ಬೆಂಗಳೂರು ನಗರಾದ್ಯಂತ ಆರು ತಿಂಗಳಲ್ಲಿ ಉಚಿತ ವೈಫೈ- ಡಾ.ಜಿ. ಪರಮೇಶ್ವರ್

Update: 2018-09-23 12:18 GMT

ಬೆಂಗಳೂರು, ಸೆ.23: ಬೆಂಗಳೂರು ನಗರಾದ್ಯಂತ ಆರು ತಿಂಗಳೊಳಗಾಗಿ ಉಚಿತ ವೈಫೈ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ರವಿವಾರ ಗೋವಿಂದರಾಜ ನಗರದಲ್ಲಿ ಬಿಬಿಎಂಪಿ ಪಾಲಿಕೆ ಸೌಧ, ಅಟಲ್ ಜಿ ಕ್ರೀಡಾ ಸೌಧ, ಉಚಿತ ವೈಫೈ, ಕೆಂಪೇಗೌಡರ ಪ್ರತಿಮೆ, ಪ್ರಧಾನಮಂತ್ರಿ ಜನೌಷಧ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೋವಿಂದರಾಜು ನಗರದಲ್ಲಿ ಉಚಿತ ವೈಫೈ ಸೌಲಭ್ಯ ನೀಡಲಾಗಿದೆ. ಇದೇ ಮಾದರಿಯಲ್ಲಿ ಉಳಿದ 198 ವಾರ್ಡ್‌ಗಳಲ್ಲೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಇಂದು ಬೆಂಗಳೂರು ವಿಶ್ವದಲ್ಲೇ ಗುರುತಿಸಿಕೊಳ್ಳುತ್ತಿದೆ. ಆಧುನಿಕ ಸಿಟಿ ತಜ್ಞರನ್ನು ಮೀರಿ ಕೆಂಪೇಗೌಡರು ಬೆಂಗಳೂರು ಪಟ್ಟಣವನ್ನು ವಿನ್ಯಾಸ ಮಾಡಿಕೊಟ್ಟಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ಸಾಗುತ್ತಿದ್ದೇವೆ ಎಂದು ಅವರು ಹೇಳಿದರು.

ನಗರದಲ್ಲಿ ತೆರಿಗೆ ಸಂಗ್ರಹದ ಬಗ್ಗೆ ಕಠಿಣ ನಿರ್ಧಾರ ಕೈಗೊಂಡಿದ್ದು, ಈ ಸಾಲಿನಲ್ಲಿ 2.5 ಸಾವಿರ ಕೋಟಿ ತೆರಿಗೆ ಸಂಗ್ರಹ ಮಾಡದೇ ಇದ್ದರೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇತರೆ ಮಾರ್ಗಗಳ ಮೂಲಕವು ಸಂಪನ್ಮೂಲ ಕ್ರೂಢಿಕರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ನಗರದ ಅಂದ ಹಾಳು ಮಾಡುತ್ತಿದ್ದ ಫ್ಲೆಕ್ಸ್‌ಗಳನ್ನು ತೆರವು ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚಲು ಹಂತಹಂತವಾಗಿ ವೈಟ್‌ಟಾಪಿಂಗ್ ಮಾಡಲಾಗುತ್ತಿದೆ. ನಗರದ ಹೆಚ್ಚು ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಅನಧಿಕೃತವಾಗಿ ಎಳೆಯಲಾಗಿದೆ. ಇದನ್ನು ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ವಿ. ಸೋಮಣ್ಣ, ಮೇಯರ್ ಸಂಪತ್ ಕುಮಾರ್ ಮತ್ತಿತರರಿದ್ದರು.

‘ರಾಜ್ಯದಲ್ಲಿ ಮೈತ್ರಿ ಸರಕಾರ ಸುಭದ್ರವಾಗಿದೆ. ಸರಕಾರ ಬೀಳಲಿದೆ ಎಂದು ಕೆಲವರು ನಾಟಕ ನಡೆಸುತ್ತಾ ಇದ್ದಾರೆ. ಈ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆಡಳಿತ ಯಾರು ಮಾಡುತ್ತಾರೆ ಎನ್ನುವುದಕ್ಕಿಂತ ಸಾರ್ವಜನಿಕ ಕೆಲಸಗಳನ್ನು ವೇಗವಾಗಿ ಮಾಡಬೇಕು ಎನ್ನುವುದಷ್ಟೇ ಮುಖ್ಯ’

-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News