ಸರಕಾರದ ಕಡತಗಳ ನಾಪತ್ತೆ ಪ್ರಕರಣ: ಸಾರ್ವಜನಿಕರೇ ದೂರು ದಾಖಲಿಸಲು ಅವಕಾಶವಿದೆ; ವೆಂಕಟೇಶ್ ನಾಯಕ್

Update: 2018-09-23 15:26 GMT

ಬೆಂಗಳೂರು, ಸೆ.23: ಸರಕಾರದ ಕಡತಗಳು, ದಾಸ್ತಾವೇಜುಗಳು ಕಳೆದು ಹೋಗಿದ್ದಕ್ಕೆ ಸೂಕ್ತವಾದ ಮಾಹಿತಿಯಿದ್ದರೆ ಸಾರ್ವಜನಿಕರು ನೇರವಾಗಿ ಪೊಲೀಸರಿಗೆ ದೂರು ದಾಖಲಿಸಬಹುದು ಎಂದು ದಿಲ್ಲಿಯ ಸಿಎಚ್‌ಆರ್‌ಐನ ವೆಂಕಟೇಶ್‌ನಾಯಕ್ ಅಭಿಪ್ರಾಯಿಸಿದ್ದಾರೆ.

ರವಿವಾರ ಮಾಹಿತಿ ಹಕ್ಕು ಅಧ್ಯಯನ ಕೇಂದ್ರ, ಕರ್ನಾಟಕ ಮಾಹಿತಿ ಆಯೋಗದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ‘ಕರ್ನಾಟಕ ಸಾರ್ವಜನಿಕ ದಾಖಲೆಗಳ ಅಧಿನಿಯಮದ ಅನುಷ್ಠಾನ-ಒಂದು ಸವಾಲು’ ಕುರಿತ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಹಲವು ಸಂದರ್ಭಗಳಲ್ಲಿ ಸರಕಾರಿ ಕಚೇರಿಗಳಲ್ಲಿ ಕಡತಗಳು ನಾಪತ್ತೆಯಾಗುವುದನ್ನು ಕಾಣುತ್ತೇವೆ. ಈ ವೇಳೆ ಸರಕಾರಿ ಅಧಿಕಾರಿಗಳು ಅಥವಾ ಕಡತಗಳಿಗೆ ಸಂಬಂಧಿಸಿದವರು ದೂರು ದಾಖಲಿಸಬಹುದಿತ್ತು. ಅನಂತರ ಮಾಹಿತಿ ಆಯೋಗದಿಂದ ದೂರು ನೀಡಲು ಅವಕಾಶವಿತ್ತು. ಆದರೆ, ಇತ್ತೀಚಿಗೆ ದಿಲ್ಲಿ ಹೈಕೋರ್ಟ್ ಸರಕಾರ ಕಡತಗಳೇ ಸರಕಾರದ ಆಸ್ತಿ. ಅಂತಹ ಕಡತಗಳು ಕಾಣೆಯಾದ ಸಂದರ್ಭದಲ್ಲಿ ಸಮಗ್ರವಾದ ಮಾಹಿತಿಯಿದ್ದರೆ ಸಾರ್ವಜನಿಕರೇ ದೂರು ದಾಖಲಿಸಬಹುದು ಎಂದು ಸೂಚಿಸಿದೆ ಎಂದು ವಿವರಿಸಿದರು.

ಸಾರ್ವಜನಿಕರು ಮಾಹಿತಿ ಹಕ್ಕು ಅಡಿಯಲ್ಲಿ ದಾಖಲೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದಾಗ ಕಡತಗಳು ಕಾಣೆಯಾಗಿದೆ ಎಂದು ಸಬೂಬು ನೀಡಿದರೆ, ಅದರ ಮಾಹಿತಿ ಪಡೆದು ದೂರು ಸಲ್ಲಿಸಬಹುದಾಗಿದೆ. ಮೊದಲಿನಿಂದಲೂ ಮಾಹಿತಿ ಕೇಳಿದರೆ ಮಾಹಿತಿ ನೀಡಲು ಸಾಧ್ಯವಿಲ್ಲ ಎನ್ನುವ ಬದಲಿಗೆ ಕಡತ ನಾಪತ್ತೆಯಾಗಿದೆ ಎಂದು ಸಬೂಬು ನೀಡುತ್ತಿದ್ದರು. ಆದರೆ, ಈಗ ಇಂತಹ ಸಬೂಬು ನೀಡಲು ಸಾಧ್ಯವಿಲ್ಲ. ಮಾಹಿತಿ ನೀಡಲಾಗದ ಹಾಗೂ ಬಹಿರಂಗಪಡಿಸಲು ಸಾಧ್ಯವಾಗದ ಕಡತಗಳು ಯಾವುವು ಎಂಬುದನ್ನು ಪ್ರಶ್ನಿಸಿದ್ದೇವೆ ಎಂದು ಅವರು ತಿಳಿಸಿದರು.

ಸರಕಾರಿ ಅಧಿಕಾರಿಗಳು ರಕ್ಷಣಾತ್ಮಕ ಹಾಗೂ ಗೌಪ್ಯ ವಿಷಯ ಎಂದು ಹೇಳಿ ಕಡತಗಳ ಮಾಹಿತಿ ನೀಡಲು ನಿರಾಕರಿಸುತ್ತಾರೆ ಎಂದ ಅವರು, ಕಡತಗಳ ನಾಶ ಮಾಡುವ ಪ್ರಕ್ರಿಯೆ ಅಪಾಯಕಾರಿ ಬೆಳವಣಿಗೆ. ಈ ನಿಟ್ಟಿನಲ್ಲಿ ಕಡತಗಳ ನಾಶವಾದರೆ ಸಾರ್ವಜನಿಕರು ದೂರು ನೀಡಲು ಅವಕಾಶ ಸಲ್ಲಿಸಿರುವುದು ಉತ್ತಮ ಬೆಳವಣಿಗೆ. ಈ ಮೂಲಕ ಅಧಿಕಾರಿಗಳು ಕಡತವಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರತಿಯೊಬ್ಬ ಜನಪ್ರತಿನಿಧಿಗಳಿಗೂ ತಮ್ಮದೇ ಆದ ಜವಾಬ್ದಾರಿ ಇರುತ್ತದೆ. ಅದೇ ರೀತಿಯಲ್ಲಿ ಸರಕಾರಿ ವ್ಯವಸ್ಥೆಯಲ್ಲಿ ಸಚಿವರಾಗಿರುವ ಪ್ರತಿಯೊಬ್ಬರೂ ತಮ್ಮ ಖಾತೆ ನಿರ್ವಹಣಾ ಜವಾಬ್ದಾರಿ ಹೊಂದಿರುತ್ತಾರೆ. ಅವರ ಇಲಾಖೆಯ ಖರ್ಚು-ವೆಚ್ಚದ ಕಡತವನ್ನು ಪರಿಶೀಲಿಸುವ ಅವಕಾಶವಿದೆ. ಆದರೂ, ಇತ್ತೀಚಿನ ಹಣಕಾಸು ಸಚಿವರು ಯಾವುದೇ ಕಡತ ಪರಿಶೀಲನೆ ನಡೆಸಿಲ್ಲ ಎಂದರೆ, ಅದರ ಪರಿಣಾಮ ಸಾರ್ವಜನಿಕ ವಿವೇಚನೆ ಬಿಟ್ಟಿದ್ದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಮಾಹಿತಿ ಆಯೋಗದ ಮಾಜಿ ಆಯುಕ್ತ ಶೈಲೇಶ್ ಗಾಂಧಿ, ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಎಲ್.ಕೃಷ್ಣ ಮೂರ್ತಿ, ಮಾಜಿ ಕಾರ್ಮಿಕ ಸಚಿವ ಎಸ್.ಕೆ.ಕಾಂತ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಸರಕಾರಿ ಇಲಾಖೆಗಳಿಗೆ ಮಾಹಿತಿ ನೀಡುವಂತೆ ಹಲವಾರು ಬಾರಿ ಪತ್ರ ಬರೆಯುತ್ತೇವೆ. ಅದನ್ನು ಕಾಗದದ ಮೂಲಕ ದಾಖಲೆ ನೀಡಲು ವಿಳಂಬವಾಗುತ್ತದೆ. ಹೀಗಾಗಿ, ಎಲ್ಲ ದಾಖಲೆಗಳನ್ನು ಡಿಜಿಟಲೀಕರಣಕ್ಕೆ ಒಳಪಡಿಸುವ ಮೂಲಕ ಮಾಹಿತಿ ನೀಡಲು ಕ್ರಮಗಳನ್ನು ಕೈಗೊಳ್ಳಬೇಕು. ಇದರಿಂದ ತ್ವರಿತವಾಗಿ ಮಾಹಿತಿ ನೀಡಲು ಸಾಧ್ಯವಾಗುತ್ತದೆ.

- ಶೈಲೇಶ್ ಗಾಂಧಿ,ಕೇಂದ್ರ ಮಾಹಿತಿ ಆಯೋಗದ ಮಾಜಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News