಂದರು.

ಉದ್ಯೋಗ ಭರವಸೆ ನೀಡುವ ಅವಕಾಶ ಈ ಯೋಜನೆಯಡಿ ರೂಪಿಸಲಾಗಿದ್ದು, ಕ್ಯಾಬ್ ಕೊಳ್ಳಲು ಸಹಾಯಧನ ಪಡೆಯುವ ಮೂಲಕ ನಿರುದ್ಯೋಗಿಗಳು ತಾವೇ ಮಾಲಕರಾಗುವ ಉತ್ತಮ ಅವಕಾಶಗಳನ್ನು ಹೊಂದಿದೆ. ಈ ಯೋಜನೆಯಿಂದ ಎಸ್ಸಿ-ಎಸ್ಟಿ ನಿರುದ್ಯೋಗಿಗಳು ಸಾಮಾಜಿಕವಾಗಿ ಸದೃಢ ಹಾಗೂ ಆರ್ಥಿಕವಾಗಿಯೂ ಚೈತನ್ಯ ಹೊಂದಲಿದ್ದಾರೆ ಎಂದು ಹೇಳಿದರು.

ಎಸ್ಸಿಗಳಿಗೆ 3500 ವಾಹನಗಳನ್ನು ನೀಡಲಿದ್ದು, 175ಕೋಟಿ ರೂ. ಮೀಸಲಿಡಲಾಗಿದೆ. ಹಾಗೆಯೇ, ಎಸ್ಟಿಗಳಿಗೆ 1ಸಾವಿರ ಟ್ಯಾಕ್ಸಿ ಕೊಳ್ಳಲು 50 ಕೋಟಿ ರೂ.ಅನುದಾನ ತೆಗೆದಿರಿಸಲಾಗಿದೆ. ಇಲಾಖೆ ಮೂಲಕ ಈ ವರ್ಷ 4500ಮಂದಿಗೆ ಟ್ಯಾಕ್ಸಿ ಕೊಳ್ಳಲು 225 ಕೋಟಿ ರೂ.ಸಹಾಯಧನ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಉಬರ್ ಸಂಸ್ಥೆಯ ಅಧ್ಯಕ್ಷ ಪ್ರದೀಪ್ ಪರಮೇಶ್ವರನ್, ನಮ್ಮ ಸಂಸ್ಥೆಯು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ರೂಪಿಸಿರುವ ಈ ಯೋಜನೆಯಿಂದ ಸಂಪನ್ಮೂಲಗಳ ಮೂಲಕ ಫಲಾನುಭವಿಗಳಿಗೆ ಉದ್ಯಮಶೀಲ ಕ್ಷೇತ್ರವನ್ನು ಪರಿಚಯಿಸುತ್ತಿದೆ ಎಂದು ಅವರು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News