5,000 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣ: ನಿತಿನ್ ಸಂದೇಸರ ನೈಜೀರಿಯಾಗೆ ಪರಾರಿ?

Update: 2018-09-24 06:00 GMT

ಹೊಸದಿಲ್ಲಿ, ಸೆ.24: ಐದು ಸಾವಿರ ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿದ್ದ ಗುಜರಾತ್ ರಾಜ್ಯದ ವಡೋದರ ಮೂಲದ ಸ್ಟರ್ಲಿಂಗ್ ಬಯೋಟೆಕ್ ಮಾಲಕ ನಿತಿನ್ ಸಂದೇಸರ ಅವರನ್ನು ದುಬೈಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಂಗಳ ಹಿಂದೆ ವರದಿಗಳು ತಿಳಿಸಿದ್ದವು. ಆದರೆ ಇದೀಗ ಲಭ್ಯ ಮಾಹಿತಿಯಂತೆ ನಿತಿನ್ ಸಂಯುಕ್ತ ಅರಬ್ ಸಂಸ್ಥಾನದಲ್ಲಿಲ್ಲವೆಂದು ತಿಳಿದು  ಬಂದಿದ್ದು, ಅವರು ನೈಜೀರಿಯಾಗೆ ಪಲಾಯನಗೈದಿರುವ ಸಾಧ್ಯತೆಯಿದೆ  ಎನ್ನಲಾಗಿದೆ.

ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಉನ್ನತ ಮೂಲಗಳ ಪ್ರಕಾರ ನಿತಿನ್ ಮತ್ತವರ ಕುಟುಂಬ ಸದಸ್ಯರಾದ ಅವರ ಸೋದರ ಚೇತನ್ ಸಂದೇಸರ ಹಾಗೂ ಅವರ ನಾದಿನಿ ದೀಪ್ತಿಬೆನ್ ಸಂದೇಸರ ಅವರು ನೈಜೀರಿಯಾದಲ್ಲಿ  ಅಡಗಿಕೊಂಡಿದ್ದಾರೆ. ಭಾರತವು  ನೈಜೀರಿಯಾದೊಂದಿಗೆ ಯಾವುದೇ ಗಡೀಪಾರು ಒಪ್ಪಂದ ಹೊಂದಿಲ್ಲದೇ ಇರುವುದರಿಂದ ಅವರನ್ನು ಭಾರತಕ್ಕೆ ಕರೆತರುವುದು ಕಷ್ಟಕರವೆಂಬ ಮಾಹಿತಿಯಿದೆ.

ನಿತಿನ್ ಸಂದೇಸರ ಅವರನ್ನು ಆಗಸ್ಟ್ ಎರಡನೇ ವಾರದಲ್ಲಿ ದುಬೈಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂಬ ಸುದ್ದಿ ತಪ್ಪು. ಅವರು ಅದಕ್ಕಿಂತ ಮೊದಲೇ ನೈಜೀರಿಯಾಗೆ ಪಲಾಯನಗೈದಿರಬಹುದು ಎಂದು  ತಮ್ಮ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ ನಿತಿನ್ ಸಂದೇಸರ ಅಥವಾ ಅವರ ಕುಟುಂಬದವರು ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಕಂಡು ಬಂದರೆ ಅವರನ್ನು ಬಂಧಿಸುವಂತೆ ಅಲ್ಲಿನ ಸರಕಾರಕ್ಕೆ ಮನವಿ ಮಾಡಲಾಗುವುದು  ಹಾಗೂ ಅವರ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವ ಬಗ್ಗೆಯೂ  ಯೋಚಿಸಲಾಗುತ್ತಿದೆ. ನಿತಿನ್ ಸಂದೇಸರ ಕುಟುಂಬ ಭಾರತೀಯ ಪಾಸ್‍ಪೋರ್ಟ್ ಉಪಯೋಗಿಸಿ ನೈಜೀರಿಯಾಗೆ ಪಯಣಿಸಿದೆಯೇ ಅಥವಾ ಬೇರೆ ದೇಶದ ದಾಖಲೆಗಳೊಂದಿಗೆ ಪಯಣಿಸಿದೆಯೇ ಎಂಬುದು ತಿಳಿದಿಲ್ಲ.

ಸ್ಟರ್ಲಿಂಗ್ ಬಯೋಟೆಕ್ ಕಂಪೆನಿಯ ನಿರ್ದೇಶಕರಾದ ನಿತಿನ್, ಚೇತನ್, ದೀಪ್ತಿ ಸಂದೇಸರ, ರಾಜಭೂಷಣ್ ಓಂಪ್ರಕಾಶ್ ದೀಕ್ಷಿತ್, ವಿಲಾಸ್ ಜೋಶಿ, ಚಾರ್ಟಡ್ ಅಕೌಂಟೆಮಟ್ ಹೇಮಂತ್ ಹಾಥಿ, ಮಾಜಿ ಆಂಧ್ರ ಬ್ಯಾಂಕ್ ನಿರ್ದೇಶಕ ಅನೂಪ್ ಗರ್ಗ್ ಹಾಗೂ ಇತರ  ವ್ಯಕ್ತಿಗಳ ವಿರುದ್ಧ ಬ್ಯಾಂಕುಗಳಿಗೆ ರೂ 5,000 ಕೋಟಿ ವಂಚನೆಗೈದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿತಿನ್ ಸಂದೇಸರ ಅವರ ಕುಟುಂಬವು ಭಾರತ ಮತ್ತು ವಿದೇಶಗಳಲ್ಲಿ 300ಕ್ಕೂ ಅಧಿಕ ಬೇನಾಮಿ ಕಂಪೆನಿಗಳನ್ನು ಸ್ಥಾಪಿಸಿ ಬ್ಯಾಂಕ್ ಸಾಲ ಪಡೆದಿದ್ದು, ಈ ಬೇನಾಮಿ ಕಂಪೆನಿಗಳನ್ನು ಸ್ಟರ್ಲಿಂಗ್ ಸಮೂಹದ ಬೇರೆ ಕಂಪೆನಿಗಳ ಡಮ್ಮಿ ನಿರ್ದೇಶಕರುಗಳ ಹೆಸರಿನಲ್ಲಿ ಸಂದೇಸರ ಕುಟುಂಬ ನಿಯಂತ್ರಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News