ಬೆಂಗಳೂರು-ಮೈಸೂರು 6 ಪಥದ ರಸ್ತೆ ಕಾಮಗಾರಿ ಮತ್ತಷ್ಟು ವಿಳಂಬ ಸಾಧ್ಯತೆ

Update: 2018-09-22 15:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.22: ಬೆಂಗಳೂರು-ವೆುಸೂರು ನಡುವೆ ನಿರ್ಮಾಣವಾಗಬೇಕಿದ್ದ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಆರು ಪಥದ ರಸ್ತೆ ಕಾಮಗಾರಿಗೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ದಿಲಿಪ್ ಬಿಲ್ಡ್ ಕಾನ್ ನಡುವೆ ಒಪ್ಪಂದ ಮಾಡಿಕೊಂಡು ಐದಾರು ತಿಂಗಳುಗಳೇ ಕಳೆದಿದ್ದರೂ, ಯೋಜನೆ ಪ್ರಗತಿ ಕಂಡಿಲ್ಲ. ಪ್ರಸ್ತುತವಿರುವ ನಾಲ್ಕು ಪಥದ ಎಕ್ಸ್‌ಪ್ರೆಸ್ ರಸ್ತೆಯಲ್ಲಿಯೇ ಆರು ಪಥಗಳನ್ನಾಗಿ ಮಾಡುವುದು ಕೇಂದ್ರ ಸರಕಾರದ ಯೋಜನೆಯಾಗಿದೆ.

ರಸ್ತೆ ಅಗಲ ಹೆಚ್ಚಳಕ್ಕೆ ಅರಣ್ಯ ಇಲಾಖೆಯಿಂದ ಕಡ್ಡಾಯ ಅನುಮತಿ ಪ್ರಮಾಣಪತ್ರ ಪಡೆಯಬೇಕು. ಆದರೆ, ಇದುವರೆಗೂ ಪ್ರಮಾಣ ಪತ್ರ ಸಿಕ್ಕಿಲ್ಲ. ಕೇಂದ್ರದ 4,915 ಕೋಟಿ ರೂಪಾಯಿಗಳ ಲಭ್ಯವಿರುವ ನಿಯಂತ್ರಿತ ರಸ್ತೆಯನ್ನು ವಾಹನಗಳು ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಕಾಮಗಾರಿ ವೇಗವಾಗಿ ಮುಗಿಯಲು 117 ಕಿಲೋ ಮೀಟರ್ ಉದ್ದದ ರಸ್ತೆಯನ್ನು ಎರಡು ಪ್ಯಾಕೇಜ್‌ಗಳಾಗಿ ವಿಭಜನೆಗೊಳಿಸಲಾಗಿದೆ. ಬೆಂಗಳೂರು-ನಿಡಘಟ್ಟ ವಿಭಾಗದಲ್ಲಿ 56 ಕಿಲೋ ಮೀಟರ್ ಮತ್ತು ನಿಡಘಟ್ಟ-ಮೈಸೂರು ವಿಭಾಗದಲ್ಲಿ 61 ಕಿಲೋ ಮೀಟರ್ ಇದೆ.

ಸರಕಾರ ಕರೆದಿದ್ದ ಟೆಂಡರ್‌ನಲ್ಲಿ ಭೋಪಾಲ್ ಮೂಲಕ ಘಟಕಕ್ಕೆ ಎರಡು ಪ್ಯಾಕೇಜ್ ಕಾಮಗಾರಿ ಪಡೆದಿದ್ದು, ಈ ಎರಡೂ ಯೋಜನೆಗಳಿಗೆ ಅಂದಾಜು 725 ಎಕ್ಟೇರ್ ಭೂಮಿ ಅಗತ್ಯವಿದೆ. ಸುಮಾರು ಶೇ.70 ರಷ್ಟು ಅಗತ್ಯ ಭೂಮಿಯನ್ನು ಹೆದ್ದಾರಿ ಪ್ರಾಧಿಕಾರ ಪಡೆದಿದೆ. ಆದರೆ, ಯೋಜನೆ ಆರಂಭ ಮಾಡುವ ಮೊದಲೇ ಶೇ.80 ರಷ್ಟು ಭೂಮಿಯನ್ನು ಪಡೆಯುವುದು ಕಡ್ಡಾಯ. ಹೀಗಾಗಿ, ರಾಮನಗರ ಮತ್ತು ಮಂಡ್ಯಗಳಲ್ಲಿ ಅರಣ್ಯ ಇಲಾಖೆಗೆ ಸೇರಿದ 30 ಎಕ್ಟೇರ್ ಜಮೀನಿನಲ್ಲಿ ರಸ್ತೆ ಹಾದುಹೋಗುತ್ತದೆ. ಆದರೆ, ಸೂಕ್ಷ್ಮ ವಲಯ ಎಂದು ಗುರುತಿಸಲ್ಪಟ್ಟಿದ್ದರೂ ಇಲ್ಲಿ ಜನರು ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ ಎಂದು ಸರಕಾರಿ ಮೂಲಗಳು ಹೇಳುತ್ತಿವೆ.

ಆರು ಪಥದ ರಸ್ತೆ ಕಾಮಗಾರಿಗೆ 30 ಹೆಕ್ಟೇರ್ ಭೂಮಿ ಬಳಸಿಕೊಳ್ಳಲು ಅರಣ್ಯ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸಿರು ನಿಶಾನೆ ತೋರಿಸಿದರೆ ಅಷ್ಟೇ ಯೋಜನೆ ಮುಂದುವರಿಯಬಹುದು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಮಧ್ಯೆ ಹಲವು ಸಭೆಗಳು ನಡೆದಿವೆ. ಆದರೆ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News